ಸಿಂಧನೂರು ನಗರದ ಹಿರೇಹಳ್ಳದಲ್ಲಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಪ್ರತಿಭಟಿಸಿದರು.
ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಮರಳು ಗಣಿಗಾರಿಕೆ ಮಾಡಬಹುದು. ಆದರೆ, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮ ಮೀರಿ ಸಿಂಧನೂರು ನಗರದ ಮಧ್ಯ ಭಾಗದಲ್ಲಿರುವ ಹಿರೇಹಳ್ಳದಲ್ಲಿ ಮರಳು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ಹಳ್ಳದಲ್ಲಿ 25 ರಿಂದ 30 ಅಡಿ ಆಳವಾದ ಕಂದಕ ನಿರ್ಮಾಣವಾಗಿದೆ. ಕಂದಕದಲ್ಲಿ ಅವಘಡಗಳು ಸಂಭವಿಸಿದರೆ ಹೊಣೆಯಾರು? ಈ ಬಗ್ಗೆ ಸಿಂಧನೂರು ತಹಶೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜನ ಇಲ್ಲದಂತಾಗಿದೆ. ಹಿರೇಹಳ್ಳದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಗಣಿಗಾರಿಕೆಗೆ ಬಳಸುವ ಯಂತ್ರಗಳು ಹಾಗೂ ಟಿಪ್ಪರ್‌ಗಳನ್ನು ವಶಕ್ಕೆ ಪಡೆದುಕೊಳ್ಳಬೇಕು. ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ತಹಶೀಲ್ದಾರ್ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರಿಗೆ ಸಚಿವ ಸ್ಥಾನ ನೀಡದ ಸರ್ಕಾರದ ವಿರುದ್ಧ ಸೆ.17 ವಿಮೋಚನಾ ದಿನದಂದು ಹೋರಾಟ: ಎಸ್ ಮಾರೆಪ್ಪ
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಆನಂದ ಕುಂಬಾರ, ಲಕ್ಷ್ಮಣ ಮುಕ್ಕಣ್ಣನವರು, ನಿರುಪಾದಪ್ಪ ಅಡ್ಡಿ, ಹನುಮಗೌಡ, ಹನುಮಂತಪ್ಪ, ಬಸವರಾಜ ಗುಂಡಸಾಗರ ಇನ್ನಿತರಿದ್ದರು.




