ರಾಯಚೂರಿನ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ನೌಕರರ ಸಂಘ (ಸಿಐಟಿಯು ಸಂಯೋಜಿತ)ದ ವತಿಯಿಂದ 2026 ರಿಂದ 2030ರ ಅವಧಿಗೆ ಹೊಸ ವೇತನ ಒಪ್ಪಂದದ ಬೇಡಿಕೆ ಪಟ್ಟಿಯನ್ನು ಕಂಪನಿ ಆಡಳಿತಕ್ಕೆ ಸಲ್ಲಿಸಲಾಯಿತು.
ಇಂದು ಪೊಲೀಸ್ ಠಾಣೆ ಸರ್ಕಲ್ ನಿಂದ ಕಂಪನಿ ಕಾರ್ಯಾಲಯದವರೆಗೆ ಕಾರ್ಮಿಕರ ಬೇಡಿಕೆಗಳ ಈಡೇರಿಸಲು ಘೋಷಣೆ ಕೂಗುತ್ತಾ ಬೃಹತ್ ರ್ಯಾಲಿ ನಡೆಸಿ, ಕಾರ್ಯಾಲಯದ ಮುಂದೆ ಸಭೆ ನಡೆಸಿ ಮಹತ್ವದ ಆರ್ಥಿಕ ಮತ್ತು ಕಲ್ಯಾಣ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಬೇಡಿಕೆಗಳನ್ನು ಒಳಗೊಂಡ ಪಟ್ಟಿಯನ್ನು ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಆರ್. ಶಿಲ್ಪಾ ಅವರಿಗೆ ಸಲ್ಲಿಸಲಾಯಿತು.
ಶೇ 45 ವೇತನ ಭತ್ಯೆ ಹೆಚ್ಚಳಕ್ಕೆ ಬೇಡಿಕೆ: ಈ ಬೇಡಿಕೆ ಪಟ್ಟಿಯ ಪ್ರಕಾರ 2026ರ ಮಾ.31 ಮೂಲ ವೇತನಕ್ಕೆ 45% ಹೆಚ್ಚಳ ನೀಡುವುದು ಹಾಗೂ ಪ್ರಸ್ತುತ ಡಿಎ (DA) ಅನ್ನು 100% ಮರ್ಜ್ ಮಾಡಿ ಏ.1ರಿಂದ ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ. ಸೇವಾ ಅವಧಿಯ ಆಧಾರದ ಮೇಲೆ ಸರ್ವಿಸ್ ವೇಯಿಟೇಜ್ ಇಂಕ್ರಿಮೆಂಟ್, ಟೈಂ ಬಾಂಡ್ ಪ್ರಮೋಶನ್ ಹಾಗೂ ನಿವೃತ್ತಿ ಲಾಭಗಳನ್ನು ಹೆಚ್ಚಿಸುವ ಪ್ರಸ್ತಾವನೆಗೂ ಆದ್ಯತೆ ನೀಡಲಾಗಿದೆ.
ಬೇಡಿಕೆ ಪಟ್ಟಿಯಲ್ಲಿ ಅಂಡರ್‌ಗ್ರೌಂಡ್ ಅಲೋಯೆನ್ಸ್, ನೈಟ್ ಶಿಫ್ಟ್ ಅಲೋಯೆನ್ಸ್, ಡಸ್ಟ್ ಅಲೋಯೆನ್ಸ್, ಹೀಟ್ ಅಲೋಯೆನ್ಸ್, ಕನ್ವೇಯನ್ಸ್ ಅಲೋಯೆನ್ಸ್, ಯೂನಿಫಾರ್ಮ್, ಕಾಶ್ ಹ್ಯಾಂಡ್ಲಿಂಗ್, ವೆಹಿಕಲ್ ಫ್ಯುಯೆಲ್, ಮಟೀರಿಯಲ್ ಹ್ಯಾಂಡ್ಲಿಂಗ್ ಸೇರಿದಂತೆ ಹಲವು ಭತ್ಯೆಗಳನ್ನು ಹೆಚ್ಚಿಸುವ ಪ್ರಸ್ತಾಪವಿದೆ. ನೈಟ್ ಶಿಫ್ಟ್‌ಗೆ 500 ರೂ, ಅಂಡರ್‌ಗ್ರೌಂಡ್ ಅಲೌನ್ಸ್ 20% (15,000 ರೂ.) ಹಾಗೂ ವಿವಿಧ ಸಿಬ್ಬಂದಿಗೆ ವಿಶೇಷ ಭತ್ಯೆಗಳನ್ನು ನೀಡಲು ಒತ್ತಾಯಿಸಲಾಗಿದೆ.
ಆರೋಗ್ಯ ಮತ್ತು ವಿಮೆ ಸೌಲಭ್ಯಗಳು: ಸಿಬ್ಬಂದಿ ಭದ್ರತೆಗೆ 10 ಲಕ್ಷ ರೂ. ಟರ್ಮ್ ಇನ್ಶುರನ್ಸ್ ಯೋಜನೆ ಜಾರಿಗೆ ತರಲು ಹಾಗೂ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಸೂಚಿಸಲಾಗಿದೆ. ಜೊತೆಗೆ ರೆಸ್ಕ್ಯೂ ಅಲೌನ್ಸ್, ರಿಸ್ಕ್ ಅಲೌನ್ಸ್, ಮೆಡಿಕಲ್ ಯುನಿಟ್ ಬಲಪಡಿಸುವ ಕ್ರಮಗಳೂ ಸೇರಿವೆ.
ಶಿಕ್ಷಣ ಮತ್ತು ಕಲ್ಯಾಣ ಯೋಜನೆಗಳು: ಸಿಬ್ಬಂದಿ ಮಕ್ಕಳಿಗೆ ಬಡ್ಡಿರಹಿತ ಶಿಕ್ಷಣ ಸಾಲ, ಎಜುಕೇಶನ್ ಅಸಿಸ್ಟೆನ್ಸ್, ಫುಡ್ ಕಿಟ್, ಫೆಸ್ಟಿವಲ್ ಅಡ್ವಾನ್ಸ್, ಎಲ್ ಟಿಸಿ, ಲಾಂಗ್ ಸರ್ವಿಸ್ ಅವಾರ್ಡ್ ಸೇರಿದಂತೆ ಹಲವಾರು ಕಲ್ಯಾಣ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.
ಇತರೆ ಪ್ರಮುಖ ಬೇಡಿಕೆಗಳು: ಸಬ್ಸಿಡಿ ಬಡ್ಡಿದರದಲ್ಲಿ ಮನೆ ನಿರ್ಮಾಣ ಸಾಲ, ಕ್ಯಾಂಟೀನ್ ವ್ಯವಸ್ಥೆ ಸುಧಾರಣೆ, ಉಚಿತ ಕೇಬಲ್ ಸೌಲಭ್ಯ, ಔಟ್‌ಸೋರ್ಸಿಂಗ್ ನಿಯಂತ್ರಣೆ, ಖಾಲಿ ಹುದ್ದೆಗಳ ಭರ್ತಿ, ಉದ್ಯೋಗ ಹುದ್ದೆಗಳ ಮರುಪರಿಶೀಲನೆ, HGM ಇನ್‌ಸ್ಟಿಟ್ಯೂಟ್ ಅಭಿವೃದ್ಧಿ, ಆಡಿಟೋರಿಯಂ ನಿರ್ಮಾಣ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ.
ಈ ಸಮಗ್ರ ಬೇಡಿಕೆ ಪಟ್ಟಿಯನ್ನು ಆಡಳಿತ ವರ್ಗಕ್ಕೆ ಸಲ್ಲಿಸಲಾಗಿದ್ದು, ಕಾರ್ಮಿಕರ ವೇತನ ಮತ್ತು ಕಲ್ಯಾಣ ಸೌಲಭ್ಯಗಳಲ್ಲಿ ಮಹತ್ವದ ಬದಲಾವಣೆ ತರಬೇಕೆಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಹೊಸ ವೇತನ ಒಪ್ಪಂದ ಜಾರಿಯಾದಲ್ಲಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಪ್ರಯೋಜನ ದೊರೆಯಲಿದೆ ಎಂದು ಸಂಘ ತಿಳಿಸಿದೆ.
ಇದನ್ನೂ ಓದಿ: ರಾಯಚೂರು | ಕೆಕೆಆರ್‌ಡಿಬಿ ಅನುದಾನ ದುರುಪಯೋಗ ಅಜಯಸಿಂಗ್ ರಾಜೀನಾಮೆ ನೀಡಲಿ; ರಾಘವೇಂದ್ರ ಕುಷ್ಟಗಿ
ಇದಾದ ಬಳಿಕ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಶಿಲ್ಪ ಅವರನ್ನು ಪ್ರತ್ಯೇಕವಾಗಿ ಬೇಟಿ ಮಾಡಿದ ಸಂಘದ ಪದಾಧಿಕಾರಿಗಳ ನಿಯೋಗ ಪಿ.ಎಲ್.ಐ.ಬಿಯನ್ನು ಜಾರಿಗೊಳಿಸಿದಕ್ಕೆ ಸಿಬ್ಬಂದಿ ಹಾಗೂ ನೌಕರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಜತೆಗೆ ನೌಕರರ ಇತರೆ ಬೇಡಿಕೆಗಳಾದದ ಮೆಡಿಕಲ್ ಅನ್ ಫೀಟ್,ಬಾಕಿ ಎಕ್ಸಗ್ರೇಸಿಯಾ,ಹೌಸಿಂಗ್ ಭತ್ಯೆ,ವಜಾಗೊಂಡ ನೌಕರರ ಮರು ನೇಮಕ ಸೇರಿ ಹಲವು ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಲು ಒತ್ತಾಯಿಸಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಮಹಾಂತೇಶ, ಕಾರ್ಯದರ್ಶಿ ಗಳಾದ ವೆಂಕೋಬ್ ಮಿಯ್ಯಾಪೂರು, ರಮೇಶ ಬಾಬು, ನಾಗರಾಜ್, ಗೌಸಮಿಯಾ, ಜಮದಗ್ನಿ, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್, ಗುಂಡಪ್ಪ, ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ರಮೇಶ ವೀರಾಪೂರು, ಹಟ್ಟಿ ಘಟಕದ ಅಧ್ಯಕ್ಷ ಫಕೃದ್ದೀನ್, ಕಾರ್ಯದರ್ಶಿ ವೆಂಕಟೇಶ ಗೋರಕಲ್, ಮುಖಂಡರಾದ ಪೆಂಚಲಯ್ಯ ಅಲ್ಲಾಭಕ್ಷ ಸಾಸಿಹಾಳ, ಶ್ರೀಧರ್, ಶೇಖ್ ಬಡೆ, ಶೋಭಾ, ರಾಜೇಶ್ವರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




