"ಯಾಕ ಬೇ ಅಕ್ಕವ್ವ ಇಷ್ಟ ಮುಂಜೆನೆದ್ದು ಯಾರಗೇ ಬೈಯಾಕತ್ತಿಯಲ್ಲಾ? ಯಾರ ಏನ್ ಮಾಡಿದ್ರ ಈಗ?" ಅಂದ್ಯಾ. ಅಕಿ, "ಅವ್ವಿ ಎದ್ಯಾ...? ನಾ ಯಾರಿಗ್ ಬೈಲಿಬೇ... ನಿಮ್ಮ ಮಾಮಾಗ ಅನ್ನಾಕತ್ತೇನಿ. ಮುಂಜಮುಂಜಾನೆ ಹೊಲಾ ಕಾಯಾಕ ಹೊಂಟಾನ..." ಅಂದ್ಲು
ಮುಂಜಲೆ ಮುಂಜೇಲೆ ಏನೋ ಸಪ್ಪಳ ಆಗಾಕತ್ತಿತ್ತು. ಭಾರಿ ಜೋರ ನಿದ್ಯಾಗಿದ್ದ ನಾನು ಎದ್ದು ನೋಡಿದ್ರ, ನಮ್ಮ ಅಕ್ಕ ಯಾರಗೇ ಭಾರಿ ಬೈಕೋತ್ ಒಲಿಗೆ ಪಟು ಮಾಡಾಕತ್ತಿದ್ಲು. ಇನ್ನೂ ಬೆಳಕ ಹರದಿಲ್ಲಾ ನಮ್ಮ ಅಕ್ಕಗ ಯಾರ ಏನ್ ಮಾಡಿದ್ರಪಾ – ಹಿಂಗ್ ಗರಂ ಆಗ್ಯಾಳ, ಅನಕಂತ ಅಡಗಿ ಮನಿಗೆ ಹ್ವಾದ್ಯಾ.
“ಯಾಕ ಬೇ ಅಕ್ಕವ್ವ ಇಷ್ಟ ಮುಂಜೆನೆದ್ದು ಯಾರಗೇ ಬೈಯಾಕತ್ತಿಯಲ್ಲಾ? ಯಾರ ಏನ್ ಮಾಡಿದ್ರ ಈಗ?” ಅಂದ್ಯಾ. ಅಕಿ, “ಅವ್ವಿ ಎದ್ಯಾ…? ನಾ ಯಾರಿಗ್ ಬೈಲಿಬೇ… ನಿಮ್ಮ ಮಾಮಾಗ ಅನ್ನಾಕತ್ತೇನಿ. ಮುಂಜಮುಂಜಾನೆ ಹೊಲಾ ಕಾಯಾಕ ಹೊಂಟಾನ. ಚಾ ಮಾಡಾಕತ್ತೀನಿ ತಡಿರೀ ಅಂದ್ರು, ‘ಹೇ ತಡಾ ಅಕ್ಕೇತಿ’ ಅಂತ ಹ್ವಾದಾ,” ಅಂದ್ಲು.
“ಅಲ್ಲಬೇ… ಮದ್ಲ ಗ್ವಾಂಜ್ವಾಳ ರಾಶಿ ಇದ್ವು, ಕಾಯಾಕ ಹೊಕ್ಕಿದ್ರು. ಈಗಿನ್ನಾ ಹೊಲಾ ಎಲ್ಲಾ ಬಿತ್ತುವು ಮುಗದಾವ್. ಏನ್ ಕಾಯತಾರಂತ ಬೆಳಿಯರ ಬರಳ್ಯಾಳ ಕಾಯಾಕ. ಬೇಡ್ ಅನಬೇಕಿಲ್ಲನಿ,” ಅಂತ ಹೇಳಿದೆ.
ಈ ಕನ್ನಡ ಕೇಳಿದ್ದೀರಾ?: ಕೆ ಆರ್ ಪೇಟೆ ಸೀಮೆಯ ಕನ್ನಡ | ಸಿಟೀಲಿ ಕಾರ್ಮಿಕ್ರಂಗೆ ಅಳ್ಳೀಲೂ ಕೂಲಿಕಾರ್‍ರ ಸ್ರಮ ಈರ್ತರೆ
“ಹ್ಯಾಂಗ್ ಬ್ಯಾಡನ್ಲಿಬೇ ಅವ್ವಿ… ಹೊಲಕ್ ಚಿಗರಿ ಮಕಾಹತ್ತ್ಯಾವಂತವಾ. ಈಗಿನ್ನ ಬಿತ್ತಿದ ಬೀಜ ಸಸಿನಾಟ್ಯೇವ್. ದೊಡ್ಡ ಚಿಗರಿ ಹಿಂಡ ಐತೆಂತ ಎರ್ಯಾಗ. ಹಿಂಡಿಗೆ ಹಿಂಡಾ ಹೊಲಾ ಹೊಕ್ರ ಎಲ್ಲಿ ಉಳಿತೇತಿ ಬೆಳಿ? ಅದಕ ಲೇಬಡದ ಎದ್ದಹೊಕ್ಕಾರ ಹೊಲಾಕಾಯಾಕ. ಎರ್ಯಾಗ ಎರಡ ಹಿಂಡ ಅದಾವಂತ. ಒಂದ ಒಂದ ಹಿಂಡನ್ಯಾಗೂ ಇಪ್ಪತರಿಂದ ಮೂವತ್ತ ಚಿಗರಿ ಅಕ್ಕಾವಂತವಾ. ತಲಿಬ್ಯಾನಿ ಆಗೇತಿ ನೋಡು ಚಿಗರಿಕಾಲಾಗ,” ಅಂದ್ಲು.
ನಾ ಕೇಳಿದೆ, “ಅಲ್ಲಬೇ… ಚಲೋ ಮಳಿ ಆಗ್ಯಾವು, ಅಡವ್ಯಾಗ ಏನು ಇಲ್ಲಂತನ ಅವಕ್ ತಿನ್ನಾಕ? ಹೊಲಕ್ಕ ಯಾಕ ಬರತಾವಂತ ಅವು? ಈ ಸದ್ಯೆ ಗುಡ್ಡದಾಗ ಗಿಡಾ ಹಚ್ಚಾಕತ್ತಾರಲ್ಲ, ಹಂಗ ಸ್ವಲ್ಪ ಹುಲ್ಲು ಬೆಳಸಬೇಕಿಲ್ಲ ಅರಣ್ಯ ಇಲಾಖೆಯೋರು?”
ನಾ ಇಷ್ಟ ಮಾತಾಡೊದ್ರಾಗಾ ನಮ್ಮ ಡ್ಯಾಡಿ ಒಳಗ ಬಂದ್ರು. ಇಷ್ಟೊತ್ತ ನಾವ್ ಮಾತಾಡಿದ್ ಕೇಳಸ್ಕೊಳಾಕತ್ತಿದ್ದ ಅವ್ರು ನನ್ನ ನೋಡಿ ನಕ್ಕು, “ಅಡವ್ಯಾಗೇನೊ ಹುಲ್ ಐತಿ; ಚಿಗರ ತಿನ್ನಾಕ ಯಾರಿಗೆ ಆಸೆ ಆಗಂಗಿಲ್ಲಾ ಹೇಳು? ಚಿಗರಿಗೆ ಗರಕಿ ಹುಲ್ಲು, ಎಳೆ ಚಿಗರು ಭಾಳ ಇಷ್ಟಾಅಕ್ಕೇತಿ. ಆ ಆಸೆಕ ಹೊಲಕ್ಕ ಬರ್ತಾವು. ಯಾವಾಗ್ಲು ಬರಂಗಿಲ್ಲಬೇ ಅವು, ಮುಂಗಾರಿ ಬೆಳಿಗಷ್ಟ ಗಂಟಬೀಳತಾವು. ನಮ್ಮ ಊರ ಸುತ್ಲು ಗುಡ್ಡ ಐತೇಂದ್ರು ಎರ್ಯಾಗ ಅಷ್ಟ ಅದಾವ ಚಿಗರಿ ವರ್ಷಕ್ ಒಮ್ಮೆ ಇಷ್ಟ ಕಾಡತಾವ್ ಅವು…”
ಈ ಕನ್ನಡ ಕೇಳಿದ್ದೀರಾ?: ಕೊರಟಗೆರೆ ಸೀಮೆಯ ಕನ್ನಡ | ‘ಓಲ್ಗೀಸಮೋಲ್ಗೀಸ್ ಬಾಳ್ಗ ಬಾಳ್ಗ’ ಅಂದ್ರ…?
“ಅಲ್ಲಪಾ… ಮತ್ ಹೆಂಗ್ ಪಾ ಬಿತ್ತಿದ್ದು ಹಾಳಾದ್ರ?” ಅಂದೆ.
ಅವರು ಹೇಳಿದ್ರು, “ಚಿಗರಿ ತಿಂದ ಹೊಲ ಕೆಲವೊಮ್ಮೆ ಹೊಳ್ಳಿ ಚಿಗರತೇತಿ. ಈ ಸಮಸ್ಯೆ ವರ್ಷಾ ಅಕ್ಕೇತಿ. ಅದಕ ಅರಣ್ಯ ಇಲಾಖೆಯವ್ರು ಚಿಗರಿಯಿಂದ ಹಾಳಾಗಿರೊ ಹೊಲದ ರೈತರಿಗೆ ಪರಿಹಾರ ಕೊಡತಾರ. ಯಾರ ಅರ್ಜಿ ಕೊಡತಾರೊ ಅವರ ಹೊಲದ ಫೋಟೊ ಕೇಳತಾರ, ಈಗಂತೂ ಟೆಕ್ನಾಲಜಿ ಇರೋದ್ರಿಂದ ಜಿಪಿಎಸ್ ಮಾಡಿ ಹಾಳಾಗಿರೊ ಹೊಲ ಸರ್ವೆ ಮಾಡಿ ಪರಿಹಾರ ನೀಡ್ತಾರ. ಚಿಗರಿ ಕಾಟಕ್ ಪರಿಹಾರ ಹುಡಕಾಕ ಪ್ರಯತ್ನ ಮಾಡಿದ್ರೂ ಏನು ಆಗಿಲ್ಲ. ಯಾಕಂದ್ರ, ಚಿಗರಿ ಸೂಕ್ಷ್ಮ ಪ್ರಾಣಿ ಹಿಡ್ಯಾಕೂ ಆಗಂಗಿಲ್ಲ, ಭಾರಿ ಬೆದರತಾವು. ಹಿಂಗಾಗಿ, ಬೆಳಿ ಸ್ವಲ್ಪ ದೊಡ್ಡದ ಆಗೋತನ ಕಾಯೋದ ನೋಡು… ಇನ್ನು, ಶೇಂಗಾ, ಹೆಸರು ಹಾಕೋದು ಕಡಿಮಿ ಆಗೇತಿ. ಅವಾಗೆಲ್ಲಾ ಜಗ್ಗ ಶೇಂಗಾ, ಹೆಸರು ಬಿತ್ತೋರು; ಬರಿ ಚಿಗರೆಲ್ಲಾ, ಹಿಂಡ್-ಹಿಂಡ್ ನವಲ ಬರ್ತೀದ್ವು…”
…ಅವರು ನವಲು ಅನ್ನತ್ತು ನಾನು, “ಹೌದಪಾ… ಅಮ್ಮಾರ ಇಟಗಿದಾರಿ ಹೊಲದಾಗ ಒಮ್ಮೆ ಶೇಂಗಾ, ಅಲಸಂದಿ ಹಾಕಿದ್ರು. ಅಮ್ಮನ ಕೂಡ ನಾವು ಹೊಲಕ್ ಹೋಗಿದ್ವಿ. ಜಗ್ಗ ನವಲಿದ್ವು. ಅವು ಅಲಸಂದಿ ತಿನ್ನಾಕ ಬಂದಿದ್ವು. ನಾನ್ ಅವನ್ ನೋಡಾಕ ಹೊಗಿದ್ಯಾ ಹಳ್ಳದ ದಂಡಿಗೆ ನನ್ನ ಬೆನ್ನ ಹತ್ತಿಬಿಟ್ಟಿದ್ವಪಾ ಅವು,” ಅಂತ ಜೋರ್ ನಕ್ಕ್ಯಾ. ನನ್ನ ನೋಡಿ ನಮ್ಮ ಅಕ್ಕ, ಡ್ಯಾಡಿ ಇಬ್ಬರಿಗೂ ನಗೂ ಬಂತು.
“ಅವ್ವಿ… ಇವತ್ತೇನ ಜಲ್ದಿ ಎದ್ದಿಯಲ್ಲಾ? ಎದ್ದಬಿಟ್ಟಿ ಮತ್ ಹೊಳ್ಳಿ ಹೋಗಿ ಮಕ್ಕಾಬ್ಯಾಡ. ನಿಮ್ಮ ಅಕ್ಕಗ ಆಸರಾಗ ಕೆಲಸಕ್…” ಅಂದ್ರು. ನಮ್ಮ ಅಕ್ಕನ ನೋಡಿ, “ನನಗೂ ಸ್ವಲ್ಪ ಚಾ ಕೊಡವಾ…” ಅನಕೊಂತ ಹೊರಗ ನಡದ್ರು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ಚಿತ್ರ ಕೃಪೆ: ಸೌಮ್ಯಾ ಸ್ವಾಮಿನಾಥನ್