ಸಿರವಾರ ತಾಲೂಕಿನ ಹೀರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಂಗೇರ ಗ್ರಾಮದ ಅಂಬೇಡ್ಕರ್ ನಗರ ನಿವಾಸಿಗಳು ಕಳೆದ ಒಂದು ವರ್ಷದಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ತಕ್ಷಣವೇ ಸಮಸ್ಯೆ ಬಗೆಹರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ದಾದಾ ಸಾಹೇಬ್ ಡಾ. ಎನ್. ಮೂರ್ತಿ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ನೀರಿಗಾಗಿ ಗ್ರಾಮದ ಮಹಿಳೆಯರು ಸುಮಾರು ಅರ್ಧ ಕಿಲೋಮೀಟರ್ ದೂರ ತೆರಳಿ ಕೊಡಗಳ ಮೂಲಕ ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಪುರುಷರು ದ್ವಿಚಕ್ರ ವಾಹನ ಹಾಗೂ ಸೈಕಲ್‌ಗಳ ಮೂಲಕ ನೀರು ತಂದು ಬಳಸುತ್ತಿದ್ದಾರೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೀರು ನಿರ್ವಹಣೆ ಮಾಡುವ ಸಿಬ್ಬಂದಿಗೆ ಮನವಿ ಸಲ್ಲಿಸಿ 10 ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ದುರಸ್ತಿಯಲ್ಲಿರುವ ಬೋರ್‌ವೆಲ್‌ಗಳನ್ನು ಕೂಡಲೇ ದುರಸ್ತಿ ಮಾಡಿಸಿ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು. 10 ದಿನಗಳಾದರೂ ನಿರ್ಲಕ್ಷ್ಯ ವಹಿಸಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ: 6 ಅಡುಗೆ ಸಹಾಯಕಿಯರ ವಜಾ
ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ಮತ್ತಷ್ಟು ನಿರ್ಲಕ್ಷ್ಯ ವಹಿಸಿದರೆ, ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದರು.




