ಈದ್-ಉಲ್-ಅಝಾ (ಬಕ್ರೀದ್) ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ಈ ನಡುವೆ ಕೆಲವು ಮುಸ್ಲಿಂ ಸಂಘಟನೆಗಳು ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದ ಮುಸ್ಲಿಂ ಸಂಘಟನೆಗಳು ದೇಶದಲ್ಲಿ ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಆಗ್ರಹಿಸಿವೆ.
ಜಮೀಯತ್ ಉಲೇಮಾ-ಎ-ಹಿಂದ್‌ನ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು, ಹಸುವಿನ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಅನಗತ್ಯ ಸಂಘರ್ಷಗಳಿಗೆ ಶಾಶ್ವತ ತೆರೆ ಎಳೆಯಲು ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಆಗ್ರಹಕ್ಕೆ ಕೆಲವು ಮುಸ್ಲಿಂ ಸಂಘಟನೆಗಳು ಬೆಂಬಲ ನೀಡಿವೆ.
ಇದನ್ನು ಓದಿದ್ದೀರಾ? ಆಹಾರದ ಸ್ವಾತಂತ್ರ್ಯವನ್ನು ಮನ್ನಿಸದ ಸಮಾಜದಲ್ಲಿ ಅರ್ಥಪೂರ್ಣ ಡೆಮಾಕ್ರಸಿಯಿದೆ ಎನ್ನಲಾಗದು
ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವುದರಿಂದ ಹಸುವಿನ ಹೆಸರಿನಲ್ಲಿ ನಡೆಯುವ ಹಿಂಸಾಚಾರ ಮತ್ತು ರಾಜಕೀಯ ವಿವಾದಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಮೌಲಾನಾ ಅರ್ಷದ್ ಅಭಿಪ್ರಾಯಪಟ್ಟಿದ್ದಾರೆ. ಗೋ ಮಾಂಸ ಸೇವನೆ ವಿಚಾರದಲ್ಲಿ ಗುಂಪು ಹತ್ಯೆ ಮತ್ತು ಹಿಂಸಾಚಾರ ನಡೆಯುವುದನ್ನೂ ತಡೆಯಲು ಈ ಕ್ರಮ ಮುಖ್ಯ ಎಂದಿದ್ದಾರೆ.
ಇನ್ನು ಈ ಹಿಂದಿನಿಂದಲೂ ಆರ್‌ಎಸ್‌ಎಸ್ ಸಂಯೋಜಿತ ಮುಸ್ಲಿಂ ಸಂಘಟನೆಯಾದ ‘ಮುಸ್ಲಿಂ ರಾಷ್ಟ್ರೀಯ ಮಂಚ್’ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಂಘಟನೆಯು ದೇಶಾದ್ಯಂತ ಮುಸ್ಲಿಮರಿಂದ ಸಹಿ ಸಂಗ್ರಹ ಅಭಿಯಾನಗಳನ್ನು ಕೂಡ ನಡೆಸಿತ್ತು. ಈ ನಡುವೆ ಮೌಲಾನಾ ಅರ್ಷದ್ ಮದನಿ ಈ ಆಗ್ರಹವನ್ನು ಕೇಂದ್ರದ ಮುಂದಿಟ್ಟಿದ್ದಾರೆ.
ಇನ್ನು ಅಖಿಲ ಭಾರತ ಮುಸ್ಲಿಂ ಜಮಾಅತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ, ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವ ಮದನಿಯವರ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಪಿಟಿಐ ಜೊತೆ ಮಾತನಾಡಿದ ರಜ್ವಿ, ಈ ವಿಷಯದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ನಡುವೆ ಒಮ್ಮತ ಮೂಡಿಸುವುದು ತಮ್ಮ ಉದ್ದೇಶ ಎಂದು ಹೇಳಿದರು.
ಈ ವಿಷಯದ ಕುರಿತು ಮಾತನಾಡಿದ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಯಾಸೂಬ್ ಅಬ್ಬಾಸ್, ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಬೇಡಿಕೆ ಮಾನ್ಯವಾಗಿದ್ದರೂ, ಈ ವಿಚಾರದಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಗೋವಿನ ಬಗ್ಗೆ ಸರ್ಕಾರದ ಉದ್ದೇಶವು ಅದರ ನೀತಿಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಬೇಕು. ಕೆಲವು ರಾಜ್ಯಗಳಲ್ಲಿ ನಿರ್ಬಂಧವಿಲ್ಲದೆ ಗೋವುಗಳನ್ನು ತಿನ್ನುವ ಮತ್ತು ಇತರ ರಾಜ್ಯಗಳಲ್ಲಿ ಗೋವಿನ ಹೆಸರಿನಲ್ಲಿ ಜನರ ಬಲಿ ಪಡೆಯುವ ಪರಿಸ್ಥಿತಿಗಿಂತ ಸ್ಥಿರವಾದ ವಿಧಾನವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಬಂಗಾಳ | ಬಿಜೆಪಿ ಗೋರಕ್ಷಣೆ ನಾಟಕಕ್ಕೆ ಮುಸ್ಲಿಂ ಯುವಕರ ಪೆಟ್ಟು; ಸಂಕಷ್ಟದಲ್ಲಿ ಹಿಂದು ರೈತರು!
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಉಪಾಧ್ಯಕ್ಷ ಕೌಸರ್ ಹಯಾತ್ ಖಾನ್ ಕೂಡಾ ಈ ಆಗ್ರಹಕ್ಕೆ ಬೆಂಬಲ ನೀಡಿದ್ದಾರೆ. ಎಲ್ಲ ಮುಸ್ಲಿಂ ಸಂಘಟನೆಗಳು ಒಟ್ಟಾಗಿ ಮುಂದೆ ಬಂದರೆ ಮಾತ್ರ ಈ ಉದ್ದೇಶವು ಪೂರ್ಣ ವೇಗವನ್ನು ಪಡೆಯಬಹುದು ಎಂದರು. ಪ್ರಾಣಿಗಳ ಬಗ್ಗೆ ಸರ್ಕಾರದ ನೀತಿಗಳನ್ನು ಟೀಕಿಸಿದ ಖಾನ್, ಗೋವಾ, ಅಸ್ಸಾಂ ಮತ್ತು ವಿವಿಧ ಈಶಾನ್ಯ ರಾಜ್ಯಗಳಲ್ಲಿ ಇನ್ನೂ ಗೋಮಾಂಸವನ್ನು ಯಾವುದೇ ನಿರ್ಬಂಧವಿಲ್ಲದೆ ಸೇವಿಸಲಾಗುತ್ತದೆ ಎಂದು ಹೇಳಿದರು.
ಈ ಪೈಕಿ ಹೆಚ್ಚಿನವು ಇದೇ ಬಿಜೆಪಿ ಆಡಳಿತ ಇರುವ ರಾಜ್ಯಗಳಾಗಿವೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಮತ್ತು ಈಗ ಪಶ್ಚಿಮ ಬಂಗಾಳದಲ್ಲಿ, ಗೋಹತ್ಯೆಯ ವಿಷಯವನ್ನು ರಾಜಕೀಯಗೊಳಿಸುತ್ತದೆ. ಆದರೆ ಅಸ್ಸಾಂ ಇತರೆ ರಾಜ್ಯಗಳಲ್ಲಿ ವಿಭಿನ್ನ ನಿಲುವನ್ನು ತಾಳುತ್ತದೆ ಎಂದು ಬಿಜೆಪಿ ಸರ್ಕಾರ ದ್ವಿಮುಖ ನೀತಿಯನ್ನು ಟೀಕಿಸಿದರು.
ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಗೋಮಾಂಸ (ಹೆಚ್ಚಾಗಿ ಎಮ್ಮೆ ಮಾಂಸ) ರಫ್ತು ಪ್ರಮಾಣವು ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಏರಿಕೆಯಾಗುತ್ತಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಾಂಸ ರಫ್ತು ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಅಮೆರಿಕದ ಕೃಷಿ ಇಲಾಖೆ ವರದಿಗಳ ಪ್ರಕಾರ, ಭಾರತದ ರಫ್ತು ಸುಮಾರು 1.65 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ತಲುಪಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚುತ್ತಲೇ ಇದೆ. ಕೇಂದ್ರದ ಬಿಜೆಪಿ ಸರ್ಕಾರವೇ ಗೋಮಾಂಸ ಮಾರಾಟದಲ್ಲಿ ತೊಡಗಿರುವಾಗ ಈಗ ಗೋವನ್ನು ರಾಷ್ಟ್ರೀಯ ಹಸುವಾಗಿ ಘೋಷಿಸಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.




