ಬರ ಪರಿಸ್ಥಿತಿ ವೀಕ್ಷಣೆಗೆ ಜಿಲ್ಲೆಗೆ ಆಗಮಿಸಿದ್ದ ಸಚಿವ ಡಾ. ಅಜಯ ಧರಂಸಿಂಗ್ ಅವರನ್ನು ವಿಕಲಚೇತನರ ಜಿಲ್ಲಾ ಘಟಕದ ಪದಾಧಿಕಾರಿಗಳು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ವಿಕಲಚೇತನರಿಗೆ ಸ್ಥಗಿತಗೊಂಡಿರುವ ಸಾಮಾಜಿಕ ಭದ್ರತಾ ಮಾಸಾಶನವನ್ನು ಮರುಪ್ರಾರಂಭಿಸಬೇಕು. ವಿಕಲಚೇತನರ ಮಾಸಿಕ ಪಿಂಚಣಿಯನ್ನು ಕನಿಷ್ಠ ₹3,000ಕ್ಕೆ ಹೆಚ್ಚಿಸಬೇಕು ಹಾಗೂ ವಾರ್ಷಿಕ ₹32,000 ಆದಾಯ ಮಿತಿಯಿಂದ ವಿಕಲಚೇತನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ವಿಕಲಚೇತನರಿಗೆ ಸಂಪೂರ್ಣ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು. ವಿಕಲಚೇತನರಿಗೆ ಮೀಸಲಾದ ಶೇ.5ರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಯುಡಿಐಡಿ ಕಾರ್ಡ್ ಹಾಗೂ ವಿಕಲಚೇತನ ಪ್ರಮಾಣಪತ್ರಗಳ ವಿತರಣೆಯಲ್ಲಿನ ವಿಳಂಬವನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಗ್ರಾಮ ಪಂಚಾಯಿತಿ, ಪಟ್ಟಣ, ನಗರ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳನ್ನು ಶಾಶ್ವತಗೊಳಿಸಿ, ಸಮರ್ಪಕ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಪುನರ್ವಸತಿ ಕಾರ್ಯಕರ್ತರಿಗೆ ಪ್ರತ್ಯೇಕ ಕಚೇರಿ ಕೊಠಡಿ, ರ್ಯಾಂಪ್, ಶೌಚಾಲಯ, ಸುಗಮ ಪ್ರವೇಶ ವ್ಯವಸ್ಥೆ, ಗಣಕಯಂತ್ರ ಹಾಗೂ ಪ್ರಿಂಟರ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ವಿಕಲಚೇತನರ ಸಮಸ್ಯೆಗಳ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಿಯಮಿತವಾಗಿ ಸಭೆ ನಡೆಸಿ, ವಿಕಲಚೇತನ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ತಮ್ಮ ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸಬೇಕು ಎಂದು ವಿಕಲಚೇತನರ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರಿಗೆ ಉದ್ಯೋಗ ಒದಗಿಸಲು ನರೇಗಾ ಕಾಮಗಾರಿಗಳನ್ನು ಹೆಚ್ಚಿಸಲಾಗುವುದು: ಅಜಯ್ ಧರಂಸಿಂಗ್
ಈ ಸಂದರ್ಭದಲ್ಲಿ ಸಂಕಲ್ಪ ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್, ಗೌರವಾಧ್ಯಕ್ಷ ದೇಸಾಯಿ ದೊತರಬಂಡಿ, ಜಿಲ್ಲಾ ಉಪಾಧ್ಯಕ್ಷೆ ಸಾವಿತ್ರಮ್ಮ, ತಾಲೂಕು ಅಧ್ಯಕ್ಷೆ ಲಕ್ಷ್ಮೀ ಹಾಗೂ ಪದಾಧಿಕಾರಿಗಳಾದ ನಿಂಗನಗೌಡ, ಬಿ. ಸುರೇಶ್, ಮಂಜುನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




