- ಕುಮಾರಸ್ವಾಮಿ ನಮ್ಮನ್ನು ಎಂದಾದರೂ ಹೊಗಳಲು ಸಾಧ್ಯವೇ?
- ‘ಬಿಜೆಪಿಯವರು ಮೊದಲು ಮನೆ ದೇವರುಗಳ ಮೇಲೆ ಆಣೆ ಮಾಡಲಿ’
ವಿರೋಧ ಪಕ್ಷದಲ್ಲಿರುವ ಎಚ್ ಡಿ ಕುಮಾರಸ್ವಾಮಿ ನಮ್ಮನ್ನು ಎಂದಾದರೂ ಹೊಗಳಲು ಸಾಧ್ಯವೇ? ಅವರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ನಮ್ಮ ಸರ್ಕಾರ ಟೇಕಾಫ್ ಆಗಿ ಸಾವಿರಾರು ಕಿಲೋಮೀಟರ್ ಮುಂದೆ ಹೋಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ರಾಮನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಟೀಕೆ ಮಾಡುವವರು ಮಾಡಲಿ. ವಿರೋಧ ಪಕ್ಷದವರ ಕೆಲಸವೇ ಅದು” ಎಂದರು.
“ಭ್ರಷ್ಟಾಚಾರ ಆರೋಪ ಕುರಿತು ಮನೆ ದೇವರ ಮೇಲೆ ಆಣೆ ಮಾಡಲಿ ಎನ್ನುವ ಬಿಜೆಪಿಯವರು, ತಮ್ಮ ಕಾಲದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಮೊದಲು ಮನೆ ದೇವರುಗಳ ಮೇಲೆ ಆಣೆ ಮಾಡಿ ತೋರಿಸಲಿ. ಬಿಜೆಪಿಯೊಳಗೆ ಶಾಸಕ ಸಿ ಎನ್ ಅಶ್ವತ್ಥನಾರಾಯಣ ಮಾತಿಗೆ ಕಿಮ್ಮತ್ತಿಲ್ಲ. ಹೀಗಿರುವಾಗ ಉಳಿದವರು ಕಿಮ್ಮತ್ತು ಕೊಡುತ್ತಾರಾ?” ಎಂದು ಕುಟುಕಿದರು.
ಮೇಕೆದಾಟು ಯೋಜನೆ
“ಮೇಕೆದಾಟು ಯೋಜನೆಯಿಂದ ಯಾರಿಗೂ ಸಮಸ್ಯೆ ಇಲ್ಲ. ಯಾವುದೇ ಸರ್ಕಾರವಿದ್ದರೂ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಈಗ ಅವರು ಕೋರ್ಟ್ ಮೋರೆ ಹೋಗಿದ್ದಾರೆ. ನಾವು ಸಹ ಕೋರ್ಟ್ ಮೂಲಕವೇ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಮುನಿಯಪ್ಪ ಅವರದು ವೈಯಕ್ತಿಕ ಅಭಿಪ್ರಾಯ
“ಎರಡು ವರ್ಷದ ಬಳಿಕ ಹಿರಿಯ ಸಚಿವರು ಕಿರಿಯರಿಗೆ ಅವಕಾಶ ನೀಡಬೇಕು ಎಂಬುದು ಸಚಿವ ಮುನಿಯಪ್ಪ ಅವರ ವೈಯಕ್ತಿಕ ಅಭಿಪ್ರಾಯ. ಹೊಸಬರಿಗೆ ಅವಕಾಶ ನೀಡುವ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ” ಎಂದರು.