ಪ್ರತಿಯೊಬ್ಬ ವ್ಯಕ್ತಿಗೂ ಪ್ರಕೃತಿ, ಸಂಸ್ಕೃತಿ ಹಾಗೂ ಸೃಜನಶೀಲತೆ ಬಹಳ ಮುಖ್ಯ. ಈ ಮೂರು ಸಂಗತಿಗಳನ್ನು ಮೈಗೂಡಿಸಿಕೊಂಡವರು ಜೀವನದಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಪ್ರೊ. ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.
ಅದಮ್ಯ ರಂಗಶಾಲೆಯ ವತಿಯಿಂದ ನಗರದ ಹೂಟಗಳ್ಳಿಯ ದಕ್ಷ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪಠ್ಯಾಧಾರಿತ ರಂಗರೂಪ ಪ್ರದರ್ಶನ ಹಾಗೂ ಗಣ್ಯ ಸಾಧಕರಿಗೆ ಅಭಿನಂದನ ಸಮಾರಂಭ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸೃಜನಶೀಲತೆ ಹೊಂದಿದವರು ಸಾಧಕರಾಗುತ್ತಾರೆ ಎಂಬುದಕ್ಕೆ ಕುವೆಂಪು, ದೇಜಗೌ ಹಾಗೂ ಹಾಮಾನಾ ಅವರು ಶ್ರೇಷ್ಠ ಮಾದರಿಗಳಾಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸೃಜನಶೀಲತೆಯ ಗುಣ ಇರಬೇಕು. ಸೃಜನಶೀಲತೆ ಇದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿ, ಶಿಕ್ಷಕ, ಕವಿ, ಕಲಾವಿದ ಅಥವಾ ಇಂಜಿನಿಯರ್ ಆಗಲು ಸಾಧ್ಯ. ಇದು ವ್ಯಕ್ತಿಯನ್ನು ಸಮಾಜಮುಖಿಯಾಗಿ ಬದುಕಲು ಸಹ ನೆರವಾಗುತ್ತದೆ ಎಂದರು.
ಪ್ರಸ್ತುತ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಅನಿವಾರ್ಯವಾಗಿವೆ. ನಾಗರಿಕತೆಯ ಆರಂಭದಿಂದಲೂ ಜ್ಞಾನ ಮನುಷ್ಯನ ಬೆಳವಣಿಗೆಗೆ ಕಾರಣವಾಗಿದೆ. ಮನುಷ್ಯನ ಪ್ರಗತಿಯೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನವೂ ಅಭಿವೃದ್ಧಿಗೊಂಡು ಸಮಾಜದ ಪ್ರಗತಿಗೆ ಸಹಕಾರಿಯಾಗಿವೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಡಿಯಾಳಾಗಿ ನಮ್ಮ ಮೂಲ ಗ್ರಾಮೀಣ ಸಂಸ್ಕೃತಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಇಂದಿನ ಮಕ್ಕಳು ಹಾಗೂ ಯುವಜನರು ತಂತ್ರಜ್ಞಾನದ ದಾಸರಾಗುತ್ತಿರುವ ಪರಿಣಾಮ ಗ್ರಾಮೀಣ ಸಂಸ್ಕೃತಿ ಮತ್ತು ಜನರಿಂದ ದೂರವಾಗುತ್ತಿದ್ದಾರೆ. ಹಳ್ಳಿಯ ಅಜ್ಜ-ಅಜ್ಜಿಯರೊಂದಿಗೆ ಅವರಿಗಿದ್ದ ಸಂಪರ್ಕ ಹಾಗೂ ಸಂಬಂಧ ಕಡಿಮೆಯಾಗುತ್ತಿದೆ. ಇದರಿಂದ ಅವರಲ್ಲಿ ಪ್ರಜ್ಞಾವಂತಿಕೆ ಕುಂಠಿತವಾಗುತ್ತಿದೆ ಎಂದು ವಿಷಾದಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಶಿಕ್ಷಣವು ಕೇವಲ ಮಾಹಿತಿಯನ್ನು ನೀಡುವುದಕ್ಕೆ ಸೀಮಿತವಾಗಿಲ್ಲ. ಅದು ದೈಹಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅಂತಃರಂಗದ ಸಂಸ್ಕಾರವನ್ನು ಬೆಳಗಿಸುತ್ತದೆ ಎಂದರು.
ಇದಕ್ಕೆ ಪೂರಕವಾಗಿ ಪಠ್ಯಾಧಾರಿತ ರಂಗರೂಪದ ಪ್ರದರ್ಶನ ವ್ಯಕ್ತಿಯಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕನ್ನಡ ಭಾಷೆಗೆ ತನ್ನದೇ ಆದ ಜೀವಶಕ್ತಿಯಿದ್ದು, ಅದು ನಮ್ಮನ್ನು ಸದಾ ಒಟ್ಟಿಗೆ ಬೆಸೆಯುತ್ತದೆ. ಅನುಭವವೊಂದನ್ನು ಮನಸ್ಸಿಗೆ ಪರಿಣಾಮಕಾರಿಯಾಗಿ ತಲುಪಿಸುವ ಶಕ್ತಿ ಭಾಷೆಗಿದೆ. ಸಾಹಿತ್ಯದಲ್ಲಿ ಮಾನವೀಯ ಗುಣಗಳಿದ್ದು, ಈ ಗುಣಗಳನ್ನು ಭಾಷಾ ಪಠ್ಯವಸ್ತು ಬಿಂಬಿಸುತ್ತದೆ. ಅದನ್ನು ರಂಗರೂಪಕ್ಕೆ ಇಳಿಸಿದಾಗ ಮತ್ತಷ್ಟು ಪರಿಣಾಮಕಾರಿಯಾಗಿ ಮನದಟ್ಟಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಪಿ. ಜಯಚಂದ್ರರಾಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಬಿ. ಲಿಂಗರಾಜು ಹಾಗೂ ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಟಿ. ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ವಿಶೇಷ ಸುದ್ದಿ ಓದಿದ್ದೀರಾ?ಹಳೇ ಮೈಸೂರು ರಾಜಕೀಯದ ಭವಿಷ್ಯದ ಬುನಾದಿ: ಮಹಿಳಾ ನಾಯಕತ್ವ ಎಲ್ಲಿ ಕಳೆದುಹೋಯಿತು?
ವೇದಿಕೆಯಲ್ಲಿ ದಕ್ಷ ಪಿಯು ಕಾಲೇಜಿನ ಪ್ರಾಂಶುಪಾಲ ಅಭಿಷೇಕ್, ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ಪದಾಧಿಕಾರಿಗಳಾದ ಸಿ.ಎಸ್. ರಾಘವೇಂದ್ರ, ನಾಗೇಶ್, ಕಾವ್ಯಪ್ರಿಯ, ಜಿ. ರವೀಂದ್ರ ಕುಮಾರ್ ಹಾಗೂ ಕವಯತ್ರಿ ಸುಪ್ರಿಯಾ ಶಿವಣ್ಣ ಇದ್ದರು.




