ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ರಾಯಚೂರು ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.
ಹೌದು, ರಾಯಚೂರು ಜಿಲ್ಲೆಯ ಜಾನುವಾರು ಸಾವುಗಳ ಪ್ರಮಾಣ ಹೆಚ್ಚುತ್ತಿರುವ ಆತಂಕ ಒಂದಾದರೆ, ಜಾನುವಾರು ಕಳೆದುಕೊಂಡ ರೈತರಿಗೆ ಸಕಾಲಕ್ಕೆ ಪರಿಹಾರ ಕೈಗೆ ಬಾರದಿರುವುದರಿಂದ ನಿತ್ಯ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ, 2023-24ರಿಂದ 2026-27ರ ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ 2,769 ಜಾನುವಾರುಗಳು ಹಾಗೂ 2,167 ಕುರಿ–ಮೇಕೆಗಳು ಸೇರಿ ಒಟ್ಟು 4,936 ಜಾನುವಾರುಗಳು ಮೃತಪಟ್ಟಿವೆ. ಅನುಗ್ರಹ ಯೋಜನೆಯಡಿ ಪರಿಹಾರ ನೀಡಲಾಗುತ್ತಿದ್ದರೂ, ಹಲವು ಪ್ರಕರಣಗಳಲ್ಲಿ ಪರಿಹಾರ ಪಾವತಿ ವಿಳಂಬವಾಗಿದೆ. ವಿಶೇಷವಾಗಿ 2025-26ನೇ ಸಾಲಿನಲ್ಲಿ ಜಾನುವಾರುಗಳ ಸಾವಿಗೆ ಸಂಬಂಧಿಸಿದಂತೆ ₹132.17 ಲಕ್ಷ ಪರಿಹಾರ ಬಾಕಿ ಉಳಿದಿದೆ. 2026-27ನೇ ಸಾಲಿನ ಜುಲೈ ಅಂತ್ಯದವರೆಗೆ ಮೃತಪಟ್ಟ ಜಾನುವಾರುಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ₹45.60 ಲಕ್ಷ ಪರಿಹಾರ ಪಾವತಿಸಬೇಕಿದೆ.
ಈ ಅಂಕಿ-ಅಂಶಗಳನ್ನು ಗಮನಿಸಿದರೆ ಜಾನುವಾರುಗಳ ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿದೆ. 2023-24ನೇ ಸಾಲಿನಲ್ಲಿ ಎತ್ತು, ಎಮ್ಮೆ, ಹಸು, ಹೋರಿ, ಕರು ಸೇರಿದಂತೆ 379 ಜಾನುವಾರುಗಳು ಮೃತಪಟ್ಟಿದ್ದು, ₹37.90 ಲಕ್ಷ ಪರಿಹಾರ ಪಾವತಿಸಲಾಗಿದೆ. ಈ ಸಾಲಿನಲ್ಲಿ ಯಾವುದೇ ಪರಿಹಾರ ಬಾಕಿ ಉಳಿದಿಲ್ಲ ಎಂಬುದು ತಿಳಿದುಬಂದಿದೆ.
2024-25ರಲ್ಲಿ ಸಾವಿನ ಸಂಖ್ಯೆ 974ಕ್ಕೆ ಏರಿಕೆಯಾಗಿದ್ದು, ₹97.40 ಲಕ್ಷ ಪರಿಹಾರ ಪಾವತಿಸಲಾಗಿದೆ. 2025-26ರಲ್ಲಿ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿ 1,112 ಜಾನುವಾರುಗಳು ಮೃತಪಟ್ಟಿವೆ. ಆದರೆ ಈ ಪೈಕಿ ಕೇವಲ ₹26.25 ಲಕ್ಷ ಪರಿಹಾರ ಪಾವತಿಸಲಾಗಿದ್ದು, ₹132.17 ಲಕ್ಷ ಬಾಕಿ ಉಳಿದಿದೆ. 2026-27ನೇ ಸಾಲಿನ ಜುಲೈ ಅಂತ್ಯದವರೆಗೆ 304 ಜಾನುವಾರುಗಳು ಮೃತಪಟ್ಟಿದ್ದು, ಅವುಗಳಿಗೆ ಸಂಬಂಧಿಸಿದಂತೆ ₹45.60 ಲಕ್ಷ ಪರಿಹಾರ ಪಾವತಿ ಬಾಕಿಯಿದೆ.
ಕುರಿ-ಮೇಕೆಗಳ ಸಾವು ಹೆಚ್ಚಳ
2023-24ರಲ್ಲಿ 322 ಕುರಿ–ಮೇಕೆಗಳು ಮೃತಪಟ್ಟಿದ್ದು, ₹15.92 ಲಕ್ಷ ಪರಿಹಾರ ಪಾವತಿಸಲಾಗಿದೆ. 2024-25ರಲ್ಲಿ ಸಾವಿನ ಸಂಖ್ಯೆ 527ಕ್ಕೆ ಏರಿದ್ದು, ₹26.16 ಲಕ್ಷ ಪರಿಹಾರ ನೀಡಲಾಗಿದೆ. 2025-26ರಲ್ಲಿ ಅತಿ ಹೆಚ್ಚು 991 ಕುರಿ-ಮೇಕೆಗಳು ಮೃತಪಟ್ಟಿದ್ದು, ₹59.10 ಲಕ್ಷ ಪರಿಹಾರ ಪಾವತಿಸಲಾಗಿದೆ. 2026-27ನೇ ಸಾಲಿನ ಜುಲೈ ಅಂತ್ಯದವರೆಗೆ 267 ಕುರಿ–ಮೇಕೆಗಳು ಮೃತಪಟ್ಟಿದ್ದು, ₹18.69 ಲಕ್ಷ ಪರಿಹಾರ ಬಾಕಿಯಿದೆ.
ಕುರಿ-ಮೇಕೆಗಳ ಸಾವಿನ ಪ್ರಕರಣಗಳಲ್ಲಿಯೂ ಪರಿಹಾರ ಪಾವತಿಯಲ್ಲಿ ವಿಳಂಬವಾಗುತ್ತಿರುವುದರಿಂದ ಸಣ್ಣ, ಅತಿಸಣ್ಣ ಪಶುಪಾಲಕರಿಗೆ ನಷ್ಟದ ಹೊರೆ ಹೆಚ್ಚಾಗಿದೆ. ಸರ್ಕಾರ ಜಾನುವಾರುಗಳ ಸಾವಿಗೆ ನೀಡುವ ಪರಿಹಾರ ಮೊತ್ತವನ್ನು ಪರಿಷ್ಕರಿಸಿದೆ. 2023-24ನೇ ಸಾಲಿನಲ್ಲಿ ಹಸು, ಎಮ್ಮೆ ಹಾಗೂ ಎತ್ತುಗಳಿಗೆ ತಲಾ ₹10 ಸಾವಿರ ಪರಿಹಾರ ನೀಡಲಾಗುತ್ತಿತ್ತು. 2025-26ರಿಂದ ಈ ಮೊತ್ತವನ್ನು ₹15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕುರಿ ಮತ್ತು ಮೇಕೆಗಳ ಪರಿಹಾರ ಮೊತ್ತವನ್ನೂ ಹೆಚ್ಚಿಸಲಾಗಿದೆ. 2023-24ರಲ್ಲಿ 3ರಿಂದ 6 ತಿಂಗಳ ವಯಸ್ಸಿನ ಮರಿಗಳಿಗೆ ತಲಾ ₹3,500 ಹಾಗೂ ಆರು ತಿಂಗಳ ಮೇಲ್ಪಟ್ಟ ಕುರಿ–ಮೇಕೆಗಳಿಗೆ ತಲಾ ₹5 ಸಾವಿರ ಪರಿಹಾರ ನೀಡಲಾಗುತ್ತಿತ್ತು. 2025-26ರಿಂದ ಈ ಮೊತ್ತವನ್ನು ಕ್ರಮವಾಗಿ ₹5 ಸಾವಿರ ಮತ್ತು ₹7,500ಕ್ಕೆ ಹೆಚ್ಚಿಸಲಾಗಿದೆ.
ಪರಿಹಾರ ಮೊತ್ತ ಹೆಚ್ಚಿಸಿರುವುದು ರೈತರಿಗೆ ನೆರವಾಗುವ ಕ್ರಮವಾದರೂ, ಬಾಕಿ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ಅದರ ಉದ್ದೇಶವೇ ಕುಂಠಿತವಾಗುತ್ತದೆ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗುತ್ತಿದೆ. ಅಪಘಾತ ಮತ್ತು ಆಕಸ್ಮಿಕ ಸಾವುಗಳ ಜತೆಗೆ ಕಾಲುಬಾಯಿ ರೋಗ, ಕಂದುರೋಗ, ಕರಳು ಬೇನೆ, ಹುಚ್ಚು ನಾಯಿ ರೋಗ ಹಾಗೂ ಚರ್ಮಗಂಟು ರೋಗಗಳು ಜಾನುವಾರುಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ ಎಂಬುದು ಪಶುಸಂಗೋಪನಾ ಇಲಾಖೆ ಮಾಹಿತಿ ಇದೆ.
ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ರೋಗ ನಿಯಂತ್ರಣಕ್ಕಾಗಿ ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಲಸಿಕೆ, ರೋಗ ಪತ್ತೆ, ಚಿಕಿತ್ಸೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗಗಳ ತಡೆ, ತ್ವರಿತ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ.
ತಪ್ಪದ ರೈತರ ಅಲೆದಾಟ
ರೈತ ಮುಖಂಡ ಚಾಮರಸ ಮಾಲಿ ಪಾಟೀಲ ಮಾತನಾಡಿ, “ಜಾನುವಾರುಗಳು ರೋಗದಿಂದ ಅಥವಾ ಆಕಸ್ಮಿಕ ಸಾವನ್ನಪ್ಪಿದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಆದರೆ ಪರಿಹಾರದ ಹಣ ಪಡೆಯಲು ರೈತರು ನಂತರ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಮಳೆ, ಬೆಳೆ ನಷ್ಟದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತನಿಗೆ ಜಾನುವಾರು ಸಾವು ಮತ್ತೊಂದು ದೊಡ್ಡ ಹೊಡೆತ ನೀಡುತ್ತದೆ. ಪರಿಹಾರ ಪ್ರಕ್ರಿಯೆಯನ್ನು ಸರಳಗೊಳಿಸಿ, ನಿಗದಿತ ಅವಧಿಯೊಳಗೆ ಹಣ ಪಾವತಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಜಾನುವಾರು ಕಳೆದುಕೊಂಡ ರೈತರೊಬ್ಬರು ಮಾತನಾಡಿ, “ಸರ್ಕಾರ ಪರಿಹಾರ ನೀಡುತ್ತಿದೆ. ಆದರೆ ಹಣ ಕಂತುಗಳಲ್ಲಿ ಅಥವಾ ವಿಳಂಬವಾಗಿ ಕೈ ಸೇರುವುದರಿಂದ ಹೊಸ ಜಾನುವಾರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಪರಿಹಾರದ ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ರೈತರ ಖಾತೆಗೆ ಜಮಾ ಮಾಡಿದರೆ ಮತ್ತೆ ಜಾನುವಾರು ಖರೀದಿಸಿ ಜೀವನೋಪಾಯ ಮುಂದುವರಿಸಲು ಅನುಕೂಲವಾಗುತ್ತದೆ” ಎಂದು ಹೇಳಿದರು.
ಸರ್ಕಾರ ರೈತರ ನೆರವಿಗೆ ಧಾವಿಸಲಿ
ಜಾನುವಾರುಗಳು ಗ್ರಾಮೀಣ ಕುಟುಂಬಗಳ ಪ್ರಮುಖ ಆದಾಯದ ಮೂಲವಾಗಿವೆ. ಹಸು, ಎಮ್ಮೆ, ಎತ್ತು, ಕುರಿ-ಮೇಕೆಗಳ ಸಾವು ರೈತ ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರಲ್ಲೂ ಸಣ್ಣ ರೈತರು ಮತ್ತು ಪಶುಪಾಲಕರಿಗೆ ಒಂದು ಜಾನುವಾರು ಕಳೆದುಕೊಳ್ಳುವುದೇ ದೊಡ್ಡ ಆರ್ಥಿಕ ನಷ್ಟ. ಸಾವಿನ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ, ದಾಖಲೆ ಪ್ರಕ್ರಿಯೆ, ಪರಿಹಾರ ಮಂಜೂರು ಹಾಗೂ ಹಣ ವರ್ಗಾವಣೆ ಹಂತಗಳನ್ನು ತ್ವರಿತಗೊಳಿಸುವ ಅಗತ್ಯವಿದೆ. ಬಾಕಿ ಇರುವ ಪರಿಹಾರವನ್ನು ಶೀಘ್ರ ಪಾವತಿಸುವುದರ ಜತೆಗೆ ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಾತ್ರ ರೈತರ ನಷ್ಟವನ್ನು ಕಡಿಮೆ ಮಾಡಲು ಸಾಧ್ಯ ಎಂಬುದು ರೈತ ಸಮೂಹದ ಅಭಿಪ್ರಾಯ.
ಇದನ್ನೂ ಓದಿ : SIR | ಮತ ಡಿಲೀಟ್ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR
ಜಾನುವಾರುಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಒಂದು ಕಡೆ ಆತಂಕ ಮೂಡಿಸಿದರೆ, ಮತ್ತೊಂದೆಡೆ ಪರಿಹಾರ ಪಾವತಿಯಲ್ಲಿ ಉಳಿದಿರುವ ಬಾಕಿ ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಜಾನುವಾರು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರವು ಕೇವಲ ಸರ್ಕಾರಿ ನೆರವಲ್ಲ, ಅವರ ಜೀವನೋಪಾಯವನ್ನು ಮರುಸ್ಥಾಪಿಸಲು ಅಗತ್ಯವಾದ ಆರ್ಥಿಕ ಬೆಂಬಲವಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



