ಡಿಜಿಟಲ್ ವದಂತಿಗಳು , ಯೂಟ್ಯೂಬ್ ಉಲ್ಲೇಖಗಳು, ಪತ್ರಿಕಾ ತುಣುಕುಗಳು ಹಾಗೂ ಕೇವಲ ಪರಿಶೀಲಿಸದ ಆರೋಪಗಳ ಆಧಾರದ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ನಿರ್ಮಿಸಲು ಅಥವಾ ಸಲ್ಲಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಯಾವುದೇ ಸ್ವತಂತ್ರ ಸಂಶೋಧನೆಯ ತುಣುಕಿಲ್ಲದೆ ಸಲ್ಲಿಕೆಯಾಗುವ ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಬೇಕು ಎಂದು ನ್ಯಾಯಾಲಯವು ತಿಳಿಸಿದೆ.
ತಿರುವಳ್ಳೂರಿನ ‘ಶ್ರೀ ವೆಂಕಟೇಶ್ವರ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ಗೆ ನೀಡಲಾಗಿರುವ ಮಾನ್ಯತೆ, ನಿಯಂತ್ರಣ ಅನುಮೋದನೆಗಳು ಹಾಗೂ ಸ್ವಾಯತ್ತ ಸ್ಥಾನಮಾನದ ಕುರಿತು ಸ್ವತಂತ್ರ ತನಿಖೆಗೆ ಕೋರಿ ಡಿ. ರಾಧಾಕೃಷ್ಣನ್ ಎಂಬುವವರು ಈ ಪಿಐಎಲ್ ಸಲ್ಲಿಸಿದ್ದರು. ಈ ವಿಚಾರದ ಕುರಿತು ತನಿಖಾ ಸಮಿತಿ ರಚಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಯುಜಿಸಿ ಮತ್ತು ನ್ಯಾಕ್ (NAAC) ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದರು.
ಇದನ್ನು ಓದಿದ್ದೀರಾ? ಭಕ್ತಿ ಮತ್ತು ಆರ್ಥಿಕತೆ: ಬದಲಾಗುತ್ತಿರುವ ಧಾರ್ಮಿಕ ಕ್ಷೇತ್ರಗಳ ಸ್ವರೂಪ
ಅರ್ಜಿದಾರರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಕೇವಲ ಪತ್ರಿಕಾ ವರದಿಗಳು, ಯೂಟ್ಯೂಬ್ ಮಾಹಿತಿಗಳು ಹಾಗೂ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದಲ್ಲಿ (ಡಿವಿಎಸಿ) ದಾಖಲಾಗಿರುವ ಎಫ್‌ಐಆರ್ ಅನ್ನು ಮಾತ್ರ ಅವಲಂಬಿಸಿದ್ದರು. ಆದರೆ, ಈ ಆರೋಪಗಳ ಕುರಿತು ನ್ಯಾಯಾಲಯದ ಮೆಟ್ಟಿಲೇರುವ ಮುನ್ನ ಅವರು ಯಾವುದೇ ರೀತಿಯ ಸ್ವತಂತ್ರ ಪರಿಶೀಲನೆ ಅಥವಾ ಸಂಶೋಧನೆ ನಡೆಸಿರಲಿಲ್ಲ ಎನ್ನುವ ಮೂಲಭೂತ ದೋಷವನ್ನು ನ್ಯಾಯಾಲಯವು ವಿಚಾರಣೆ ವೇಳೆ ಗಂಭೀರವಾಗಿ ಪರಿಗಣಿಸಿತು.
ಕೇವಲ ಭ್ರಷ್ಟಾಚಾರ ನಿಗ್ರಹ ದಳದ ತನಿಖೆ ಅಥವಾ ಡಿಜಿಟಲ್ ವದಂತಿಗಳನ್ನು ನೆಚ್ಚಿಕೊಂಡು ಪಿಐಎಲ್ ಸಲ್ಲಿಸುವುದು ಕಡ್ಡಾಯ ನಿಯಮಗಳ ಉಲ್ಲಂಘನೆಯಾಗುತ್ತದೆ. ಕ್ರಿಮಿನಲ್ ತನಿಖೆ ಪ್ರಗತಿಯಲ್ಲಿರುವಾಗ, ಮೂಲಭೂತ ಸತ್ಯಗಳನ್ನು ಪರಿಶೀಲಿಸದೆ ಅರ್ಜಿ ಸಲ್ಲಿಸುವುದು ನಡೆಯುತ್ತಿರುವ ಕಾನೂನು ಪ್ರಕ್ರಿಯೆಯನ್ನು ಸೆನ್ಸೇಷನಲೈಸ್ ಮಾಡುವ (ಸಂವೇದನಾಶೀಲಗೊಳಿಸುವ) ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಅರುಳ್ ಮುರುಗನ್ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ.




