ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಸುಳ್ಳುಸುದ್ದಿಗಳ ಹರಡುವಿಕೆ ಕೂಡ ಅತಿಯಾಗುತ್ತಿದ್ದು, ಅಂತಹ ಸುಳ್ಳುಸುದ್ದಿಗಳಿಂದ ದೊಡ್ಡ ದೊಡ್ಡ ಕಲಹಗಳು ಉಂಟಾಗಿರುವ ನಿದರ್ಶನಗಳು ನಮ್ಮ ಮುಂದಿವೆ. ಆದ್ದರಿಂದ ವಿದ್ಯಾರ್ಥಿಗಳು ಫೇಕ್ ನ್ಯೂಸ್ ಕುರಿತು ಜಾಗೃತರಾಗಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಿಪಟೂರು ಅಧ್ಯಕ್ಷ ದಯಾನಂದ್.ಟಿ.ಎಸ್ ತಿಳಿಸಿದರು.
ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಪತ್ರಿಕೋದ್ಯಮ ವಿಭಾಗ ಹಾಗೂ ಈ ದಿನ ಡಾಟ್ ಕಾಮ್ ಇವರ ಸಹಯೋಗದಲ್ಲಿ ‘ಪ್ರಸ್ತುತ ವಿದ್ಯಮಾನಗಳಲ್ಲಿ ಡಿಜಿಟಲ್ ಮಾಧ್ಯಮಗಳ ಪಾತ್ರ’? ಎಂಬ ವಿಷಯದ ಕುರಿತು ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲವನ್ನು ನಂಬಬೇಡಿ, ಆದಷ್ಟು ಪತ್ರಿಕೆಗಳನ್ನು ಓದುತ್ತಾ ವಿಷಯದ ಸತ್ಯಾಸತ್ಯತೆಯನ್ನು ಪರೀಕ್ಷೆ ಮಾಡಿ ನೋಡಿ ಎಂದರು.

ಈ ದಿನ ಡಾಟ್ ಕಾಮ್ ತುಮಕೂರು ಜಿಲ್ಲಾ ವರದಿಗಾರರಾದ ಚಂದನ್.ಡಿ.ಎನ್ ಮಾತನಾಡಿ, ಈ ದಿನ ಡಾಟ್ ಕಾಮ್ ಎಂಬುದು ಆನ್ಲೈನ್ ಮಾಧ್ಯಮವಾಗಿ ಯಾವ ರೀತಿಯಲ್ಲಿ ಬೆಳೆಯುತ್ತಿದೆ, 11 ಲಕ್ಷ ಜನರನ್ನ ತಲುಪಿದ್ದು ಹೇಗೆ, ಈ ದಿನ ಡಾಟ್ ಕಾಮ್ ಪ್ರಸ್ತುತಿಗೆ ಬರಲು ಕಾರಣ ಏನು, ಯಾವ ರೀತಿಯಲ್ಲಿ ನಾಗರಿಕ ಸಮಾಜವು ಇದರ ಅಂಗವಾಗಿ ಕಾರ್ಯ ನಿರ್ವಹಿಸಬಹುದು ಎಂದೆಲ್ಲ ಸರಳವಾಗಿ ವಿವರಿಸಿದರು.

ಕರ್ನಾಟಕದಲ್ಲಿ ಹೊಸ ರೀತಿಯ ಮಾಧ್ಯಮವನ್ನು ಕಟ್ಟಬೇಕು ಎಂದುಕೊಂಡು ಈ ದಿನ ಡಾಟ್ ಕಾಮ್ ರೂಪಿಸಲಾಗಿದ್ದು, ಪತ್ರಿಕೋದ್ಯಮದಲ್ಲಿ ಓದುವ ವಿದ್ಯಾರ್ಥಿಗಳೇ ಅಂತೇನಿಲ್ಲ, ಸಾಮಾನ್ಯ ನಾಗರಿಕರು ಕೂಡ ನಾಗರಿಕ ಪತ್ರಕರ್ತರಾಗಿ ನಮ್ಮೊಂದಿಗೆ ಕೆಲಸ ಮಾಡಬಹುದು. ಈ ಡಿಜಿಟಲ್ ಮೀಡಿಯಾದ ವಿಶೇಷತೆಯೇ ವಿಶ್ವದ ಯಾವುದೇ ಮೂಲೆಯಲ್ಲಿ ಬೇಕಾದರು ಕುಳಿತು ಕ್ಷಣ ಮಾತ್ರದಲ್ಲಿ ಸುದ್ದಿ ಓದಬಹುದು, ನೋಡಬಹುದು ಹಾಗೂ ಸ್ವತಃ ನೀವೇ ಬರೆಯಬಹುದು ಹಾಗೂ ಬರೆದ ಸುದ್ದಿರನ್ನು ಹಂಚಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಶಶಿಕುಮಾರ್.ಎಚ್.ಸಿ ಮಾತನಾಡಿ, ವಿದ್ಯಾರ್ಥಿಗಳ ಮೊಬೈಲ್ ಬಳಕೆಯಲ್ಲಿ ಮುಳುಗಿ, ಸತ್ಯ ಸುಳ್ಳುಗಳ ಅರಿವಿರದೇ ಫೇಕ್ ನ್ಯೂಸ್ ಗಳಿಗೆ ಬಲಿಪಶುಗಳಾಗುತ್ತಿದ್ದು, ಡಿಜಿಟಲ್ ಮಾಧ್ಯಮವನ್ನು ಅತ್ಯಂತ ಎಚ್ಚರಿಕೆಯಿಂದ ಉಪಯೋಗಿಸಿ ಮತ್ತು ಡಿಜಿಟಲ್ ಮೀಡಿಯಾ ಕುರಿತ ಈ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಾರ್ಥ್ ಮಾಧ್ಯಮ ಅಧ್ಯಯನ ಕೇಂದ್ರ ಆಯೋಜಿಸಿದ್ದ ಸಂಭ್ರಮ ಮಾಧ್ಯಮ ಹಬ್ಬದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್.ಸಿ.ಜಿ, ಪ್ರಜಾಪ್ರಗತಿ ಉಪಸಂಪಾದಕ ದರ್ಶನ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ದೇವರಾಜ್.ಸಿ, ಹಣಮಂತ ಕಾಂಬಳೆ, ಸಮಾಜ ಕಾರ್ಯ ವಿಭಾಗದ ಗಂಗಾಧರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




