ಗುಜರಾತ್‌ನ ಪ್ರಮುಖ ಕೈಗಾರಿಕಾ ನಗರವಾದ ಸೂರತ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಕೆಮಿಕಲ್ ಕಾರ್ಖಾನೆಯಲ್ಲಿ ಇಟಿಪಿ ರಾಸಾಯನಿಕ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇಳಿದಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯು ಸೂರತ್‌ನ ಪಾಂಡೇಸರಾ ಕೈಗಾರಿಕಾ ವಲಯದ ‘ರತಿ ಹೌಸ್’ ಕೆಮಿಕಲ್ ಕಾರ್ಖಾನೆಯಲ್ಲಿ ನಡೆದಿದೆ.
ಕೆಮಿಕಲ್ ಕಾರ್ಖಾನೆಯ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಅಂಡರ್‌ಗ್ರೌಂಡ್ ಟ್ಯಾಂಕ್ ತುಂಬಾ ದಿನಗಳಿಂದ ಬಳಕೆಯಲ್ಲಿರಲಿಲ್ಲ. ಅದರಲ್ಲಿ ಅಪಾಯಕಾರಿ ರಾಸಾಯನಿಕಗಳ ವಿಷಾನಿಲ ಸಂಗ್ರಹವಾಗಿತ್ತು. ಅದನ್ನು ಸ್ವಚ್ಛಗೊಳಿಸಲು ಯಾವುದೇ ಮುನ್ನೆಚ್ಚರಿಕೆ ಅಥವಾ ಸುರಕ್ಷತಾ ಸಾಧನಗಳಿಲ್ಲದೆ ಕಾರ್ಮಿಕರನ್ನು ಟ್ಯಾಂಕ್‌ಗೆ ಒಳಗೆ ಇಳಿಸಲಾಗಿದೆ. ಒಳಗೆ ಇಳಿಯುತ್ತಿದ್ದಂತೆ ತೀವ್ರ ವಿಷಾನಿಲ ಆವರಿಸಿಕೊಂಡಿದ್ದರಿಂದ ಉಸಿರಾಡಲು ಸಾಧ್ಯವಾಗದೆ ಕಾರ್ಮಿಕರು ಒದ್ದಾಡಿದ್ದಾರೆ. ಮ್ಯಾನ್‌ಹೋಲ್ ಒಳಗಿನಿಂದ ಕಾರ್ಮಿಕರು ರಕ್ಷಣೆಗಾಗಿ ಕಿರುಚಾಡಿದಾಗ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಟ್ಯಾಂಕ್ ಒಳಗಿನಿಂದ ನಾಲ್ಕೂ ಕಾರ್ಮಿಕರನ್ನು ಹೊರಗೆ ತೆಗೆದು, ಚಿಕಿತ್ಸೆಗಾಗಿ ಸ್ಮಿಮೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಟಿಪಿ ಟ್ಯಾಂಕ್ ಎನ್ನುವುದು ಕೈಗಾರಿಕೆಗಳಿಂದ ಹೊರಬರುವ ಕಲುಷಿತ ಮತ್ತು ರಾಸಾಯನಿಕ ಮಿಶ್ರಿತ ಗಲೀಜು ನೀರನ್ನು ಶುದ್ಧೀಕರಿಸುವ ವ್ಯವಸ್ಥೆ. ಕಾರ್ಖಾನೆಗಳ ರಾಸಾಯನಿಕಯುಕ್ತ ನೀರನ್ನು ನೇರವಾಗಿ ನದಿ ಅಥವಾ ಪರಿಸರಕ್ಕೆ ಬಿಟ್ಟರೆ ಪರಿಸರ ಮಾಲಿನ್ಯವಾಗುತ್ತದೆ. ಆದ್ದರಿಂದ, ಈ ಟ್ಯಾಂಕ್ ಮೂಲಕ ವಿಷಕಾರಿ ಕಸ ಮತ್ತು ರಾಸಾಯನಿಕಗಳನ್ನು ಬೇರ್ಪಡಿಸಿ, ನೀರನ್ನು ಮರುಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ನೈಟ್ರೋಜನ್, ಸಲ್ಫರ್ ಮುಂತಾದ ಅಪಾಯಕಾರಿ ಅನಿಲಗಳು ಟ್ಯಾಂಕ್‌ನಲ್ಲಿ ಉತ್ಪತ್ತಿಯಾಗುತ್ತವೆ.
ಗುಜರಾತ್ ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಲೇ ಇವೆ. ಕಾರ್ಖಾನೆಗಳ ಮಾಲೀಕರು ಮತ್ತು ಗುತ್ತಿಗೆದಾರರು ಕನಿಷ್ಠ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಕಾರ್ಮಿಕರನ್ನು ವಿಷಾನಿಲವುಳ್ಳ ಟ್ಯಾಂಕ್‌ಗಳಿಗೆ ಇಳಿಸುವುದು ಆಗ್ಗಾಗ್ಗೆ ವರದಿಯಾಗುತ್ತಲೇ ಇದೆ. ಗ್ಯಾಸ್ ಮಾಸ್ಕ್, ಆಕ್ಸಿಜನ್ ಸಿಲಿಂಡರ್ ಅಥವಾ ಸುರಕ್ಷತಾ ಬೆಲ್ಟ್‌ಗಳಿಲ್ಲದೆ ಬಡ ಕಾರ್ಮಿಕರನ್ನು ಇಂತಹ ವಿಷಕಾರಿ ಹೊಂಡಗಳಿಗೆ ಇಳಿದು, ಜೀವ ಕಳೆದುಕೊಳ್ಳುತ್ತಿದ್ದಾರೆ. ಮಾಲೀಕರ ಲಾಭಕೋರತನಕ್ಕೆ ಅಮಾಯಕ ಕಾರ್ಮಿಕರ ಜೀವಗಳು ಬಲಿಯಾಗುತ್ತಿವೆ.
ಈ ಲೇಖನ ಓದಿದ್ದೀರಾ?: ನೆಹರೂ ನಿಂದನೆ ಎಂಬುದು ಸೆರಗಿಗೆ ಕಟ್ಟಿಕೊಂಡ ಕೆಂಡ! ಪರಮವಿಕೃತಿಯ ಈ ಪ್ರಾಜೆಕ್ಟು ಫಲಿಸುವುದಿಲ್ಲ
ಇತ್ತೀಚೆಗೆ, ಬೆಂಗಳೂರಿನ ಐಟಿ ಹಬ್ ಎಂದೇ ಕರೆಯಲಾಗುವ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಅಪಾರ್ಟ್‌ಮೆಂಟ್ ಒಂದರ ಒಳಚರಂಡಿ ಘಟಕವನ್ನು ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ವಿಷಾನಿಲಕ್ಕೆ ಬಲಿಯಾಗಿದ್ದರು. ಅಪಾರ್ಟ್‌ಮೆಂಟ್ ಮಂಡಳಿಯು ಸೂಕ್ತ ಗ್ಯಾಸ್ ಮಾಸ್ಕ್ ಅಥವಾ ಆಮ್ಲಜನಕದ ಸಿಲಿಂಡರ್ ನೀಡದೆ ಕಾರ್ಮಿಕರನ್ನು ಒಳಗೆ ಇಳಿಸಿದ್ದೇ ಈ ಸಾವಿಗೆ ನೇರ ಕಾರಣವಾಗಿತ್ತು.
ಇನ್ನು, ಕಲಬುರಗಿ ನಗರದಲ್ಲಿ ಒಳಚರಂಡಿ ಕಟ್ಟಿಕೊಂಡಿದ್ದನ್ನು ಸರಿಪಡಿಸಲು ಮ್ಯಾನ್‌ಹೋಲ್ ಒಳಗಿಳಿದಿದ್ದ ಇಬ್ಬರು ಪೌರಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಒಳಗೆ ವಿಷಾನಿಲ ಇರುವುದನ್ನು ಪತ್ತೆ ಹಚ್ಚುವ ಮುನ್ನವೇ ತುರ್ತು ಕಾರ್ಯಾಚರಣೆಗೆ ಇಳಿಸಿದ್ದರಿಂದ ಈ ಅವಘಡ ಸಂಭವಿಸಿತ್ತು.
ಅಂತೆಯೇ, ಮುಂಬೈನ ಧಾರಾವಿ ಮತ್ತು ದೆಹಲಿಯ ರೋಹಿಣಿ ಪ್ರದೇಶಗಳಲ್ಲಿ ಇತ್ತೀಚಿನ ಮಳೆಗಾಲದ ಅವಧಿಯಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಸುಮಾರು 5ಕ್ಕೂ ಹೆಚ್ಚು ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.




