ರಾಯಚೂರು ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ದಲಿತ ಕೊಲೆ ಪ್ರಕರಣಗಳನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು, ಬಿಎಸ್‌ಪಿ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಭಾನುವಾರ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಿಎಸ್‌ಪಿ ಮುಖಂಡ ಭೂಮಾನಂದ, ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಹಾಗೂ ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಅವರ ಕೊಲೆ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಹದ್ದಿನಾಳ ಗ್ರಾಮದ ಭೂಮಾನಂದ ಅವರ ಸಮಾಧಿ ಸ್ಥಳದಿಂದ ರಾಯಚೂರು ಜಿಲ್ಲಾ ಕೇಂದ್ರದವರೆಗೆ ಪ್ರತಿಭಟನಾಕಾರರು ಬೈಕ್ ರ್ಯಾಲಿ ನಡೆಸಿದರು. ರ್ಯಾಲಿಯಲ್ಲಿ ಭಾಗವಹಿಸಿದ್ದವರ ಕೈಯಲ್ಲಿ ನೀಲಿ ಧ್ವಜಗಳು ರಾರಾಜಿಸುತ್ತಿದ್ದವು. ಮಾರ್ಗದುದ್ದಕ್ಕೂ ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾವನ್ನೂ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಕಾರ್ಯಕ್ರಮ ನಡೆಸಿ ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲರು ಎಸ್ ಮಾರೆಪ್ಪ, ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಭೀಕರ ಹತ್ಯೆಗಳು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಯಾರೇ ಆಗಿದ್ದರೂ, ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಭೂಮಾನಂದ ಮತ್ತು ಅಶ್ವಿನಿ ಛಲವಾದಿ ಕುಟುಂಬಸ್ಥರ ಸಮ್ಮುಖದಲ್ಲಿ ವೇದಿಕೆ ಮೇಲೆಯೇ ಮನವಿ ಪತ್ರ ಸಲ್ಲಿಸಲಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | 761 ಅಂಗನವಾಡಿಗಳಿಗಿಲ್ಲ ಸ್ವಂತ ಸೂರು: ಸೋರುವ ಕೊಠಡಿಗಳಲ್ಲೇ ಮಕ್ಕಳ ಊಟ, ಪಾಠ
ದಲಿತಪರ ಹೋರಾಟಗಾರರಾ ರವೀಂದ್ರನಾಥ ಪಟ್ಟಿ ಎಂ ಆರ್ ಎಸ್ ಎಚ್ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಗಲ್, ಶಿವಪ್ಪ ಫಲಕನಮರಡಿ, ಎಸ್ ಮಾರೆಪ್ಪ ಹೇಮರಾಜ ಅಸ್ಕಿಹಾಳ, ಶಾಂತಕುಮಾರ ಹೊನ್ನಟಗಿ, ರಾಜಪ್ಪ ಸಿರವಾರಕರ್, ಜೆ ಅಬ್ರಾಂ ಹೊನ್ನಟಗಿ, ಹಿರಿಯ ಬಹುಜನ ಚಿಂತಕ ಎಂ ಆರ್ ಬೇರಿ, ಎಂ ಆರ್ ಎಸ್ ಎಚ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರಿ, ವಕೀಲ ತಮ್ಮಣ್ಣ ಬೊಮ್ಮನಾಳ, ಬಸವರಾಜ, ನರಸಪ್ಪ ದಂಡೋರ, ಹಿರಿಯ ಮುಖಂಡ ಭೂತಪ್ಪ ಜಾಲಹಳ್ಳಿ, ಯಲ್ಲಪ್ಪ ಆಲ್ಬರ್ತಿ, ಜೈ ಭೀಮ ಹನುಮಂತ, ವರಾಜ ನಕ್ಕುಂದಿ, ಯೇಸು ಗಟ್ಟೂರು, ಜಾಕೋಬ್ ಬೋಮ್ಮನಾಳ, ಬಸವರಾಜ ಜಗ್ಗಿ ಮೌನೇಶ ಗಾಣದಾಳ, ನು ಕಮಲದಿನ್ನಿ, ಮರಿಗೌಡ ಮಲದಕಲ್, ಯಲ್ಲಪ್ಪ ಹಿರೇಬಾದರದಿನ್ನಿ, ಮೌನೇಶ ಪೀತಗಲ, ನರಸಿಂಹಲು, ಎಲ್ ವಿ ಸು ಡಿ ಜಯಪ್ಪ ಸಿರವಾರ, ಮಲ್ಲಪ್ಪ ನವಲಕಲ ಮತ್ತು ಹತ್ತಕ್ಕೂ ಹೆಚ್ಚು ದಲಿತಪರ ಸಂಘಟನೆಯ ರಾಜ್ಯ ಜಿಲ್ಲಾ ಮತ್ತು ವಿವಿಧ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಬಿಎಸ್ಪಿ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.




