ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ. ವೆಂಕಟೇಶ್ ಅವರು ಶನಿವಾರ ಬೆಳಿಗ್ಗೆ ಚಾಮರಾಜನಗರಕ್ಕೆ ಆಗಮಿಸಿ, ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮತ್ತು ಅಧಿಕಾರಿಗಳೊಂದಿಗೆ ಪಟ್ಟಣದ 1ನೇ ವಾರ್ಡಿನ ಸೋಮವಾರಪೇಟೆ ಹಾಗೂ 2ನೇ ವಾರ್ಡಿನ ಗಾಳೀಪುರ ಬಡಾವಣೆಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಪೂರೈಕೆ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು.
ಒಂದನೇ ವಾರ್ಡಿನ ಸೋಮವಾರಪೇಟೆ ಬಡಾವಣೆಯ ಹೊರಭಾಗದಲ್ಲಿರುವ ಹಂದಿಜೋಗಿ ಕಾಲೋನಿಗೆ ಭೇಟಿ ನೀಡಿದ ಸಚಿವರು, ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿದೆಯೇ ಎಂಬುದರ ಕುರಿತು ನಿವಾಸಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಸ್ಥಳೀಯರು, “ಕುಡಿಯುವ ನೀರು ನಿಯಮಿತವಾಗಿ ಸರಬರಾಜಾಗುತ್ತಿಲ್ಲ. ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಅದು ಸಾಕಾಗುತ್ತಿಲ್ಲ. ಖಾಸಗಿಯವರು ನಾವು ವಾಸಿಸುತ್ತಿರುವ ಜಾಗ ತೆರವುಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮನೆಗಳ ಅವಶ್ಯಕತೆ ಇದೆ,” ಎಂದು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ. ವೆಂಕಟೇಶ್ ಅವರು, ಜನರಿಗೆ ಆದ್ಯತೆಯ ಮೇರೆಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು. ಯಾವುದೇ ಕಾರಣಕ್ಕೂ ನೀರಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಹೆಚ್ಚಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಂದಿಜೋಗಿ ಸಮುದಾಯದ ಜನರಿಗೆ ಮನೆ ನಿರ್ಮಾಣಕ್ಕಾಗಿ ಉತ್ತುವಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಲಾಗಿದ್ದು, ಸದ್ಯದಲ್ಲೇ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.
ಬಳಿಕ ಸೋಮವಾರಪೇಟೆ ಹಾಗೂ ಗಾಳೀಪುರ ಬಡಾವಣೆಗಳಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವರು, ಅಲ್ಲಿನ ನಿವಾಸಿಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಿ ಅಹವಾಲುಗಳನ್ನು ಸ್ವೀಕರಿಸಿದರು. “ಮೂರು ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜಾಗುತ್ತಿದೆ. ಹೆಚ್ಚುವರಿ ಬೋರ್‌ವೆಲ್ ಕೊರೆಸಬೇಕು. ಕಸ ಸಂಗ್ರಹಣಾ ವಾಹನ ವಾರಕ್ಕೊಮ್ಮೆಯಾದರೂ ಬರಬೇಕು. ಚರಂಡಿಗಳು ಸ್ವಚ್ಛತೆ ಇಲ್ಲದೆ ದುರ್ವಾಸನೆಯಿಂದ ಕೂಡಿವೆ,” ಎಂದು ಸ್ಥಳೀಯರು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಡದಿ ಟೌನ್‌ಶಿಪ್-ಗುಡುಮಾದನಹಳ್ಳಿ ನಿಮಾನ್ಸ್ ಯೋಜನೆ ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ: ಬಡಗಲಪುರ ನಾಗೇಂದ್ರ
ಸಚಿವರು ಅಧಿಕಾರಿಗಳಿಗೆ, “ಜನರು ಹಾಗೂ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಾರದಂತೆ ಕ್ರಮವಹಿಸಬೇಕು. ಬಡಾವಣೆಗಳ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು,” ಎಂದು ಸೂಚನೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಆಶಾ ಕಾರ್ಯಕರ್ತೆಯರಿಗೆ ₹264.14 ಕೋಟಿ ಬಾಕಿ ಪ್ರೋತ್ಸಾಹ ಧನ ಬಿಡುಗಡೆ: ಬಗೆಹರಿಯದ ʼಆಶಾ ಸಾಫ್ಟ್ʼ ತಾಂತ್ರಿಕ ದೋಷ
ಭೇಟಿ ವೇಳೆ ಜಿಲ್ಲಾಧಿಕಾರಿ ಶ್ರೀರೂಪ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ , ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ವೆಂಕಟೇಶ್ ಸೇರಿದಂತೆ ಹಲವರು ಇದ್ದರು.




