ಕೋಕ್ ಸಲ್ಪರ್ ಘಟಕದಿಂದ ಗಂಭೀರ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ಜನವಸತಿ ಪ್ರದೇಶದಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಶೀಘ್ರದಲ್ಲಿ ನಡೆಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜೋಕಟ್ಟೆ, ಕೆಂಜಾರು, ಕಳವಾರು ಗ್ರಾಮಸ್ಥರು MRPL ಕೋಕ್ ಸಲ್ಪರ್ ಘಟಕದ ಮುಂಭಾಗ ನಡೆಸುತ್ತಿರುವ ಹಗಲು ರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ. ಈ ಧರಣಿಗೆ ಮಾಜಿ ಸಚಿವ ಅಭಯಚಂದ್ರ ಜೈನ್ ಕೂಡಾ ಬೆಂಬಲ ನೀಡಿದ್ದಾರೆ.
ಮೂರನೇ ದಿನದ ಧರಣಿಯಲ್ಲಿ ಪಾಲ್ಗೊಂಡು ಧರಣಿ ನಿರತರಿಗೆ ಬೆಂಬಲ ಸೂಚಿಸಿ ಮಾತನಾಡಿದ ಅಭಯಚಂದ್ರ ಜೈನ್, “2016ರಲ್ಲಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕೋಕ್ ಸಲ್ಪರ್ ಮಾಲಿನ್ಯದಿಂದ ಜೋಕಟ್ಟೆಯ ಜನವಸತಿ ಪ್ರದೇಶದಲ್ಲಿ ಉಂಟಾದ ಗಂಭೀರವಾದ ಸ್ಥಿತಿಗೆ ಪರಿಹಾರ ಕಲ್ಪಿಸಲು ಸರ್ಕಾರ ವಿಶೇಷ ಮುತುವರ್ಜಿ ವಹಿಸಿತ್ತು. ತಜ್ಞರ ಸಮಿತಿ ರಚಿಸಿ ಪರಿಹಾರೋಪಾಯಗಳನ್ನು ಕಂಡು ಹುಡುಕಿ ಆದೇಶ ಹೊರಡಿಸಲಾಗಿತ್ತು” ಎಂದು ನೆನಪಿಸಿಕೊಂಡರು.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ನಾಮಪತ್ರ ಸಲ್ಲಿಕೆ
“ಈ ಆದೇಶ ಹೊರಡಿಸಿ ಹತ್ತು ವರ್ಷಗಳಾದರೂ ಎಂಆರ್‌ಪಿಎಲ್ ಹಸಿರು ವಲಯ ನಿರ್ಮಿಸಲು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೆವಗಳನ್ನು ಮುಂದಿಡುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಹಾಗು ಕಂಪೆನಿ ಕೊಟ್ಟ ಮಾತಿನಂತೆ ನೇರವಾಗಿ ಭೂಸ್ವಾಧೀನ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಗ್ರಾಮಸ್ಥರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸಲಾಗದು” ಎಂದು ಎಚ್ಚರಿಸಿದರು. ಹಾಗೆಯೇ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಭರವಸೆ ನೀಡಿದರು.

ಇನ್ನು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಾಳ ಗ್ರಾಪಂ ಮಾಜಿ ಅಧ್ಯಕ್ಷ ಆದಂ ಕಳವಾರು, ಜೋಕಟ್ಟೆ ಗ್ರಾಪಂ ಮಾಜಿ ಅಧ್ಯಕ್ಷ ಉಮರ್ ಫಾರೂಕ್, ಕುಂಭಾರ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ಬಂಜನ್, ಸಿಪಿಐಎಂ ಮುಖಂಡ ಶ್ರೀನಾಥ್ ಕುಲಾಲ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಕಿರಣ ಪ್ರಭ, ಕಾರ್ಯದರ್ಶಿ ಪ್ರಮೀಳಾ ಕೆ, ಸಿಲ್ವಿಯಾ ಜೋಕಟ್ಟೆ, ಪುಷ್ಪಾ ಡಿ, ಹೋರಾಟ ಸಮಿತಿಯ ಪ್ರಮುಖರಾದ ಅಬೂಬಕ್ಕರ್ ಬಾವ, ಜಾಬಿರ್ ಜೆ ಎಮ್, ಇಕ್ಬಾಲ್ ಜೋಕಟ್ಟೆ, ಹಸೈನಾರ್, ಸೀತಾರಾಮ ಆಚಾರ್ಯ, ಮನೋಜ್ ಜೋಕಟ್ಟೆ, ಮೋಹನ್ ಕುಲಾಲ್ ಜೋಕಟ್ಟೆ, ಗಣೇಶ್ ನಿರ್ಮುಂಜೆ, ಶೆರೀಫ್ ನಿರ್ಮುಂಜೆ, ಹನೀಫ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.




