ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ ಅಥವಾ ದೃಢೀಕೃತ ದಾಖಲೆಗಳಿಲ್ಲದೆ ಫಾರಂ-7ರ ಅಡಿಯಲ್ಲಿ ಸುಮಾರು 3,244 ಮತದಾರರನ್ನು ‘ಸ್ಥಳಾಂತರ’ ಹಾಗೂ ‘ಗೈರು’ ಎಂದು ನಮೂದಿಸಿ, ಸುಳ್ಳು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸುವ ಮೂಲಕ ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಒಳಸಂಚು ರೂಪಿಸಲಾಗಿದೆ ಎಂಬ ಆರೋಪದಡಿ ಭಾಲ್ಕಿಯ ನಗರ ಪೊಲೀಸ್ ಠಾಣೆಯಲ್ಲಿ 32 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿಯ ನಿವಾಸಿ ಮೊಹಮ್ಮದ್ ಅತೀಕ್ ಅಹಮದ್ ಎಂಬುವವರು ನೀಡಿದ ದೂರಿನಲ್ಲಿ, ಭಾಲ್ಕಿ ನಗರದ ಬೂತ್ ನಂಬರ್ 1ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆ. 2004ರಿಂದ ಸಾರ್ವತ್ರಿಕ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ನಿರಂತರವಾಗಿ ಮತದಾನ ಮಾಡಿದ್ದು, 2024ರಲ್ಲಿ ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದ ಸಂದರ್ಭದಲ್ಲಿ ಫಾರಂ-7ರ ಅಡಿಯಲ್ಲಿ ತಮ್ಮ ಹೆಸರು ಸೇರಿದಂತೆ ಒಟ್ಟು 3,244 ಮತದಾರರನ್ನು ‘ಸ್ಥಳಾಂತರ’ ಹಾಗೂ ‘ಗೈರು’ ಎಂದು ನಮೂದಿಸಿ, ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮುಂದೆ ಹಾಜರುಪಡಿಸಿದ್ದಾರೆ ಎಂದು ಅತೀಕ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಅರ್ಜಿಗಳನ್ನು ಪರಿಶೀಲಿಸಿದ ನೋಂದಣಾಧಿಕಾರಿಗಳು, ಸಂಬಂಧಿಸಿದ ವ್ಯಕ್ತಿಗಳು ಹಾಗೂ ಆಕ್ಷೇಪಣಾದಾರರು ಫಾರಂ-7ಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟಿಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ, ಶಿವರಾಜ, ದೀಪಕ, ಗೌಸೋದ್ದಿನ್ ಸಾಬ್, ಜಗದೀಶ, ಯೋಗೇಶ, ಕಲ್ಯಾಣರಾವ ಸೇರಿದಂತೆ ಸುಮಾರು 32 ಜನರು ದೊಡ್ಡ ಪ್ರಮಾಣದಲ್ಲಿ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾವೇ ಸುಳ್ಳು ಅರ್ಜಿಗಳಲ್ಲಿ ಬರೆದು ತಮ್ಮ ಹಾಗೂ ಇತರ ಮತದಾರರ ಸಹಿಗಳನ್ನು ನಕಲು ಮಾಡಿ, ಯಾವುದೇ ದೃಢೀಕೃತ ದಾಖಲೆಗಳನ್ನು ಪಡೆಯದೆ ಹಾಗೂ ಸಂಬಂಧಿಸಿದ ಮತದಾರರ ಗಮನಕ್ಕೂ ಬಾರದಂತೆ ವಿವಿಧ ಮೊಬೈಲ್ ಸಂಖ್ಯೆ ನಮೂದಿಸಿ, ಭಾರತದ ಸಂವಿಧಾನ ಅಡಿಯಲ್ಲಿ ನೀಡಿರುವ ಮತದಾನದ ಹಕ್ಕನ್ನು ಕಸಿದು ಮೋಸ ಮಾಡುವ ದುರುದ್ದೇಶದಿಂದ ಮತದಾರರ ಪಟ್ಟಿಯಿಂದ ಹೊರ ಹಾಕಬೇಕೆಂದು ಈ 32 ಜನರು ಒಳಸಂಚು ರೂಪಿಸಿ ವ್ಯವಸ್ಥಿತವಾಗಿ ಅಪರಾಧಿಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?
ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಈ ರೀತಿಯ ಕೃತ್ಯ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಿದ್ದು, ದೂರಿನ ಅನ್ವಯ ಕಲಂ 61(2), 319(2), 336(2), 336(3), 340(2) ಬಿಎನ್‌ಎಸ್ ಜೊತೆ 190 BNS ಪ್ರಕಾರ 32 ಜನರ ವಿರುದ್ಧ ಪ್ರಕಣ ದಾಖಲಾಗಿದೆ.




