ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡವರು, ಮಧ್ಯಮ ವರ್ಗದವರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಮೇಲೆ ಸರ್ಕಾರ ಮತ್ತಷ್ಟು ಆರ್ಥಿಕ ಹೊರೆ ಹೇರುತ್ತಿರುವುದು ಖಂಡನೀಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಗೇಪಲ್ಲಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ರಯಾಣಿಕರನ್ನು ಮಾತನಾಡಿಸಿದಾಗ, ಬಹುತೇಕರು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಾಲು, ಮೊಸರು, ಅಡುಗೆ ಎಣ್ಣೆ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಅದರ ನಡುವೆ ಬಸ್ ಟಿಕೆಟ್ ದರವೂ ಏರಿಕೆಯಾದರೆ ಜೀವನ ನಿರ್ವಹಣೆ ಮತ್ತಷ್ಟು ಕಷ್ಟವಾಗಲಿದೆ
ಹಾಲಿನ ದರವನ್ನು ರೂ.8 ವರೆಗೆ ಹೆಚ್ಚಿಸಿರುವ ನಿರ್ಧಾರದಿಂದ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇ.15ರಿಂದ 20ರಷ್ಟು ಹೆಚ್ಚಿಸಿದರೆ ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷವಾಗಿ ದಿನನಿತ್ಯ ಕೆಲಸಕ್ಕೆ ತೆರಳುವ ಕಾರ್ಮಿಕರು, ಮಧ್ಯಮ ವರ್ಗದವರು ಹಾಗೂ ಕಡಿಮೆ ಆದಾಯ ಹೊಂದಿರುವವರಿಗೆ ದರ ಏರಿಕೆ ಹೊರೆಯಾಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಪ್ರಶ್ನಿಸಿದ್ದು, ಒಂದು ವರ್ಗಕ್ಕೆ ಉಚಿತ ಪ್ರಯಾಣದ ಸೌಲಭ್ಯ ನೀಡಿ ಮತ್ತೊಂದು ವರ್ಗದ ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಹಾಕುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಕೆಲವರು ಎಲ್ಲರಿಗೂ ಉಚಿತ ಪ್ರಯಾಣ ನೀಡುವ ಬದಲು ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಬೇಕು.
ಉಳಿದವರಿಗೆ ಕೈಗೆಟುಕುವ ದರದಲ್ಲಿ ಬಸ್ ಸೇವೆ ಒದಗಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸಿಪಿಐಎಂ ಪಕ್ಷದ ವತಿಯಿಂದ ಖಂಡನೆ:-
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಬೆಲೆ ಏರಿಕೆಯ ಬರೆ ನಿರಂತರವಾಗಿ ಬೀಳುತ್ತಿದೆ. ಹಾಲಿನ ದರ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಒಂದರ ಹಿಂದೆ ಒಂದರಂತೆ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದೀಗ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲು ಹೊರಟಿರುವುದು ಸರಿಯಲ್ಲ ಎಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿ ವೆಂಕಟಪ್ಪ ಟೀಕಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ವೆಚ್ಚದ ನೆಪದಲ್ಲಿ ಜನರ ಮೇಲೆ ತೆರಿಗೆ ಹಾಗೂ ಬೆಲೆ ಏರಿಕೆಯ ಹೊರೆ ಹಾಕುವುದು ಸರಿಯಲ್ಲ. ಒಂದು ಕೈಯಲ್ಲಿ ಉಚಿತ ಸೌಲಭ್ಯ ನೀಡಿದಂತೆ ತೋರಿಸಿ, ಇನ್ನೊಂದು ಕೈಯಲ್ಲಿ ಜನರಿಂದಲೇ ಹೆಚ್ಚಿನ ಹಣ ವಸೂಲಿ ಮಾಡುವುದು ಜನಪರ ಆಡಳಿತದ ಲಕ್ಷಣವಲ್ಲ. ನಿತ್ಯ ಬಸ್‌ಗಳನ್ನೇ ಅವಲಂಬಿಸಿರುವ ಬಡವರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಭಾಗದ ಜನರಿಗೆ ಈ ದರ ಏರಿಕೆ ದೊಡ್ಡ ಹೊಡೆತ ನೀಡಲಿದೆ.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಾರಿಗೆ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರ ಬದುಕಿನ ವೆಚ್ಚ ಕಡಿಮೆ ಮಾಡುವ ಬದಲು, ಪ್ರತಿಯೊಂದು ಕ್ಷೇತ್ರದಲ್ಲೂ ದರ ಹೆಚ್ಚಿಸುತ್ತಿರುವ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಹಿತವನ್ನು ಮರೆತಿದೆ ಎಂದು ಹೇಳಿದರು




