ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮನೂರು ಗ್ರಾಮದಲ್ಲಿ 2022ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದೆ.
ಯಂಕಪ್ಪ ಅಲಿಯಾಸ್ ಯಂಕಣ್ಣ ದ್ಯಾವಪ್ಪ ಮಾಲಗತ್ತಿ (24) ಎಂಬಾತನನ್ನು ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಿದ ನ್ಯಾಯಾಲಯ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆಯನ್ನು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ ಪ್ರಕಾರ, ಚಾಮನೂರು ಗ್ರಾಮದ ಯುವತಿ ಮತ್ತು ಸೂರ್ಯಕಾಂತ ನಡುವಿನ ಪ್ರೇಮ ಸಂಬಂಧದಿಂದ ಎರಡು ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿತ್ತು. ಯುವತಿಗೆ ಬೇರೆಡೆ ಮದುವೆಯಾಗಿದ್ದರೂ, ಬಳಿಕ ಸೂರ್ಯಕಾಂತ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದು ಮರುಮದುವೆಯಾಗಿದ್ದ. ಈ ಬೆಳವಣಿಗೆಯಿಂದ ಕುಟುಂಬಗಳ ನಡುವಿನ ವೈಷಮ್ಯ ಮತ್ತಷ್ಟು ತೀವ್ರಗೊಂಡಿತ್ತು.
ರಾಜಿ ಪಂಚಾಯಿತಿಯಲ್ಲಿ ಎರಡೂ ಕುಟುಂಬಗಳಿಗೆ ಪರಿಸ್ಥಿತಿ ಶಾಂತವಾಗುವವರೆಗೆ ಗ್ರಾಮಕ್ಕೆ ಬರದಂತೆ ಸೂಚನೆ ನೀಡಲಾಗಿತ್ತು. ಆದರೂ 2022ರ ಜೂನ್ 1ರಂದು ಮಗುವಿನ ತೊಟ್ಟಿಲು ಕಾರ್ಯಕ್ರಮಕ್ಕಾಗಿ ಊರಿಗೆ ಬಂದ ವೇಳೆ ಮತ್ತೆ ಜಗಳ ಉಂಟಾಯಿತು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಕೊಡಲಿ ಹಾಗೂ ಬಡಿಗೆಯಿಂದ ಹಲ್ಲೆ ನಡೆಸಲಾಗಿತ್ತು. ಈ ಘಟನೆಯಲ್ಲಿ ಸೂರ್ಯಕಾಂತನ ಕುಟುಂಬದ ದಶರಥ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು.
ಇದನ್ನು ಓದಿದ್ದೀರಾ? ಹುನಗುಂದ | ಪೋಲು ನೀರು ಬಳಸಿ 1.5 ಎಕರೆ ತೋಟದಲ್ಲಿ ₹1.50 ಲಕ್ಷ ಗಳಿಸಿದ ರೈತ
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪ್ರಭಾರಿ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದರು.





