ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆಯನ್ನು ಕೈಬಿಡಬೇಕು ಹಾಗೂ ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಾದ್ಯಂತ ಬಿಸಿಯೂಟ ನೌಕರರು ಅಡುಗೆ ಕೆಲಸ ಸ್ಥಗಿತಗೊಳಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದ ಬಳಿಕ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಕ್ಲಸ್ಟರ್ ಕಿಚನ್ ವ್ಯವಸ್ಥೆಯ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಜಂಟಿ ನಿರ್ದೇಶಕರು ನವೆಂಬರ್ 7 ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಬಿಸಿಯೂಟ ಯೋಜನೆಯಲ್ಲಿ ಕ್ಲಸ್ಟರ್ ಕಿಚನ್ ಸ್ಥಾಪಿಸುವ ಸಾಧಕ-ಬಾಧಕಗಳ ಕುರಿತು ಅಭಿಪ್ರಾಯ ಕೋರಿದ್ದಾರೆ. ಶಿಕ್ಷಣ ಇಲಾಖೆಯ ಈ ಕ್ರಮವನ್ನು ಖಂಡಿಸಿದರು.

1920 ರಲ್ಲಿ ಆರಂಭಗೊಂಡು 2001 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಹತ್ವದ ರೂಪ ಪಡೆದಿರುವ ಬಿಸಿಯೂಟ ಯೋಜನೆಯು ಸರ್ಕಾರಿ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದು, ಶಾಲಾ ಹಾಜರಾತಿ ಸುಧಾರಿಸುವುದು, ಮಧ್ಯಾಹ್ನದ ನಂತರ ಕಲಿಕಾ ಚಟುವಟಿಕೆಗಳಲ್ಲಿ ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸುವುದು ಹಾಗೂ ಲಿಂಗ ಮತ್ತು ಜಾತಿ ತಾರತಮ್ಯ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಮಕ್ಕಳಿರುವ ಶಾಲೆಯಲ್ಲಿಯೇ ಆಹಾರ ತಯಾರಿಸಿ ತಾಜಾ ಹಾಗೂ ಬಿಸಿಯಾದ ಊಟ ನೀಡಬೇಕೆಂಬುದು ಯೋಜನೆಯ ಆಶಯವಾಗಿದೆ ಎಂದರು.
ಈ ಉದ್ದೇಶದಿಂದಲೇ ಸರ್ಕಾರಗಳು ಶಾಲಾ ಆವರಣಗಳಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಿ, ಅಗತ್ಯ ಪಾತ್ರೆಗಳು, ಗ್ಯಾಸ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿವೆ. ಇಂತಹ ವ್ಯವಸ್ಥೆ ಇರುವಾಗ ಕೇಂದ್ರಿಕೃತ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿಲ್ಲ ಎಂದರು.
ಬಿಸಿಯೂಟ ಯೋಜನೆಯ ನಿರ್ವಹಣಾ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸುವುದನ್ನು ಸಂಘಟನೆ ಮೊದಲಿನಿಂದಲೂ ವಿರೋಧಿಸುತ್ತಿದೆ. ಶಿಕ್ಷಕರು ಬೋಧನೆ ಮತ್ತು ಪಠ್ಯಕ್ರಮದ ಕಡೆಗೆ ಹೆಚ್ಚಿನ ಗಮನಹರಿಸಲು ಅವಕಾಶ ನೀಡಬೇಕು. ಅಡುಗೆ ಸಿಬ್ಬಂದಿಗೆ ಯೋಜನೆಯ ಸಂಪೂರ್ಣ ಜವಾಬ್ದಾರಿ ವಹಿಸಬೇಕು. ಅಡುಗೆ ಸಿಬ್ಬಂದಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವವರಿದ್ದು, ಅವರಿಗೆ ಈ ಕೆಲಸ ನಿರ್ವಹಿಸುವ ಅನುಭವ ಮತ್ತು ಸಾಮರ್ಥ್ಯವಿದೆ. ಅಗತ್ಯವಿದ್ದರೆ ಅವರ ಕೆಲಸದ ಅವಧಿಯನ್ನು ವಿಸ್ತರಿಸಬಹುದು ಎಂದು ತಿಳಿಸಿದರು.
2012 ರ ಜೂನ್ ೪ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿಯೂಟ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು. ಅದೇ ವರ್ಷ ಡಿಸೆಂಬರ್ 17 ರ ಇಲಾಖೆಯ ನಡಾವಳಿಯಂತೆ ಮುಖ್ಯ ಅಡುಗೆಯವರು ಮತ್ತು ಎಸ್ಡಿಎಂಸಿ ಪದನಿಮಿತ್ತ ಮುಖ್ಯೋಪಾಧ್ಯಾಯರ ಜಂಟಿ ಖಾತೆ ನಿರ್ವಹಣೆಗೆ ಅವಕಾಶವಿದೆ. ಮುಖ್ಯೋಪಾಧ್ಯಾಯರು ಜವಾಬ್ದಾರಿ ನಿರ್ವಹಿಸಲು ಇಚ್ಛಿಸದಿದ್ದಲ್ಲಿ ಮುಖ್ಯ ಅಡುಗೆಯವರು ಮತ್ತು ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ಮೂಲಕವೂ ನಿರ್ವಹಿಸಬಹುದು ಎಂದರು.
ಇನ್ನು ಶಾಲೆಗಳಲ್ಲಿ ಕೋಳಿ ಮೊಟ್ಟೆ ಪೂರೈಕೆಯ ಬೆಲೆ ಏರಿಕೆಯಿಂದ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಿ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸುವ ಮಾದರಿಯಲ್ಲಿ ಕುಕ್ಕುಟ ಮಹಾಮಂಡಳದ ಮೂಲಕ ಶಾಲೆಗಳಿಗೂ ಮೊಟ್ಟೆ ಪೂರೈಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ಲಸ್ಟರ್ ಕಿಚನ್ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಧಾರ್ಮಿಕ ಸಂಸ್ಥೆಗಳು, ಜಾತಿ ಸಂಘಟನೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಯೋಜನೆಯ ನಿರ್ವಹಣೆ ವಹಿಸಲು ದಾರಿಯಾಗಬಹುದು. ಆದ್ದರಿಂದ ಸರ್ಕಾರ ಕೂಡಲೇ ಕ್ಲಸ್ಟರ್ ಕಿಚನ್ ಪ್ರಸ್ತಾವನೆಯನ್ನು ಕೈಬಿಟ್ಟು, ಈಗಿರುವ ಅಡುಗೆ ಸಿಬ್ಬಂದಿಯ ಮೂಲಕವೇ ಬಿಸಿಯೂಟ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏಮ್ಸ್ ಸೇರಿದಂತೆ ನಾಲ್ಕು ಪ್ರಮುಖ ನಿರ್ಣಯ ಅಂಗೀಕಾರ
ಧರಣಿಯ ನೇತೃತ್ವವನ್ನು ಅಧ್ಯಕ್ಷರಾದ ರೇಣುಕಮ್ಮ, ಕಾರ್ಯದರ್ಶಿ ಮರಿಯಮ್ಮ, ಮಹ್ಮದ್ ಹನೀಫ್, ಅಕ್ಕ ಮಹದೇವಿ, ವಿಶಲಾಕ್ಷಮ್ಮ, ಕಲ್ಯಾಣಮ್ಮ, ಶರಣಮ್ಮ, ವಾಣಿಖಾದ್ರಿ, ಶ್ರೀಲೇಖಾ, ಹುಸೇನ, ಸಿದ್ದಮ್ಮ, ಶಹನಾಜ್ ಬೇಗಂ, ತುಳಜಾಬಾಯಿ, ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ. ಎಸ್. ಶರಣಬಸವ, ಅಧ್ಯಕ್ಷೆ ಹೆಚ್. ಪದ್ಮಾ, ಕೆ ಜಿ ವೀರೇಶ್, ಜಿಲಾನಿ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಬಿಸಿಯೂಟ ನೌಕರರು ಭಾಗವಹಿಸಿದ್ದರು.



