ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ 72ನೇ ವನ್ಯಜೀವಿ ಸಪ್ತಾಹ-2026ರ ಅಂಗವಾಗಿ ಅಕ್ಟೋಬರ್ 04 ರಂದು ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.ವನ್ಯ ಸಪ್ತಾಹ-2026ರ ಕಾರ್ಯಕ್ರಮದ ಭಾಗವಾಗಿ ಆವಾಸಸ್ಥಾನಗಳ ಸಂಪರ್ಕ, ವನ್ಯಜೀವಿಗಳ ಸಮೃದ್ಧಿ – ವನ್ಯಜೀವಿಗಳಿಗಾಗಿ ವೇಗವನ್ನು ಕಡಿಮೆ ಮಾಡಿ, ರಸ್ತೆಯಲ್ಲಿ ಅವಕಾಶ ಕಲ್ಪಿಸಿ, ಭೂ ಪ್ರದೇಶದಲ್ಲಿ ಅವಕಾಶ ಕಲ್ಪಿಸಿ ಎಂಬ ಧ್ವೇಯವಾಕ್ಯದೊಂದಿಗೆ ಅಕ್ಟೋಬರ್ 04 ರಂದು ಬೆಳಿಗ್ಗೆ 06:30ಕ್ಕೆ ವನ್ಯಜೀವಿ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು.
ವನ್ಯಜೀವಿ ವಿಭಾಗದ ಕಚೇರಿಯಿಂದ ಪ್ರಾರಂಭಗೊಂಡ ಸೈಕಲ್ ಜಾಥಾವು ಕುವೆಂಪು ರಸ್ತೆ, ಆಲ್ಕೋಳ ಸರ್ಕಲ್, ಆಯನೂರು, ಸಿರಿಗೆರೆ, ಸಂಪಿಗೆಹಳ್ಳ ಮಾರ್ಗವಾಗಿ ಹಣಗೆರೆಯಲ್ಲಿ ಮುಕ್ತಾಯಗೊಂಡಿತು. ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಭಾರತೀಯ ಅರಣ್ಯ ಸೇವೆಯ (IFS) ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಅಜ್ಜಯ್ಯ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಸನ್ನ ಕೃಷ್ಣ ಪಟಗಾರ , ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ವಲಯ ಅರಣ್ಯಾಧಿಕಾರಿ ಬಾಬು ಕೆ, ಅರಣ್ಯ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು





