ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಬಿದಿರಾಂಬಿಕ ದೇವಸ್ಥಾನ
ನಾಮಕಾವಸ್ತೆಗೆ ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ ಎಂಬ ಫಲಕ
ಅನಿಷ್ಟ ಪದ್ದತಿ ಅಸ್ಪೃಶ್ಯತಾ ಆಚರಣೆ ಮುಂದುವರಿದಿದ್ದು, ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನವನ್ನು ಪ್ರವೇಶಿಸಲು ಯತ್ನಿಸಿದ್ದಾನೆ ಎಂಬ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿದರಗುಡಿ ಗ್ರಾಮದಲ್ಲಿ 64 ಹಳ್ಳಿಗಳ ಗ್ರಾಮದೇವತೆ ಬಿದಿರಾಂಬಿಕಾ ದೇವಸ್ಥಾನವಿದೆ. ಈ ದೇವಾಲಯವು ಮುಜರಾಯಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.
ಕಳೆದ ನಾಲ್ಕು ದಿನಗಳಿಂದ ಬಿದಿರಾಂಬಿಕ ಮತ್ತು ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ದೇವಿಯ ಬ್ರಹ್ಮ ರಥೋತ್ಸವ ನಡೆದಿದೆ. ಈ ವೇಳೆ ಬಿದಿರಾಂಬಿಕಾ ದೇವಾಲಯ ಪ್ರವೇಶಕ್ಕೆ ದಲಿತ ಯುವಕ ಯತ್ನಿಸಿದ್ದಾನೆ ಎಂದು ಆರೋಪಿಸಿ ಬಿದಿರಗುಡಿ ಶ್ರೀಚಿಕ್ಕಮ್ಮ ದೇವಿ ದೇವಾಲಯದ ಧರ್ಮದರ್ಶಿ ಶಿವಕುಮಾರ್ ಸಮ್ಮುಖದಲ್ಲಿ ದೇವಾಲಯದ ಅರ್ಚಕ ಸೇರಿದಂತೆ ಸುಮಾರು 20 ಜನರ ಗುಂಪು ದಲಿತ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದೆ.
ಲಿಂಗರಾಜು (30) ಹಲ್ಲೆಗೆ ಒಳಗಾದ ದಲಿತ ವ್ಯಕ್ತಿ. ಗಾಯಳು ಲಿಂಗರಾಜು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೊನ್ನವಳ್ಳಿ ಪೊಲೀಸರು ಹಾಗೂ ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ಧರಾಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನ ನಡೆಸಿದ್ದಾರೆ.

ಹಲವು ವರ್ಷಗಳಿಂದ ಬಿದಿರಾಂಬಿಕಾ ದೇವಾಲಯದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ದೇವಾಲಯದಲ್ಲಿ ದಲಿತರಿಗೆ ಪೂಜೆ ಮಾಡಿಕೊಡಲು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ದಲಿತರು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರು.
ಕಳೆದ ವರ್ಷ ಬಿದಿರಾಂಬಿಕಾ ದೇವಿ ಉತ್ಸವ ಮೂರ್ತಿ ಚಿಕ್ಕಮ್ಮ ದೇವಿ ದೇವಾಲಯದ ಬಳಿ ಬಂದಾಗ ದಲಿತರು ಈಡುಗಾಯಿ ಹಾಕಿದ್ದಾರೆ. ಈ ವಿಚಾರವಾಗಿ ಚಿಕ್ಕಮ್ಮ ದೇವಾಲಯದ ಅರ್ಚಕ, ದಲಿತರು ಈಡುಗಾಯಿ ಹಾಕುವಂತಿಲ್ಲ. ನೀನು ಈಡುಗಾಯಿ ಹಾಕಿ ದೇವರಿಗೆ ಮೈಲಿಗೆ ಮಾಡಿದ್ದೀಯ ಎಂದು ಗಲಾಟೆ ಮಾಡಿದ್ದರು. ಈ ವಿಚಾರವಾಗಿ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು.
ಈ ಸುದ್ದಿ ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ನನ್ನ ಬೆಂಬಲವಿದೆ: ಡಿ ಕೆ ಶಿವಕುಮಾರ್
ಬಿದಿರಾಂಬಿಕಾ ದೇವಾಲಯದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ದೇವಾಲಯದಲ್ಲಿ ನಾಲ್ಕು ದಿನಗಳಿಂದ ಜಾತ್ರೆ ನಡೆಯುತ್ತಿದ್ದು, ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಹೋದ ದಲಿತರ ಮೇಲೆ ಗಲಾಟೆ ಮಾಡಿದ್ದು, ಚಿಕ್ಕಮ್ಮ ದೇವರಿಗೆ ಪೀಠ ಮಾಡಿಸಿರುವ ವಿಚಾರ ಮುಂದಿಟ್ಟು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಲಿಂಗರಾಜು ಆರೋಪಿಸಿದ್ಪದಾರೆ.
ಬಿದಿರಾಂಬಿಕಾ ದೇವಾಲಯಕ್ಕೆ ದಲಿತರಿಗೆ ಪ್ರವೇಶವಿಲ್ಲ. ದಲಿತರಿಗೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಬಿದಿರಗುಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ದಲಿತರು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ದೇವಾಲಯದ ಮುಂಭಾಗದಲ್ಲಿ ಕಾಟಾಚಾರಕ್ಕೆ ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ ಎನ್ನುವ ನಾಮಫಲಕ ಅಳವಡಿಸಲಾಗಿದೆ ಎಂದು ಬಿದಿರೆಗುಡಿ ಗ್ರಾಮಸ್ಥ ಧನಂಜಯ ಅಸಮಧಾನ ವ್ಯಕ್ತಪಡಿಸಿದ್ದಾರೆ.