ಒಂದೆಡೆ ತೀವ್ರ ಬರಗಾಲದ ಸಂಕಷ್ಟ, ಮತ್ತೊಂದೆಡೆ ಕೈಗೆ ಬಂದ ಬೆಳೆಗಳಿಗೆ ನೀರಿಲ್ಲದೆ ಒಣಗುವ ಭೀತಿ. ದೇವದುರ್ಗ ತಾಲೂಕಿನಲ್ಲಿ ಮೆಣಸಿನಕಾಯಿ, ಭತ್ತ ಸೇರಿದಂತೆ ವಿವಿಧ ಬೆಳೆಗಳು ನೀರಿನ ಅಭಾವದಿಂದ ಕಂಗಾಲಾಗಿವೆ. ಈ ನಡುವೆ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಸಿಗದಿರುವುದು ಹಾಗೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ರೈತರು ಇದೀಗ ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟದ ಹಾದಿ ಹಿಡಿದಿದ್ದಾರೆ.
ನಾರಾಯಣಪುರ ಬಲದಂಡೆ ಕಾಲುವೆಗೆ ಜನವರಿ ತಿಂಗಳವರೆಗೆ ನಿರಂತರವಾಗಿ ಹಾಗೂ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸಬೇಕು, ಅವೈಜ್ಞಾನಿಕ ವಾರಾಬಂದಿ ಪದ್ಧತಿಯನ್ನು ಕೂಡಲೇ ಕೈಬಿಡಬೇಕು ಹಾಗೂ ರೈತರ ಬೆಳೆಗಳಿಗೆ ನೀರು ಒದಗಿಸುವ ವಿಚಾರದಲ್ಲಿ ರಾಜಕೀಯ ಮಾಡದೆ ಶಾಶ್ವತ ನೀರಾವರಿ ಪರಿಹಾರ ಕಲ್ಪಿಸಬೇಕು ಎಂಬುದು ರೈತರ ಪ್ರಮುಖ ಆಗ್ರಹವಾಗಿದೆ.
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರೈತ ಸಂಘ ಹಾಗೂ ಕೃಷಿ ಅಭಿವೃದ್ಧಿ ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಹೋರಾಟದ ಅಖಾಡಕ್ಕಿಳಿದಿವೆ. ರೈತರ ಬೆಳೆಗಳನ್ನು ಉಳಿಸಲು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯಿಸಿದರು.
ಡ್ಯಾಂ ಮುತ್ತಿಗೆಗೆ ರೈತರ ಪಾದಯಾತ್ರೆ
ಕರ್ನಾಟಕ ರೈತ ಸಂಘ ಹಾಗೂ ಕೃಷಿ ಅಭಿವೃದ್ಧಿ ಸೇನೆ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಮಸ್ತಾನ್ ನಾಯಕ ನೇತೃತ್ವದಲ್ಲಿ ನಾರಾಯಣಪುರ ಡ್ಯಾಂಗೆ ಮುತ್ತಿಗೆ ಹಾಕುವ ಉದ್ದೇಶದಿಂದ ರೈತರ ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿದೆ. ಎರಡನೇ ದಿನದ ಪಾದಯಾತ್ರೆ ದೇವದುರ್ಗ ಪಟ್ಟಣಕ್ಕೆ ಆಗಮಿಸಿದ್ದು, ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನೀರಾವರಿ ಸಮಸ್ಯೆ ಕುರಿತು ಹಲವು ಹಂತಗಳಲ್ಲಿ ಹೋರಾಟ ನಡೆಸಿದರೂ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದೆ ತಪ್ಪು ಉತ್ತರ ನೀಡುತ್ತಿದ್ದಾರೆ. ಮೆಣಸಿನಕಾಯಿ ಬೆಳೆ ಫಸಲು ಬಿಡುವ ಹಂತದಲ್ಲಿದ್ದು, ನೀರಿನ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಸ್ತಾನ್ ನಾಯಕ ಆರೋಪಿಸಿದ್ದಾರೆ.
ನೀರಾವರಿ ಸಲಹಾ ಸಮಿತಿ ಜಾರಿಗೊಳಿಸಿರುವ ಅವೈಜ್ಞಾನಿಕ ವಾರಾಬಂದಿ ಪದ್ಧತಿಯಿಂದ ರೈತರಿಗೆ ಬೆಳೆನಷ್ಟವಾಗುತ್ತಿದ್ದು, ಸಾಲದ ಸುಳಿಗೆ ಸಿಲುಕುವಂತಾಗಿದೆ. ಸರ್ಕಾರ ಘೋಷಿಸಿರುವ ₹2,500 ಪರಿಹಾರದಿಂದ ಒಂದು ಚೀಲ ಗೊಬ್ಬರ ಖರೀದಿಸುವುದೂ ಕಷ್ಟವಾಗಿದೆ. ಹೀಗಾಗಿ ಜನವರಿವರೆಗೆ ಬಲದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವುದು ಸರ್ಕಾರದ ಆದ್ಯತೆಯಾಗಬೇಕು. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಜೆಡಿಎಸ್‌ನಿಂದ ರಸ್ತೆ ತಡೆ: ಸರ್ಕಾರದ ವಿರುದ್ಧ ಶಾಸಕಿ ಆಕ್ರೋಶ
ಇನ್ನೊಂದೆಡೆ, ಜೆಡಿಎಸ್ ವತಿಯಿಂದ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಿರವಾರ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಬಳಿಕ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಗೋಪಾಲಕೃಷ್ಣ, ರಾಜ್ಯ ಸರ್ಕಾರ ಬರಗಾಲ ಘೋಷಿಸಿದ್ದರೂ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇದ್ದರೂ ರೈತರ ಜಮೀನುಗಳಿಗೆ ನೀರು ಹರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಕೈಗಾರಿಕೆಗಳಿಗೆ ನೀರು ಪೂರೈಸಲು ಮುಂದಾಗುವ ಸರ್ಕಾರ, ರೈತರ ಬೆಳೆಗಳಿಗೆ ನೀರು ಒದಗಿಸುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೆಳೆದಿರುವ ಮೆಣಸಿನಕಾಯಿ ಬೆಳೆ ಫಸಲು ಬಿಡುವ ನಿರ್ಣಾಯಕ ಹಂತದಲ್ಲಿದ್ದು, ಈ ಸಮಯದಲ್ಲಿ ನೀರಿನ ಕೊರತೆ ಎದುರಾಗಿದೆ. ರೈತರು ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸದಿರುವುದರಿಂದ ಮುಂದಿನ ಹಂತದಲ್ಲಿ ಡ್ಯಾಂಗೆ ಮುತ್ತಿಗೆ ಹಾಕುವ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನವರಿ ತಿಂಗಳವರೆಗೆ ನಾರಾಯಣಪುರ ಬಲದಂಡೆ ಕಾಲುವೆಗೆ ನಿರಂತರವಾಗಿ ನೀರು ಹರಿಸದಿದ್ದರೆ ರೈತರು ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಲಿದ್ದಾರೆ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.

ಎರಡು ಗಂಟೆಗಳ ಕಾಲ ರಸ್ತೆ ತಡೆ ಪ್ರತಿಭಟನೆ
ಜೆಡಿಎಸ್ ವತಿಯಿಂದ ಸಿರವಾರ ಕ್ರಾಸ್ ಬಳಿ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಾಯಚೂರು, ಸಿರವಾರ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ಬಸ್‌ಗಳು ಹಾಗೂ ಇತರ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು.
ಮೂರನೇ ದಿನಕ್ಕೆ ಕಾಲಿಟ್ಟ ಹಸಿರು ಸೇನೆ ಹೋರಾಟ
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ತಾಲೂಕಾಧ್ಯಕ್ಷ ಮರಿಲಿಂಗ ಪಾಟೀಲ್ ನೇತೃತ್ವದಲ್ಲಿ ಸಿರವಾರ ಕ್ರಾಸ್ ಬಳಿ ನಡೆಯುತ್ತಿರುವ ಹೋರಾಟ ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ತಾಲೂಕಿನಾದ್ಯಂತ ಮೆಣಸಿನಕಾಯಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದಾರೆ. ಆದರೆ ನೀರಿನ ಅಭಾವದಿಂದ ಬೆಳೆಗಳು ಒಣಗುವ ಹಂತ ತಲುಪಿವೆ. ನಾರಾಯಣಪುರ ಬಲದಂಡೆ ಕಾಲುವೆಗೆ ಅವೈಜ್ಞಾನಿಕ ವಾರಾಬಂದಿ ಪದ್ಧತಿ ಜಾರಿಗೊಳಿಸಿರುವುದರಿಂದ ರೈತರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಮರಿಲಿಂಗ ಪಾಟೀಲ್ ದೂರಿದರು.
ಜಿಂದಾಲ್ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ರೈತರ ಬೆಳೆಗಳಿಗೆ ನೀರು ಕೇಳಿದಾಗ ಜಲಾಶಯದಲ್ಲಿ ನೀರಿನ ಕೊರತೆಯ ನೆಪ ಹೇಳಲಾಗುತ್ತಿದೆ. ರೈತರ ಬದುಕಿನ ಪ್ರಶ್ನೆಯಲ್ಲಿ ಅಧಿಕಾರಿಗಳು ಹಾಗೂ ಸರ್ಕಾರ ರಾಜಕೀಯ ಮಾಡಬಾರದು. ಬೆಳೆಗಳಿಗೆ ನೀರು ಹರಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಒಗ್ಗಟ್ಟಿನ ಹೋರಾಟಕ್ಕೆ ವೇದಿಕೆಯಾದ ನೀರಿನ ಸಂಕಷ್ಟ :
ದೇವದುರ್ಗ ತಾಲೂಕಿನಲ್ಲಿ ನೀರಾವರಿ ಸಮಸ್ಯೆ ಇದೀಗ ರಾಜಕೀಯ ಹಾಗೂ ಸಂಘಟನಾತ್ಮಕ ಹೋರಾಟದ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಪ್ರತ್ಯೇಕ ಸಂಘಟನೆಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಅವುಗಳ ಪ್ರಮುಖ ಬೇಡಿಕೆ ಮಾತ್ರ ಒಂದೇ ಆಗಿದೆ. ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಲು ನಾರಾಯಣಪುರ ಬಲದಂಡೆ ಕಾಲುವೆಗೆ ಜನವರಿವರೆಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂಬುದು ರೈತರ ಒಕ್ಕೊರಲಿನ ಆಗ್ರಹವಾಗಿದೆ.
ಮೆಣಸಿನಕಾಯಿ ಬೆಳೆ ಕೈಗೆ ಬರುವ ನಿರ್ಣಾಯಕ ಹಂತದಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಬಿತ್ತನೆ, ಗೊಬ್ಬರ, ಔಷಧಿ ಹಾಗೂ ಕೃಷಿ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿರುವ ರೈತರಿಗೆ ಬೆಳೆ ನಷ್ಟವಾದರೆ ಸಾಲದ ಹೊರೆ ಮತ್ತಷ್ಟು ಹೆಚ್ಚಲಿದೆ.
ಹೀಗಾಗಿ ರೈತರ ಹೋರಾಟವನ್ನು ಕೇವಲ ಪ್ರತಿಭಟನೆ ಎಂದು ಪರಿಗಣಿಸದೆ, ಕೃಷಿ ಹಾಗೂ ಬದುಕಿನ ಅಸ್ತಿತ್ವದ ಪ್ರಶ್ನೆಯಾಗಿ ಸರ್ಕಾರ ಪರಿಗಣಿಸಬೇಕಿದೆ. ಜಲಾಶಯದ ನೀರಿನ ಲಭ್ಯತೆ, ನೀರು ಹಂಚಿಕೆಯ ಪ್ರಮಾಣ, ವಾರಾಬಂದಿ ವೇಳಾಪಟ್ಟಿ ಹಾಗೂ ಜನವರಿವರೆಗೆ ನೀರು ಹರಿಸುವ ಕುರಿತು ಸರ್ಕಾರ ಮತ್ತು ನೀರಾವರಿ ಇಲಾಖೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕಿದೆ. ಇಲ್ಲವಾದರೆ ನಾರಾಯಣಪುರ ಡ್ಯಾಂ ಮುತ್ತಿಗೆ ಸೇರಿದಂತೆ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.



