“ರಾಜ್ಯಾದ್ಯಂತ ಪರವಾನಿಗೆ ಭೂಮಾಪಕರ ಅನಿರ್ಧಿಷ್ಟಾವಧಿ ಮುಷ್ಕರದಿಂದ ಭೂಮಾಪನ ಸ್ಥಗಿತ ಹಾಗೂ ವಿಳಂಬದಿಂದಾಗಿ ರೈತರು ಹಾಗೂ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಗಿದ್ದು, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾವಸ್ತುಗಳು ಸಿಗದೇ ಯೂರಿಯಾ ರಸಗೊಬ್ಬರ ಉತ್ಪಾದನೆ ಕುಂಠಿತಗೊಂಡು ಕೊರತೆ ಉಂಟಾಗಿದೆ. ಸರ್ಕಾರ ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ರೈತ ಸಂಘವು ಹೋರಾಟ ರೂಪಿಸಲಿದೆ” ಎಂದು ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಎಚ್ಚರಿಸಿದರು.
ಶಿವಮೊಗ್ಗ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಫೆಬ್ರವರಿ 2026ರಿಂದ ಪರವಾನಿಗೆ ಭೂಮಾಪಕರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ವೆ, ಹದ್ದುಬಸ್ತು, ಪೋಡಿ ಮುಕ್ತ ಅಭಿಯಾನ, ನ್ಯಾಯಾಲಯ ಹಾಗೂ ತಕರಾರು ಪ್ರಕರಣಗಳ ವಿಲೇವಾರಿ ಕೆಲಸಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ ಎಂದು ಹೇಳಿದರು.
ಸಬ್‌ರಿಜಿಸ್ಟರ್ ಕಚೇರಿಗಳಲ್ಲಿ ಕ್ರಯಪತ್ರ, ದೀಡು ಪತ್ರ, ಹಿಸ್ಸಾ ಪಾರಿಕತ್ತು, ನಿವೇಶನ ಹಂಚಿಕೆ ಸೇರಿದಂತೆ ಅನೇಕ ಕೆಲಸಗಳು ಸ್ಥಗಿತಗೊಂಡಿದ್ದು, ರೈತರು ಮತ್ತು ಸಾರ್ವಜನಿಕರು ಇಲಾಖೆಗಳ ಸುತ್ತ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾದ ನಂತರ ಸರ್ವೆ ಹಾಗೂ ಹದ್ದುಬಸ್ತು ಕಾರ್ಯಗಳಿಗೆ ಮತ್ತಷ್ಟು ಅಡಚಣೆ ಉಂಟಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಸರ್ಕಾರಿ ಭೂಮಾಪಕರ ಕೊರತೆಯಿಂದ ಕೆಲಸದ ಒತ್ತಡ ಕಡಿಮೆ ಮಾಡಲು ಪರವಾನಿಗೆ ಭೂಮಾಪಕರನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಸರ್ಕಾರ ಕಾಲಕಾಲಕ್ಕೆ ನೇಮಕಾತಿ ಮಾಡದೇ ಇರುವುದರಿಂದ ಇಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಭೂಮಾಪಕರ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರ ಕೊರತೆಯ ಕುರಿತು ಮಾತನಾಡಿದ ಅವರು, “ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯಿಂದ ಯುರಿಯಾ ಹಾಗೂ ಡಿ.ಎ.ಪಿ ಸೇರಿದಂತೆ ರಸಗೊಬ್ಬರಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರತಕ್ಕೆ ಅಗತ್ಯವಿರುವ ಯುರಿಯಾ ಮತ್ತು ಡಿ.ಎ.ಪಿ ಗೊಬ್ಬರದ ಬಹುಪಾಲು ಕತಾರ್, ಓಮನ್ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಿಂದ ಬರುತ್ತಿದ್ದು, ಕಚ್ಚಾ ವಸ್ತುಗಳ ಕೊರತೆಯಿಂದ ಉತ್ಪಾದನೆ ಕಡಿಮೆಯಾಗಿದೆ. ಮುಂಗಾರು ಹಂಗಾಮಿಗೆ ದೇಶಕ್ಕೆ ಸುಮಾರು 2 ಕೋಟಿ ಟನ್ ಯುರಿಯಾ ಅಗತ್ಯವಿದ್ದು, ಪ್ರಸ್ತುತ ಶೇ.40 ರಿಂದ 50 ರಷ್ಟು ಮಾತ್ರ ಗೊಬ್ಬರ ಲಭ್ಯವಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಲಭ್ಯವಿರುವ ಗೊಬ್ಬರವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಹೆಚ್ಚುವರಿ ಗೊಬ್ಬರವನ್ನು ತುರ್ತಾಗಿ ತರಿಸಿಕೊಳ್ಳಬೇಕು. ರಾಜ್ಯಾದ್ಯಂತ ಬಗರ್‌ಹುಕುಂ ರೈತರು ಸಹ ಬೆಳೆ ಬೆಳೆದಿರುವುದರಿಂದ ಅವರಿಗೆ ಸಹ ಗೊಬ್ಬರ ವಿತರಿಸಬೇಕು” ಎಂದು ಒತ್ತಾಯಿಸಿದರು.
“ಯೂರಿಯಾ ಹಾಗೂ ಡಿ.ಎ.ಪಿ ಕೊರತೆಯಿಂದ ರೈತರು ಬಿತ್ತನೆ ಕಾರ್ಯ ಕೈಗೊಳ್ಳಲು ಸಾಧ್ಯವಾಗದೆ ಆಹಾರ ಉತ್ಪಾದನೆ ಕುಸಿತವಾಗುವ ಅಪಾಯವಿದೆ. ಗೊಬ್ಬರದ ಕೊರತೆಯನ್ನು ದುರುಪಯೋಗಪಡಿಸಿಕೊಂಡು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ಗೊಬ್ಬರ ಅಂಗಡಿಯ ಮುಂದೆ ದಾಸ್ತಾನು ವಿವರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವೇತನ ಹಿಂಬಾಕಿ, ಬೇಡಿಕೆ ಈಡೇರಿಕೆಗಾಗಿ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಮುಷ್ಕರ
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಾಧ್ಯಕ್ಷ ಕೆ. ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಭದ್ರಾವತಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಬಿ ಹನುಮಂತಪ್ಪ, ತಾಲೂಕು ಉಪಾಧ್ಯಕ್ಷ ಮಂಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.





