ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ಚೈನ್ ತುಂಡಾಗಿದೆ. ಪರಿಣಾಮ, ಗೇಟ್ ಕಿತ್ತುಕೊಂಡು ಹೋಗಿದ್ದು, ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಒಟ್ಟು 105 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಿಂದ ಈಗ 60 ಟಿಎಂಸಿ ನೀರನ್ನು ನದಿಗೆ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವರದಿಯಾಗಿದೆ.
1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಜಲಾಶಯದಲ್ಲಿ ಇದೇ ಮೊದಲ ಬಾರಿಗೆ ಚೈನ್ ಕಟ್ಟಾಗಿದ್ದು, ಗೇಟ್ ಕಿತ್ತುಕೊಂಡು ಹೋಗಿದೆ. ತುಂಗಭದ್ರಾ ಜಲಾಶಯವು ದೇಶದ ಅತಿದೊಡ್ಡ ಕಲ್ಲಿನ ಅಣೆಕಟ್ಟು ಎಂಬ ಖ್ಯಾತಿಯನ್ನು ಪಡೆದಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳು ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ನೀರೊದಗಿರುವ ನೀರಿನ ಮೂಲವಾಗಿದೆ.
ತುಂಡಾಗಿರುವ ಚೈನ್ ರಿಪೇರಿ ಮಾಡಲು, ಗೇಟ್‌ನ ತಳಮಟ್ಟದವರೆಗೆ ಇರುವ ನೀರು ಖಾಲಿಯಾಗಬೇಕಿದೆ. ಆ ವೇಳೆಗೆ ಕನಿಷ್ಠ 60 ಟಿಎಂಸಿ ನೀರು ಖಾಲಿಯಾಗಲಿದೆ. ಪ್ರತಿದಿನ 2 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.