ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಕ್ರಾಸ್ ಬಳಿ ನಡೆದ ಭೂಮಾನಂದ ಕೊಲೆ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಆಗಸ್ಟ್ 23ರಂದು ಹದ್ದಿನಾಳದಿಂದ ಬೈಕ್ ರ‍್ಯಾಲಿ ಆರಂಭವಾಗಲಿದೆ. ಆಗಸ್ಟ್ 24ರಂದು ರ‍್ಯಾಲಿ ರಾಯಚೂರು ನಗರಕ್ಕೆ ಆಗಮಿಸಲಿದೆ ಎಂದು ಭೂಮಾನಂದ ಕೊಲೆ ವಿರೋಧಿ ಹೋರಾಟ ಸಮಿತಿ ಮುಖಂಡ ಎಸ್. ಮಾರೆಪ್ಪ ತಿಳಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಳೆದ 12 ವರ್ಷಗಳಿಂದ ನಡೆದುಕೊಂಡು ಬಂದ ದ್ವೇಷದ ಹಿನ್ನೆಲೆಯಲ್ಲಿ ಭೂಮಾನಂದ ಕೊಲೆ ನಡೆದಿದೆ. ಕೊಲೆ ಘಟನೆ ನಡೆದ ಬಳಿಕವೂ ಭೂಮಾನಂದ ಕುಟುಂಬದವರಿಗೆ ಬೆದರಿಕೆ ಹಾಕುವ ಕೆಲಸ ಮುಂದುವರಿದಿದೆ. ಜಿಲ್ಲೆಯಲ್ಲಿ ನಾಲ್ವರು ಶಾಸಕರು ಹಾಗೂ ಓರ್ವ ಸಂಸದರು ಇದ್ದು, ಜಿಲ್ಲೆ ಎಸ್‌ಟಿ ಮೀಸಲು ಕ್ಷೇತ್ರಗಳನ್ನು ಹೊಂದಿದ್ದರೂ ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗೂ ಕೊಲೆ ಪ್ರಕರಣಗಳ ಬಗ್ಗೆ ಜನಪ್ರತಿನಿಧಿಗಳು ಸೌಜನ್ಯಕ್ಕೂ ರಕ್ಷಣೆ ನೀಡುವ ಮಾತು ಆಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಮಾನ್ವಿ ತಾಲೂಕಿನ ಮದ್ಲಾಪುರ ಹಾಗೂ ರಾಯಚೂರು ತಾಲೂಕಿನ ಕಮಲಾಪುರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಕೊಲೆ ಪ್ರಕರಣಗಳು ನಡೆದಿವೆ. ಇದೀಗ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ ಪ್ರಕರಣವೂ ನಡೆದಿದೆ. ಕೊಲೆ ನಡೆದು ಹಲವು ದಿನಗಳಾದರೂ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಹಾಗೂ ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆ ತಡೆ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಹದ್ದಿನಾಳ ಗ್ರಾಮಕ್ಕೆ ಭೇಟಿ ನೀಡಿ, ಮೃತ ಭೂಮಾನಂದ ಕುಟುಂಬದವರಿಗೆ ಸಾಂತ್ವನ ಹೇಳುವ ಪ್ರಯತ್ನ ನಡೆಸಿಲ್ಲ. ಇದು ರಾಜಕೀಯ ಒತ್ತಡದ ಪರಿಣಾಮವೇ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಆರೋಪಿಸಿದರು
ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆ ಜಿಲ್ಲಾ ಸಮಿತಿ ಸದಸ್ಯರಾಗಿರುವ ರಘುವೀರ ನಾಯಕ ಕೊಲೆ ಘಟನೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರನ್ನು ಕೂಡಲೇ ಸಮಿತಿಯಿಂದ ತೆಗೆದುಹಾಕಬೇಕು. ಪತ್ರಕರ್ತ ಭೀಮರಾಯ ಹದ್ದಿನಾಳ ನಿರಾಪರಾಧಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಭೀಮರಾಯ ಹದ್ದಿನಾಳ ಈ ಮುಂಚೆ ಸಂಧಾನ ಮಾತುಕತೆಯಲ್ಲಿ ಸಭೆಯಲ್ಲಿ ಭಾಗಿಯಾಗಿದ್ದು ಅವರ ಪ್ರಚೋದನೆಯೇ ಕಾರಣವಾಗಿದೆ ಎಂದರು.
ತಮ್ಮ ಸಮುದಾಯದವರು ಕೊಲೆ ಮಾಡಿದರೂ ಸಮರ್ಥಿಸಿಕೊಂಡಿರುವುದು ಎಷ್ಟು ಸರಿ? ಕೊಲೆ ಘಟನೆಯನ್ನು ಸಮರ್ಥಿಸಿಕೊಂಡು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಸಮಗ್ರ ತನಿಖೆಯಾದರೆ ಸುಪಾರಿ ಕೊಟ್ಟವರು ಯಾರು, ಘಟನೆಯಿಂದ ಯಾರು ಇದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಕಾನೂನು ವ್ಯವಸ್ಥೆ ಮಾಡಬೇಕಾಗಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತನಿಖಾಧಿಕಾರಿಗಳ ಮೇಲೆ ಹೇಳುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಬಿಗು ವಾತವರಣವಿದ್ದು ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ಮಾತನಾಡಿ, ಭೂಮಾನಂದ ಕೊಲೆ ಘಟನೆ ಸಂಬಂಧಿಸಿದಂತೆ ಯಾರ ಹೆಸರನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿಲ್ಲ. ಭೂಮಾನಂದ ಪತ್ನಿ ನೀಡಿರುವ ದೂರಿನಲ್ಲಿಯೇ ಭೀಮರಾಯ ಹದ್ದಿನಾಳ ಹೆಸರು ಇತ್ತು. ಭೂಮಾನಂದ ಕೊಲೆ ಮುನ್ನ ನಡೆದ ಅನೇಕ ರಾಜೀಸಂಧಾನ ಸಭೆಯಲ್ಲಿ ಭೀಮರಾಯ ಹದ್ದಿನಾಳ ಭಾಗಿಯಾಗಿದ್ದಾರೆ. ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ರವೀಂದ್ರ ನಾಥ ಪಟ್ಟಿ ಮಾತನಾಡಿ, ಪರಿಶಿಷ್ಟ ಜಾತಿ ವ್ಯಕ್ತಿ ಕೊಲೆಯಾದರೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಎಸ್ಸಿಎಸ್ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯರು ಯಾರು ಭೇಟಿ ನೀಡಿಲ್ಲ. ಜಿಲ್ಲಾಧಿಕಾರಿಗಳು ಸಹ ಭೇಟಿ ನೀಡಿಲ್ಲ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ತಡೆಯೇ ಇಲ್ಲದಂತಾಗಿದೆ. ಭೂಮಾನಂದ ಕೊಲೆ ಘಟನೆ ಸಮಗ್ರ ತನಿಖೆ ನಡೆಯಲಿರುವ ಹೋರಾಟದಲ್ಲಿ ಸಮೂದಾಯ ಎಲ್ಲಾ ಸಂಘಟನೆಗಳು ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂಮಾನಂದ ಕೊಲೆ ಪ್ರಕರಣ ಸಿಬಿಐಗೆ ವಹಿಸಲು, ಕುಟುಂಬಕ್ಕೆ ಪರಿಹಾರ ನೀಡಲು ಡಿಎಸ್ಎಸ್ ಆಗ್ರಹ
ಈ ಸಂದರ್ಬದಲ್ಲಿ ಎಂ.ಆರ್.ಭೇರಿ, ಹೇಮರಾಜ ಅಸ್ಕಿಹಾಳ, ಈರಣ್ಣ, ಶ್ರೀನಿವಾಸ ಕೊಪ್ಪರ, ಅಂಬಣ್ಣ ಆರೋಲಿ, ವಿಶ್ವನಾಥಪಟ್ಟಿ, ಜೈಭೀಮ ಸೇರಿದಂತೆ ಅನೇಕರಿದ್ದರು.




