ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ನಿಷೇಧಗೊಳಿಸುವ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿದೆ. ರಸ್ತೆ, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷೆ ಬೇಡುವುದು ಕಾನೂನುಬಾಹಿರವಾಗಿದೆ. ಕೂಡಲೇ ಕಾನೂನು ಕ್ರಮಕ್ಕೆ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಿಂಧನೂರು ದಂಡಾಧಿಕಾರಿಗಳಾದ ಅರುಣ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ನಿಷೇಧಿಸುವ ಕಾಯ್ದೆ ಜಾರಿಯಲ್ಲಿದ್ದರೂ, ಸಿಂಧನೂರಿನಲ್ಲಿ ಅದರ ಸಮರ್ಪಕ ಅನುಷ್ಠಾನ ಕಾಣಿಸದಿರುವುದು ತಾಲೂಕು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಾಗಿದೆ.
ಪ್ರತಿನಿತ್ಯ ಸಿಂಧನೂರಿನ ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ನೂರಾರು ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಭಿಕ್ಷಾಟನೆ ನಡೆಸುತ್ತಿರುವುದು ಗಮನಾರ್ಹವಾಗಿದೆ. ವಿಶೇಷವಾಗಿ ನಗರದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಭಿಕ್ಷುಕರು ಶಾಶ್ವತವಾಗಿ ನೆಲೆಸಿರುವಂತಿದ್ದು, ಪ್ರಯಾಣಿಕರಿಗೆ ಮುಜುಗರ ಉಂಟುಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಚಿಕ್ಕ ಮಕ್ಕಳು ಪ್ರತಿನಿತ್ಯ ಇತರ ಸ್ಥಳಗಳು ಮತ್ತು ಪಟ್ಟಣಗಳಿಂದ ಸಿಂಧನೂರಿಗೆ ಭಿಕ್ಷಾಟನೆಗಾಗಿ ಆಗಮಿಸುತ್ತಿರುವುದು ನಿರಂತರವಾಗಿ ಗಮನಕ್ಕೆ ಬರುತ್ತಿದೆ. ಈ ಬೆಳವಣಿಗೆ ಮಕ್ಕಳ ಶಿಕ್ಷಣದ ಭವಿಷ್ಯದ ಮೇಲೆ ಗಂಭೀರ ಆತಂಕ ಮೂಡಿಸಿದ್ದು, ಅವರು ಶಾಲೆಯಿಂದ ಹೊರಗುಳಿಯುತ್ತಿರುವ ಸ್ಥಿತಿ ಕಳವಳಕಾರಿ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ, ನಗರದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ಪರ್ಯಾಯ ಜೀವನೋಪಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಅನಾಥರು ಮತ್ತು ನಿರಾಶ್ರಿತರನ್ನು ಗುರುತಿಸಿ ಅವರಿಗೆ ಸೂಕ್ತ ರಕ್ಷಣೆ ನೀಡುವುದರ ಜೊತೆಗೆ, ಸರ್ಕಾರದಿಂದ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ತಲುಪಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಭಿಕ್ಷೆ ಬೇಡುವವರನ್ನು ಪೊಲೀಸರು ಬಂಧಿಸಲು ಹಾಗೂ ಅವರನ್ನು ಪುನರ್ವಸತಿ ಕೇಂದ್ರಗಳಿಗೆ ಅಥವಾ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಕಳುಹಿಸಲು ಅಧಿಕಾರವನ್ನು ಹೊಂದಿದ್ದಾರೆ. ಕೂಡಲೇ ಅವರನ್ನು ಸರ್ಕಾರದ ಪ್ರಕಾರ ನಗರಗಳ ಸ್ವಚ್ಛತೆ, ಸಾರ್ವಜನಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜಕೀಯ ಲಾಭಕ್ಕಾಗಿ ಎಸ್ ಐ ಆರ್, ಬಿಜೆಪಿ ಅಧಿಕಾರದ ಗುರಿ; ಕುಮಾರ್ ಸಮತಳ
ಮನವಿ ವೇಳೆ ತಾಲೂಕ ಅಧ್ಯಕ್ಷರಾದ ದುರುಗೇಶ ಕಲಮಂಗಿ, ನರಸಪ್ಪ ಬಡಿಗೇರ್, ಶಿವಪುತ್ರ ಅಮರಾಪುರ, ದೇವರಾಜ್, ರಾಜು ಹುಲಗುಂಚಿ ಇದ್ದರು.




