ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಇಂದು ತಾಂತ್ರಿಕ ದೋಷ ಮತ್ತು ನಿರ್ವಹಣೆಯ ಕೊರತೆಯಿಂದ ಮೂಲೆಗುಂಪಾಗಿವೆ. ಹೊಸ ಘಟಕಗಳ ನಿರ್ಮಾಣಕ್ಕೆ ಸರ್ಕಾರ ತೋರುತ್ತಿರುವ ಆಸಕ್ತಿ, ಹಳೆಯವುಗಳನ್ನು ದುರಸ್ತಿ ಮಾಡುವಲ್ಲಿ ತೋರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಬಾಗಿಲು ಮುಚ್ಚಿ ಬಂದ್ ಆಗಿರುವ ನೀರಿನ ಘಟಕಗಳಿಗೆ ನಿರ್ವಹಣೆಯ ಕಾಯಕಲ್ಪ ಬೇಕಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಹಾಗೂ ಸಹಕಾರಿ ಸಂಘಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪನೆ ಮಾಡಿವೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿ ಬಂದ ಈ ‘ಶುದ್ಧ ಕುಡಿಯುವ ನೀರಿನ ಘಟಕಗಳುʼ ಇಂದು ಪಾಳು ಬಿದ್ದಿವೆ. ರಾಯಚೂರು ಜಿಲ್ಲೆಯಾದ್ಯಂತ ಘಟಕಗಳನ್ನೇನೋ ನಿರ್ಮಿಸಲಾಗಿದೆ. ಆದರೆ, ಅವಕ್ಕೆ ಬೇಕಾದ ನಿರ್ವಹಣೆಯ ಕೊರತೆಯಿಂದ ನೂರಕ್ಕೂ ಹೆಚ್ಚು ಘಟಕಗಳ ಯಂತ್ರಗಳು ತುಕ್ಕು ಹಿಡಿದಿವೆ.
ಈಗಲೂ ಜಿಲ್ಲೆಯಾದ್ಯಂತ ಹೊಸ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ ಹಳೆಯ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕಗಳು. ಕೆಲವೆಡೆ ಉದ್ಘಾಟನೆಯಾದ ನಂತರ ಒಂದು ವಾರವೂ ಸರಿಯಾಗಿ ಕೆಲಸ ಮಾಡಿಲ್ಲ. ಹಾಳಾದ ಯಂತ್ರಗಳನ್ನು ದುರಸ್ತಿ ಮಾಡದ ಕಾರಣ ಅವು ತುಕ್ಕು ಹಿಡಿಯುತ್ತಿವೆ.

ರಾಯಚೂರು ಜಿಲ್ಲೆಯಾದ್ಯಂತ ಸುಮಾರು 716 ಶುದ್ಧ ಕುಡಿಯುವ ನೀರಿನ ಘಕಗಳಿವೆ. ಆದರೂ ಗ್ರಾಮೀಣ ಮತ್ತು ನಗರ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತ್ ಸುಪರ್ದಿಯಲ್ಲಿರುವ ಘಟಕಗಳು 686, ಆ ಪೈಕಿ 531 ಕೆಲಸ ನಿರ್ವಹಿಸುತ್ತಿವೆ. ನಿರ್ವಹಣೆಯಿಲ್ಲದ 155 ಘಟಕಗಳು ಬಾಗಿಲು ಮುಚ್ಚಿವೆ.
2025-26ನೇ ಸಾಲಿನಲ್ಲಿ ನಿರುಪಯುಕ್ತವಾದ ಶುದ್ಧ ಘಟಕಗಳ ದುರಸ್ತಿಗಾಗಿ ₹25.00 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನಃ ಆರಂಭಿಸಲು (SAP) ಎಂಬ ಸರ್ಕಾರದ ಒಂದು ವಿಶೇಷ ಕ್ರಿಯಾ ಯೋಜನೆ (Action Plan)ಯಡಿ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನಃ ಪ್ರಾರಂಭಿಸಲು (EAP) ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆದ್ಯತೆಯ ಆಧಾರದ ಮೇಲೆ ಕಾರ್ಯನಿರ್ವಹಿಸದ ಘಟಕಗಳನ್ನು ದುರಸ್ತಿ ಮಾಡಿ ಮರುಚಾಲನೆಗೊಳಿಸಲು ಕಲ್ಯಾಣ ಕರ್ನಾಟಕ ಜಿಲ್ಲೆಗೆ ಅನುದಾನ ಹಂಚಿಕೆ ಮಾಡಲಾಗಿದೆ.
ಜಿಲ್ಲೆಯ ಮಾನ್ವಿ ತಾಲೂಕು ಅತ್ತನೂರು ಗ್ರಾಮದ ಜನರಿಗೆ ಸುಮಾರು 50 ವರ್ಷಗಳಿಂದ ಕೆರೆ ನೀರೇ ಗತಿ. ಅದೇ ರೀತಿ ಸಿಂಧನೂರು ತಾಲೂಕು ಹೊಸಳ್ಳಿ ಇಜೆ ಪಂಚಾಯತ್ ವ್ಯಾಪ್ತಿಗೆ ಬರುವ ಹನುಮನಗರ ಕ್ಯಾಂಪ್ ಸೇರಿ ನಾನಾ ಭಾಗದಲ್ಲಿ ಕೆರೆ ನೀರು, ಬಾವಿ ನೀರನ್ನೇ ಸೇವಿಸಿ ಜನ ಜೀವಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳು ಬಿದ್ದು ನೀರಿನ ಸಮಸ್ಯೆ ತಾರಕಕ್ಕೇರಿದೆ. ಸಿರವಾರ ತಾಲೂಕು ಮರಾಠ, ಮಾನ್ವಿ ತಾಲೂಕು ಉಮಳಿ ಹೊಸುರ, ಚಿಂಚರಿಕಿ, ದೇವದುರ್ಗ ತಾಲೂಕು ಪಿಲಿಗುಂಡ, ಲಿಂಗಸುಗೂರು ತಾಲೂಕು ಮುದಗಲ್ ಹಾಗೂ ಗೊಲಪಲ್ಲಿಯಲ್ಲೂ ಇದೇ ಸಮಸ್ಯೆ ಹಲವು ವರ್ಷಗಳಿಂದ ತಲೆದೋರಿದ್ದರೂ ಸ್ಥಳೀಯ ಆಡಳಿತ ಮಾತ್ರ ಸುಮ್ಮನೆ ಕುಳಿತಿದೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಹೆಚ್ ಎಂ ಬಾಬು ಮಾತನಾಡಿ, “ನಿರ್ವಹಣೆಯಿಲ್ಲದೆ, ಬಳಕೆಯಿಲ್ಲದೇ ಕೆಲವು ಕಡೆ ನೀರಿನ ಘಟಕಗಳು ಕುಡುಕರ ಅಡ್ಡೆಯಾಗಿದ್ದು, ಕೆಲವೊಂದು ಹಂದಿಗಳ ತಾಣವಾಗಿದೆ. ಸುಮಾರು ವರ್ಷಗಳಿಂದ ಹಾಳು ಬಿದ್ದಿವೆ. ಅಧಿಕಾರಿಗಳು ಇನ್ನೂ ದುರಸ್ತಿ ಮಾಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸಹಕಾರಿ ಸಂಘಗಳು ನಿರ್ಮಿಸಿ, ನಿರ್ವಹಣೆ ಮಾಡುತ್ತಿರುವ ಘಟಕಗಳಲ್ಲಿ ಅಷ್ಟೊಂದು ಸಮಸ್ಯೆ ಇಲ್ಲ. ಆದರೆ ಇತರ ಸರ್ಕಾರಿ ಇಲಾಖೆಗಳು ನಿರ್ವಹಿಸುತ್ತಿರುವ ಘಟಕಗಳು ಜನರಿಗೆ ಸೇವೆ ನೀಡುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ನದಿ, ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಸಹಜವಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕಲುಷಿತ ನೀರು ಮತ್ತು ನಿಗದಿಗಿಂತ ಅತ್ಯಧಿಕ ಪ್ರಮಾಣದಲ್ಲಿನ ಫ್ಲೋರೈಡ್, ನೈಟ್ರೇಟ್, ಗಡಸುತನ ಮತ್ತು ಕರಗಿದ ಘನ ಅಂಶಗಳು ನೀರಿನೊಂದಿಗೆ ಜನರ ಹೊಟ್ಟೆ ಸೇರದೆ ಇರಲಿ ಎಂದು ಶುದ್ಧ ಕುಡಿಯುವ ನೀರಿನ ಘಕಗಳನ್ನು ನಿರ್ಮಾಣ ಮಾಡಲಾಗಿದೆ.
ಶುದ್ಧ ನೀರಿನ ಘಟಕ ನಿರ್ಮಿಸಿ ಅದನ್ನು ಉದ್ಘಾಟನೆಗೆ ಸಚಿವರು, ಶಾಸಕರು ವಿಜೃಂಭಣೆಯಿಂದ ಉದ್ಘಾಟಿಸಿ ಸಮಸ್ಯೆ ಮುಗಿಯಿತೆಂದು ಭಾಷಣ ಮಾಡಿ ತೆರಳುತ್ತಾರೆ. ಆದರೆ ಘಟಕದಲ್ಲಿ ಒಂದು ದಿನವೂ ನೀರು ಬಂದಿಲ್ಲ. ಈ ಬಗ್ಗೆ ನಗರಸಭೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಿದ್ದೆವು. ಆದರೂ ಸಮಸ್ಯೆ ಬಗೆಹರಿಯಲಿಲ್ಲ. ಯಂತ್ರಗಳು ಸರಿಯಾಗಿವೆಯೇ, ಹಾಳಾಗಿವೆಯೇ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸುಮ್ಮನೆ ಕಟ್ಟಿ ಬಿಟ್ಟಿದ್ದಾರಷ್ಟೇ.
ರೈತ ಹೋರಾಟಗಾರ್ತಿ ಹಾಗೂ ಬಿಜೆಪಿ ಮುಖಂಡರಾದ ರೂಪ ನಾಯಕ ಮಾತನಾಡಿ, “ಹಳ್ಳಿಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ, ಈ ಘಟಕಗಳು ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜನರಿಗೆ ನೀರು ಸಿಗಬೇಕಾದಲ್ಲಿ, ಒಂದು ಹನಿ ನೀರು ಕೂಡ ಬಂದಿಲ್ಲ, ಬದಲಾಗಿ ಬೀರು ಬರುತ್ತಿದೆ” ಎಂದು ಟೀಕಿಸಿದರು.
ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು, ಇವು ಕೇವಲ ಕಾಗದದ ಮೇಲಿನ ಯೋಜನೆಗಳಾಗಿ ಉಳಿದಿವೆ. ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಗಮನಿಸಿ, ದೋಷಗಳನ್ನು ಸರಿಪಡಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್), ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಸಹಕಾರಿ ಸಂಘಗಳ ಸಹಕಾರದೊಂದಿಗೆ ರಾಯಚೂರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿವೆ.

ಫ್ಲೋರೈಡ್‌ಯುಕ್ತ ಕಲುಷಿತ ನೀರನ್ನೇ ಕುಡಿಯುವ ಅನಿವಾರ್ಯತೆಯಲ್ಲಿರುವ ಗ್ರಾಮೀಣ ಜನತೆಗೆ ಈ ಘಟಕಗಳು ಸಂಜೀವಿನಿಯಾಗಬೇಕಿತ್ತು. ಆದರೆ, ತಾಂತ್ರಿಕ ದೋಷ ಮತ್ತು ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯದಿಂದಾಗಿ ಅರ್ಧಕ್ಕೂ ಹೆಚ್ಚು ಘಟಕಗಳು ಸ್ತಬ್ಧವಾಗಿರುವುದು ದುರದೃಷ್ಟಕರ. 2025-26ನೇ ಸಾಲಿನಲ್ಲಿ ದುರಸ್ತಿಗಾಗಿ ಬಿಡುಗಡೆಯಾಗಿರುವ ₹25.00 ಲಕ್ಷ ಅನುದಾನ ಮತ್ತು ಸರ್ಕಾರದ ವಿಶೇಷ ಕ್ರಿಯಾ ಯೋಜನೆ (SAP) ಬೇಸಿಗೆಯ ಬಿಸಿ ಏರುವ ಮೊದಲೇ ಕಾರ್ಯರೂಪಕ್ಕೆ ಬರಬೇಕಿದೆ.
ಇದನ್ನೂ ಓದಿ: ರಾಯಚೂರು | ಕೆಕೆಆರ್‌ಡಿಬಿ ಅನುದಾನ ದುರುಪಯೋಗ ಅಜಯಸಿಂಗ್ ರಾಜೀನಾಮೆ ನೀಡಲಿ; ರಾಘವೇಂದ್ರ ಕುಷ್ಟಗಿ
ರೈತ ಮುಖಂಡರು ಸೂಚಿಸಿದಂತೆ, ಪ್ರತಿ ಘಟಕಕ್ಕೆ ಸ್ಥಳೀಯ ಯುವಕರನ್ನು ನಿರ್ವಾಹಕರನ್ನಾಗಿ ನೇಮಿಸಿ ಹೊಣೆಗಾರಿಕೆ ನೀಡುವುದು ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಬಲ್ಲದು. ಹೊಸ ಯೋಜನೆಗಳನ್ನು ಘೋಷಿಸುವ ಉತ್ಸಾಹದ ಜೊತೆಗೆ, ಹಳೆಯ ಆಸ್ತಿಪಾಸ್ತಿಗಳನ್ನು ರಕ್ಷಿಸುವ ಇಚ್ಛಾಶಕ್ತಿಯನ್ನು ಆಡಳಿತ ಮಂಡಳಿ ಪ್ರದರ್ಶಿಸಬೇಕಿದೆ. ಆಗ ಮಾತ್ರ ಜನತೆಗೆ ಶುದ್ಧ ನೀರು ಸಿಗಲು ಸಾಧ್ಯ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



