ಪರ್ಯಾಯ ರಾಜಕಾರಣ ಹಾಗೂ ಮೀಸಲಾತಿ ಕುರಿತಂತೆ ಮೇಲ್ಜಾತಿಗಳ ದೋಷಪೂರಿತ ನಿಲುವುಗಳು ಮತ್ತು ಅವುಗಳ ಸಾಮಾಜಿಕ ಪರಿಣಾಮಗಳ ಕುರಿತು ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸಲು ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ನಿರ್ಧರಿಸಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್ ತಿಳಿಸಿದರು.
ನಗರದ ಜಲದರ್ಶಿನಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಮಿತಿಯನ್ನು ಪುನರ್‌ರಚಿಸಲಾಗಿದ್ದು, ಜಿಲ್ಲಾ ಸಂಚಾಲಕರಾಗಿ ಎಸ್.ಡಿ. ಸಣ್ಣಸ್ವಾಮಿ ಸರಗೂರು ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶಿವಕುಮಾರ್ ಅಶೋಕಪುರಂ, ಶ್ರೀಕಂಠಸ್ವಾಮಿ ಶಂಕರಪುರ, ಅಲಗೂಡು ಶಿವಣ್ಣ, ಈಶ್ವರ ಬೊಮ್ಮನಹಳ್ಳಿ ಹಾಗೂ ಬೊಕ್ಕಳ್ಳಿ ಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ದೇವರಾಜ ಮಲ್ಲಾಡಿ ಅವರನ್ನು ನೇಮಿಸಲಾಗಿದ್ದು, ಜಿಲ್ಲಾ ಸಮಿತಿ ಸದಸ್ಯರಾಗಿ ಪ್ರಸನ್ನ ತಳೂರು, ನೂರಲಕುಪ್ಪೆ ಶಿವಣ್ಣ ಹಾಗೂ ಪುಟ್ಟಮಾದು ಭುಗತಗಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಮಟ್ಟದ ಸಮಿತಿಗಳ ಪುನರ್‌ರಚನೆ ಕುರಿತು ಮುಂದಿನ ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸ್ಥಳೀಯ ಮಟ್ಟದಲ್ಲಿ ಸಮಾಲೋಚನೆ ನಡೆಸಿದ ಬಳಿಕ ಹೊಸ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ?ಭೀತಿ ತೊರೆದು ಭಾರತ ಮಾತಾಡುತ್ತಿರುವುದು ಇದೇ ಮೊದಲೇನಲ್ಲ; ದೆಹಲಿಯ ಯುವಜನರ ಹೋರಾಟಕ್ಕೆ ಬೆಂಬಲ ಅಗತ್ಯ: ಶಿವಸುಂದರ್
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ್ ಕೋಟೆ, ಜಿಲ್ಲಾ ಸಂಚಾಲಕ ಎಸ್.ಡಿ. ಸಣ್ಣಸ್ವಾಮಿ ಸರಗೂರು, ಶಿವಕುಮಾರ್ ಅಶೋಕಪುರಂ, ಬಿಡುಗಲು ಗೋಪಾಲಕೃಷ್ಣ, ಕಾಂತರಾಜು, ಮಲ್ಲಿಕಾರ್ಜುನ ಉಯ್ಯಂಬಳ್ಳಿ, ಕಾರಯ್ಯ ಸರಗೂರು ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳಾದ ರತ್ನಮ್ಮ ಹುಣಸೂರು, ಮೂಡಳ್ಳಿ ಮಹದೇವಮ್ಮ ಸೇರಿದಂತೆ ಹಲವರು ಇದ್ದರು.




