ಮುಂಡಗೋಡ: ಮಳೆಗಾಲದಲ್ಲಿ ಅಡಿಕೆ ತೋಟಗಳಲ್ಲಿ ರೋಗಬಾಧೆ, ನೀರು ನಿಲ್ಲುವಿಕೆ ಹಾಗೂ ಇತರ ಸಮಸ್ಯೆಗಳನ್ನು ತಡೆಗಟ್ಟಲು ರೈತರು ಮೇ-ಜೂನ್ ತಿಂಗಳಲ್ಲಿಯೇ ಅಗತ್ಯ ಮುಂಗಾರು ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀ ಕೃಷ್ಣಾ ಟಿ. ಕುಳ್ಳೂರ ಅವರು ಸಲಹೆ ನೀಡಿದ್ದಾರೆ.
ಅಡಿಕೆ ತೋಟದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದ್ದು, ಒಣಗಿದ ಹಾಗೂ ರೋಗಬಾಧಿತ ಗರಿಗಳು ಮತ್ತು ಕಾಯಿಗಳನ್ನು ಕಿತ್ತು ಸುಟ್ಟುಹಾಕಬೇಕು. ಬುಡದ ಸುತ್ತ ಎರಡು ರಿಂದ ಮೂರು ಅಡಿ ವ್ಯಾಪ್ತಿಯಲ್ಲಿ ಕಳೆ ತೆಗೆದು ಮಣ್ಣು ಸಡಿಲಗೊಳಿಸಬೇಕು. ಕಳೆದ ವರ್ಷದ ಸೊಪ್ಪು ಹಾಗೂ ಕಸವನ್ನು ತೆರವುಗೊಳಿಸುವ ಮೂಲಕ ಕೊಳೆ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಅವರು ತಿಳಿಸಿದ್ದಾರೆ.
ಬೇಸಾಯ ಮತ್ತು ಗೊಬ್ಬರ ನಿರ್ವಹಣೆಯ ಭಾಗವಾಗಿ ಬುಡಕ್ಕೆ ಮಣ್ಣು ಏರಿಸಿ ದಿಂಡು ಮಾಡಬೇಕು. ಇದರಿಂದ ಬೇರಿಗೆ ಗಾಳಿ ದೊರೆಯುವುದರ ಜೊತೆಗೆ ನೀರು ನಿಲ್ಲುವುದನ್ನು ತಡೆಯಬಹುದು. ಪ್ರತಿ ಮರಕ್ಕೆ 10ರಿಂದ 15 ಕೆಜಿ ಕೊಟ್ಟಿಗೆ ಗೊಬ್ಬರ, 250 ಗ್ರಾಂ ಬೇವು ಹಿಂಡಿ ಹಾಗೂ 1 ಕೆಜಿ ಸುಣ್ಣವನ್ನು ಹಾಕಿ ಮಣ್ಣಿನಿಂದ ಮುಚ್ಚಬೇಕು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ದೇವಸ್ಥಾನದ ಹುಂಡಿ ಕಳವು ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ರಾಸಾಯನಿಕ ಗೊಬ್ಬರ ಬಳಸುವ ರೈತರು ಪ್ರತಿ ಮರಕ್ಕೆ 100:40:140 ಗ್ರಾಂ ಎನ್‌ಪಿಕೆ ಗೊಬ್ಬರವನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ. ಕೊಳೆ ರೋಗ (ಮಹಾಳಿ) ನಿಯಂತ್ರಣಕ್ಕಾಗಿ ಶೇ.1ರ ಬೋರ್ಡೋ ದ್ರಾವಣ ಅಥವಾ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮೆಟಲಾಕ್ಸಿಲ್ ಎಂಝಡ್ ಮಿಶ್ರಣವನ್ನು ಸುಳಿಗೆ ಮತ್ತು ಕಾಯಿಗಳಿಗೆ ಸಿಂಪಡಿಸಬೇಕು.
ಮೊದಲ ಸಿಂಪರಣೆಯನ್ನು ಮೇ ತಿಂಗಳ ಕೊನೆಯ ವಾರದಲ್ಲಿ ಹಾಗೂ ಎರಡನೇ ಸಿಂಪರಣೆಯನ್ನು ಜೂನ್-ಜುಲೈ ತಿಂಗಳಲ್ಲಿ ಕೈಗೊಳ್ಳಬೇಕು. ಬುಡ ಕೊಳೆತ ಸಮಸ್ಯೆ ಕಂಡುಬಂದಲ್ಲಿ ಶೇ.1ರ ಬೋರ್ಡೋ ಲೇಪನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಹಳದಿ ಎಲೆ ರೋಗದ ನಿಯಂತ್ರಣಕ್ಕಾಗಿ ಬೇರಿನಿಂದ ಒಂದು ಮೀಟರ್ ದೂರದಲ್ಲಿ 30 ಸೆಂಟಿಮೀಟರ್ ಆಳದ ಕಾಲುವೆ ತೆಗೆದು ಟ್ರೈಕೋಡರ್ಮಾ 50 ಗ್ರಾಂ ಹಾಗೂ 5 ಕೆಜಿ ಸಗಣಿ ಮಿಶ್ರಣವನ್ನು ಹಾಕಬೇಕು ಎಂದು ಅವರು ತಿಳಿಸಿದ್ದಾರೆ.
ಮಳೆಗಾಲದಲ್ಲಿ ತೋಟದಲ್ಲಿ ನೀರು ನಿಲ್ಲದಂತೆ ಎರಡು ರಿಂದ ಮೂರು ಅಡಿ ಆಳದ ಬಸಿ ಕಾಲುವೆಗಳನ್ನು ನಿರ್ಮಿಸಿ, ಉಪ ಕಾಲುವೆಗಳನ್ನು ಮುಖ್ಯ ಕಾಲುವೆಗೆ ಜೋಡಿಸಿ ನೀರು ಸರಾಗವಾಗಿ ಹೊರಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ. ಹವಾಮಾನ ವರದಿಯನ್ನು ಗಮನದಲ್ಲಿಟ್ಟುಕೊಂಡು ಮೊದಲ ಮಳೆ ಆರಂಭವಾಗುವ ಮುನ್ನವೇ ಅಗತ್ಯ ಸಿಂಪರಣೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪೂರ್ಣಗೊಳಿಸುವಂತೆ ರೈತರಿಗೆ ಅವರು ಮನವಿ ಮಾಡಿದ್ದಾರೆ.





