- ಗುಡಿಸಲಿನ ಬಾಗಿಲಿಗೆ ಕರಪತ್ರ, ಗ್ರಾಮದಲ್ಲಿ ಫ್ಲೆಕ್ಸ್ ಅಳವಡಿಕೆ
- ಭೂಮಿ ವಸತಿ ನೀಡುವ ಕರಾರಿನೊಂದಿಗೆ ಬಂದಲ್ಲಿ ಮತ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಮತ್ತು ಇತರೆ ಗ್ರಾಮಗಳ ಅಲೆಮಾರಿ ಕುಟುಂಬಗಳು ತಮ್ಮ ಬೇಡಿಕೆ ಈಡೇರದೆ ಮತದಾನ ಮಾಡುವುದಿಲ್ಲವೆಂದು ಘೋಷಿಸಿವೆ. ಅಲ್ಲಿನ ಜನರು ತಮ್ಮ ಪ್ರತಿ ಗುಡಿಸಲಿನಲ್ಲೂ ‘ಭೂಮಿ, ವಸತಿ ಕೊಡದೇ ನಮ್ಮ ಓಟು ಕೊಡೆವು’ ಎಂಬ ಕರಪತ್ರ ಅಳವಡಿಸಿದ್ದಾರೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹನುಮಂತನಗರದ ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಕೆರೆಕೋಡಿ, ನಾಗವಲ್ಲಿ ಗ್ರಾಮದ ಅಲೆ ಮಾರಿಗಳು, ಕೊರಟಗೆರೆ ತಾಲೂಕಿನ ಅಮಲಾಪುರ, ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು, ಇರಕಸಂದ್ರ ಗ್ರಾಮದ ಎಲ್ಲ ಜಾತಿಯ ವಸತಿ ರಹಿತರು ತಮ್ಮ ವಾಸ ಸ್ಥಳದಲ್ಲಿ ಫ್ಲೆಕ್ಸ್ ಅಳವಡಿಸಿದ್ದಾರೆ.
ಅನೇಕ ವರ್ಷಗಳಿಂದ ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು ಸೇರಿದಂತೆ ತಾಲೂಕಿನ ಇತರೆ ಹೋಬಳಿಯ ಅಲೆಮಾರಿ ಕುಟುಂಬಗಳು ನಿವೇಶನ ಮತ್ತು ವಸತಿಗಾಗಿ ಜನಪ್ರತಿನಿಧಿಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಲೆದು ಕಂಗಾಲಾಗಿದ್ದೇವೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಅಥವಾ ಮುಖಂಡರು ನಮ್ಮಲ್ಲಿ ಮತ ಕೇಳಲು ಬಂದಾಗ, ನಮ್ಮ ಮತಗಳನ್ನು ಹಣ, ಹೆಂಡಕ್ಕೆ ಮಾರಿಕೊಳ್ಳಬಾರದೆಂದು ತೀರ್ಮಾನಿಸಿದ್ದೇವೆ. ಜೊತೆಗೆ ಭೂಮಿ, ವಸತಿ ಕೊಡದೆ ನಮ್ಮ ಮತಗಳನ್ನು ನೀಡಬಾರದೆಂದು ನಿರ್ಧರಿಸಿದ್ದೇವೆ ಎಂದು ಘೋಷಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾಮಪತ್ರ ಸಲ್ಲಿಕೆವರೆಗೂ ಮತದಾರರ ಪಟ್ಟಿ ಪರಿಷ್ಕರಿಸಬಹುದು: ಹೈಕೋರ್ಟ್
ತಾವು ವಾಸವಿರುವ ಜಾಗಗಳಲ್ಲಿ ಫ್ಲೆಕ್ಸ್ ಮತ್ತು ಮನೆಗಳ ಬಾಗಿಲುಗಳಿಗೆ ಪ್ಲೇ ಕಾರ್ಡ್ ಗಳನ್ನು ಹಾಕಿ, “ಭೂಮಿ ವಸತಿ ಕೊಡದೆ ನಮ್ಮ ವೋಟು ಕೊಡೆವು” ಎಂಬ ಅಭಿಯಾನದೊಂದಿಗೆ ಹೋರಾಟ ಪ್ರಾರಂಭಿಸಿದ್ದಾರೆ. ನಮ್ಮ ಮತಗಳು ಬೇಕಾದವರು ಗೆದ್ದ ನಂತರ ಭೂಮಿ ವಸತಿ ನೀಡುತ್ತೇವೆಂದು ಕರಾರಿನೊಂದಿಗೆ ಬಂದಲ್ಲಿ ಹಣ, ಹೆಂಡ ಪಡೆಯದೆ ನಾವು ಮತ ನೀಡುತ್ತೇವೆ ಎಂದು ಹುಲಿಕುಂಟೆ ಗ್ರಾಮದ ನಿವೇಶನ ಮತ್ತು ವಸತಿ ರಹಿತ ಅಲೆಮಾರಿ ಕುಟುಂಬಗಳು ತಿಳಿಸಿವೆ.