ಈಶ್ವರ ಬಿ. ಖಂಡ್ರೆ ಅವರು ಕೊಡಗು ಜಿಲ್ಲೆ, ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ದುರಂತ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ಸೂಚನೆ ನೀಡಿದ್ದಾರೆ.
ದುಬಾರೆ ಶಿಬಿರದಲ್ಲಿ ಎರಡು ಸಾಕಾನೆಗಳಾದ ಕಂಜನ್ ಮತ್ತು ಜಯಮಾರ್ತಾಂಡ ನಡುವೆ ಸ್ನಾನ ಮಾಡುವ ವೇಳೆ ಏಕಾಏಕಿ ಕಾದಾಟ ನಡೆದಿದ್ದು, ಈ ಸಂದರ್ಭ ಆಯತಪ್ಪಿ ಬಿದ್ದ ಆನೆಯ ಕೆಳಗೆ ಸಿಲುಕಿ ತಮಿಳುನಾಡು ಮೂಲದ ಜೋನ್ಸಿ (33) ಮೃತಪಟ್ಟಿದ್ದಾರೆ. ಈ ದುರ್ಘಟನೆಗೆ ಸಚಿವರು ತೀವ್ರ ವಿಷಾದ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ಪಡೆದ ಸಚಿವರು, ರಾಜ್ಯದಲ್ಲಿನ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ತಕ್ಷಣದಿಂದಲೇ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.) ಜಾರಿಗೆ ತರಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇನ್ನುಮುಂದೆ ಪ್ರವಾಸಿಗರು ಆನೆಗಳ ಸಮೀಪ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಮಾತ್ರ ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ.
ಇದೇ ವೇಳೆ, ಯಾವುದೇ ಕಾರಣಕ್ಕೂ ಪ್ರವಾಸಿಗರು ಆನೆಗಳೊಂದಿಗೆ ಸೆಲ್ಫಿ ಅಥವಾ ಫೋಟೋ ತೆಗೆಸಿಕೊಳ್ಳುವುದು, ಆನೆಗಳಿಗೆ ಮೈತೊಳೆಯುವುದು, ಅಥವಾ ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಆಹಾರ ನೀಡುವುದಕ್ಕೆ ಅವಕಾಶ ಕೊಡಬಾರದು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾಕಾನೆಗಳಾದ ಕಂಜನ್ ಮತ್ತು ಜಯಮಾರ್ತಾಂಡ ಸ್ನಾನ ಮಾಡುವ ವೇಳೆ ಪರಸ್ಪರ ಕಾದಾಟ ನಡೆಸಿದ ಸಂದರ್ಭದಲ್ಲಿ, ಮಾವುತರು ನಿಯಂತ್ರಿಸಲು ಪ್ರಯತ್ನಿಸಿದರೂ ಕಂಜನ್ ಆನೆ ಮುನ್ನುಗ್ಗಿ ಜಯಮಾರ್ತಾಂಡಕ್ಕೆ ಗುದ್ದಿದ ಪರಿಣಾಮ ಆನೆ ಆಯತಪ್ಪಿ ಬಿದ್ದಿದ್ದು, ಅದರ ಕೆಳಗೆ ಮಹಿಳೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಯಾರೂ ಊಹಿಸದ ರೀತಿಯಲ್ಲಿ ನಡೆದಿದ್ದು, ಇದರ ಕುರಿತು ಸಮಗ್ರ ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.
ವನ್ಯಜೀವಿಗಳನ್ನು ಎಷ್ಟೇ ಪಳಗಿಸಿದ್ದರೂ ಅವುಗಳ ಸ್ವಭಾವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಪ್ರವಾಸಿಗರು ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?ಕುಶಾಲನಗರದ ದುಬಾರೆಯಲ್ಲಿ ದುರ್ಘಟನೆ: ಸಾಕಾನೆ ಕಾಳಗದಲ್ಲಿ ಮಹಿಳೆ ಸಾವು
ಮೃತಪಟ್ಟ ಮಹಿಳೆ ಜೋನ್ಸಿಯ ನೇತ್ರದಾನ ಮಾಡುವ ಮೂಲಕ ಪತಿ ಜೋಯಲ್ ಮಾನವೀಯತೆ ಮೆರೆದಿದ್ದಾರೆ.




