ಸಾಹಿತಿ ದೇವನೂರು ಮಹದೇವ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮೈಸೂರಿನ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಬದಲಾವಣೆಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಸ್ಥಾಪನೆ ಸೇರಿದಂತೆ ಶಿಕ್ಷಣ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಮಹತ್ವದ ಯೋಜನೆಗಳು ಹಾಗೂ ಸುಧಾರಣೆಗಳ ಕುರಿತು ಸಚಿವರು ದೇವನೂರು ಮಹದೇವರಿಗೆ ವಿವರಿಸಿದರು. ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅವರ ಸಲಹೆ ಹಾಗೂ ಸೂಚನೆಗಳನ್ನು ಸಹ ಕೇಳಿದರು.
ಸಚಿವ ಮಧು ಬಂಗಾರಪ್ಪ ಅವರು ಈ ಬಾರಿ ಶಿಕ್ಷಣ ಇಲಾಖೆಯಲ್ಲಿ ದಾಖಲಾಗಿರುವ ಹೆಚ್ಚಿದ ಫಲಿತಾಂಶ, ಕೆಪಿಎಸ್ ಶಾಲೆಗಳ ಸ್ಥಾಪನೆ, ಶಿಕ್ಷಕರ ನೇಮಕಾತಿ, ಪೋಷಕ-ಶಿಕ್ಷಕರ ಮಹಾಸಭೆ, ಎಲ್‌ಬಿಎ ಹಾಗೂ ದ್ವಿಭಾಷಾ ಮಾಧ್ಯಮಕ್ಕೆ ಸಂಬಂಧಿಸಿದ ಬದಲಾವಣೆಗಳ ಬಗ್ಗೆ ಸುಧೀರ್ಘವಾಗಿ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ದೇವನೂರು ಮಹದೇವರು ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಕೃಪಾಂಕ ನೀಡುವ ವಿಚಾರ, ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಮೀಸಲಾತಿ ಪಾಲನೆ, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ, ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಬಿಸಿಯೂಟ ತಯಾರಿಸುವ ಮಹಿಳೆಯರ ಬಗ್ಗೆ ಕಾಳಜಿ ವಹಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.

ಇದರ ಜೊತೆಗೆ ಮಕ್ಕಳಿಗೆ ಪ್ರಾರಂಭದಿಂದಲೇ ಉತ್ತಮ ಇಂಗ್ಲಿಷ್ ಮಾತನಾಡಲು ಕಲಿಸುವುದರೊಂದಿಗೆ ಸ್ಪಷ್ಟವಾಗಿ ಕನ್ನಡ ಬರೆಯುವ ಅಭ್ಯಾಸ ಬೆಳೆಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. ರಂಗಭೂಮಿ ಶಿಕ್ಷಕರನ್ನು ನೇಮಕ ಮಾಡುವ ಕುರಿತು ತಮ್ಮ ಸಲಹೆಗಳನ್ನು ಶೀಘ್ರದಲ್ಲೇ ಸಚಿವರಿಗೆ ತಲುಪಿಸುವುದಾಗಿ ದೇವನೂರು ಮಹದೇವರು ತಿಳಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಒಬ್ಬ ಶಿಕ್ಷಣ ಸಚಿವನಾಗಿ ಹಿರಿಯ ಸಾಹಿತಿಗಳ ಸಲಹೆ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದೇವನೂರು ಮಹದೇವರನ್ನು ಭೇಟಿ ಮಾಡಿ ಶಿಕ್ಷಣ ವ್ಯವಸ್ಥೆಯ ಕುರಿತು ಚರ್ಚೆ ಮಾಡಿದೆ. ನನ್ನ ಮೇಲೆ ಸಾಕಷ್ಟು ಟೀಕೆ-ಟಿಪ್ಪಣಿಗಳು ಬಂದಿದ್ದವು. ಆದರೆ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದಕ್ಕೆ ನಾವು ಶಿಕ್ಷಣ ವ್ಯವಸ್ಥೆಯಲ್ಲಿ ತಂದ ಬದಲಾವಣೆಗಳೇ ಕಾರಣ” ಎಂದು ಹೇಳಿದರು.
“ಶಿಕ್ಷಣ ವ್ಯವಸ್ಥೆ ಬಹಳ ಮಟ್ಟಿಗೆ ಹಾಳಾಗಿತ್ತು. ವೆಬ್ ಕಾಸ್ಟ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡು ವ್ಯವಸ್ಥೆಯನ್ನು ಸರಿಪಡಿಸಿದ್ದೇವೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ” ಎಂದು ತಿಳಿಸಿದರು.

“ಸಮಾನತೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಅದನ್ನು ನಾವು ಸಮರ್ಪಕವಾಗಿ ಮಾಡುತ್ತೇವೆ. ಮಕ್ಕಳಿಗೆ ಕಲೆ, ನಾಟಕ ಹಾಗೂ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕುರಿತು ದೇವನೂರು ಮಹದೇವರು ಸಲಹೆ ನೀಡಿದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಶಿಕ್ಷಣದ ಕುರಿತು ಸಹ ಮಾರ್ಗದರ್ಶನ ನೀಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ?ದುಡಿಯುವ ಕೈಗಳಿಗೆ ಆಸರೆ: ಕನಿಷ್ಠ ವೇತನ 23,376 ರೂ. ನಿಗದಿಪಡಿಸಿದ ರಾಜ್ಯ ಸರ್ಕಾರ
ಕನ್ನಡ ಶಾಲೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಯಾವ ಶಾಲೆಯಲ್ಲಿ ಮಕ್ಕಳನ್ನು ಸೇರಿಸಬೇಕು ಎಂಬುದು ಪೋಷಕರು ಹಾಗೂ ಮಕ್ಕಳ ಹಕ್ಕು. ಇದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟಪಡಿಸಿದೆ. ಆದರೆ ಸರ್ಕಾರಿ ನೌಕರರು ಮಾತ್ರವಲ್ಲ, ಎಲ್ಲರೂ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವಂತೆ ನಾನು ಮನವಿ ಮಾಡುತ್ತೇನೆ. ಇದು ಪ್ರತಿಯೊಬ್ಬರ ಬದ್ಧತೆಯಾಗಬೇಕು” ಎಂದು ಹೇಳಿದರು.




