ಮೈಸೂರು ಹೊರವಲಯದಲ್ಲಿರುವ ಬಿಇಎಂಎಲ್ ಲಿಮಿಟೆಡ್ ಕಾರ್ಖಾನೆ ಆವರಣದಲ್ಲಿ ಔದ್ಯೋಗಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಅಡಚಣೆಯಾಗಿರುವ 137 ಮರಗಳನ್ನು ಕಡಿಯುವ ಕುರಿತು ಆಕ್ಷೇಪಣೆ ಸಲ್ಲಿಸದಿರಲು ‘ಪರಿಸರಕ್ಕಾಗಿ ನಾವು’ ಸಂಘಟನೆ ತೀರ್ಮಾನಿಸಿದೆ.
ಸಂಘಟನೆಯ ಐವರು ಸದಸ್ಯರ ನಿಯೋಗವು ಇಂದು ಕಾರ್ಖಾನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದೆ.
ಈ ತೀರ್ಮಾನದ ಪ್ರಮುಖ ಕಾರಣಗಳಾಗಿ ಹಲವು ಅಂಶಗಳನ್ನು ಸಂಘಟನೆ ಉಲ್ಲೇಖಿಸಿದೆ. ಸುಮಾರು 450 ಎಕರೆ ವಿಸ್ತೀರ್ಣ ಹೊಂದಿರುವ ಕಾರ್ಖಾನೆಯ ಆವರಣದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಹಸಿರು ಹೊದಿಕೆ ಇರುವುದಾಗಿ ತಿಳಿಸಲಾಗಿದೆ.
ಕಾರ್ಖಾನೆಯಲ್ಲಿ ಕಾರ್ಮಿಕರು, ಸಿಬ್ಬಂದಿ ಹಾಗೂ ಅಧಿಕಾರಿಗಳು ಸೇರಿ ಒಟ್ಟು 1890 ಜನರು ಕಾರ್ಯನಿರ್ವಹಿಸುತ್ತಿದ್ದು, ಈಗಿರುವ ಆರೋಗ್ಯ ಕೇಂದ್ರವು ತುಂಬಾ ಚಿಕ್ಕದಾಗಿದೆ. ಹೊಸ ಆರೋಗ್ಯ ಕೇಂದ್ರದ ಅಗತ್ಯವಿದೆ ಎಂದು ಐಎಸ್ಓ 45001 ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಪ್ರಮಾಣೀಕರಣ ಸಂಸ್ಥೆ ಸೂಚಿಸಿದ್ದು, ಕಾರ್ಖಾನೆ ಆಡಳಿತ ಮಂಡಳಿಯು ಅದನ್ನು ಪಾಲಿಸಬೇಕಾಗಿದೆ ಎಂದು ತಿಳಿಸಲಾಗಿದೆ.
ಪ್ರಸ್ತಾವಿತ ಆರೋಗ್ಯ ಕೇಂದ್ರವನ್ನು ಮುಖ್ಯ ರಸ್ತೆ ಮತ್ತು ಮುಖ್ಯ ಗೇಟ್ ಸಮೀಪ ನಿರ್ಮಿಸಲಾಗುತ್ತಿದ್ದು, ಇದರಿಂದ ಗಾಯಾಳುಗಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಹೊರಗಿನ ಆಸ್ಪತ್ರೆಗಳಿಗೆ ವೇಗವಾಗಿ ಸಾಗಿಸಲು ಅನುಕೂಲವಾಗಲಿದೆ. ಜೊತೆಗೆ ಕಾರ್ಖಾನೆಯ ಸುತ್ತಮುತ್ತ ಹಾಗೂ ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವ ಸಾರ್ವಜನಿಕರಿಗೂ ತುರ್ತು ಪ್ರಾಥಮಿಕ ಚಿಕಿತ್ಸೆ ಒದಗಿಸಲು ಸಹಾಯಕವಾಗಲಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಗುರುತಿಸಿರುವ ಎಲ್ಲಾ 137 ಮರಗಳನ್ನು ಕಡಿಯದೆ ಸಾಧ್ಯವಾದಷ್ಟು ಮರಗಳನ್ನು ಉಳಿಸಲು ಪ್ರಯತ್ನಿಸುವುದಾಗಿ ಹಾಗೂ ಕಡಿದ ಮರಗಳ ಸಂಖ್ಯೆಯ ಹತ್ತರಷ್ಟು ಗಿಡಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ಕಾರ್ಖಾನೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಲ್ಲದೆ ಸ್ಥಳೀಯ ವಿವಿಧ ಜಾತಿಯ ಗಿಡಗಳು ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು ಜೀವ ವೈವಿಧ್ಯತೆಯನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಶಿಕ್ಷಣ ಕ್ಷೇತ್ರದ ಬದಲಾವಣೆಗಳ ಕುರಿತು ದೇವನೂರು ಮಹದೇವರ ಸಲಹೆ ಕೇಳಿದ ಸಚಿವ ಮಧು ಬಂಗಾರಪ್ಪ
ಸ್ಥಳ ಪರಿಶೀಲನೆ ವೇಳೆ ಕಾರ್ಖಾನೆಯ ಜನರಲ್ ಮ್ಯಾನೇಜರ್ ಸುಧಾಕರ್ ಎಸ್., ಎಚ್‌ಆರ್ ಮ್ಯಾನೇಜರ್ ಕರಿತಿರುಮಲ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಮಾಲತೇಶ್ ಕೆ. ಸೇರಿದಂತೆ ಹಲವು ಅಧಿಕಾರಿಗಳು ಅಗತ್ಯ ಮಾಹಿತಿಗಳನ್ನು ನೀಡಿ ಸಹಕರಿಸಿದರು.
ನಿಯೋಗದಲ್ಲಿ ಪರಶುರಾಮೇಗೌಡ, ರವಿ ಬಳೆ, ಬಾನು ಪ್ರಶಾಂತ್, ವಿಶ್ವನಾಥ್ ಹಾಗೂ ಸುಧೀರ್ ಗಣಪತಿ ಇದ್ದರು.




