ತೋಟದ ಸಾಲಿನಲ್ಲಿನ ರಸ್ತೆಗೆ ಓಡಾಡದಂತೆ ನಿರ್ಬಂಧ ಹೇರಿ ಒಂದು ಕುಟುಂಬಕ್ಕೆ ದಿಗ್ಬಂಧನ ಹಾಕಿದ ಕೆಲವರು ದ್ವಿತೀಯ ಪಿಯುಸಿ ಹೆಣ್ಣು ಮಗುವಿನ ಶಿಕ್ಷಣಕ್ಕೆ ಕುತ್ತು ತಂದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಪ್ರಭುವನಹಳ್ಳಿ ಕೋಡಿ ತೋಟದಲ್ಲಿ ನಡೆದಿದೆ.
ಕಳೆದ ಮೂರು ತಿಂಗಳಿಂದ ಕಾಲೇಜಿಗೆ ಹೋಗಲು ಭಯ ಪಡುವ ವಿದ್ಯಾರ್ಥಿನಿ ಪಾಡು ಹೇಳತೀರದು. ಓದುವ ಹಂಬಲವಿದ್ದೂ ಮನೆಗೆ ಇರುವ ಒಂದು ರಸ್ತೆಯ ವಿವಾದ ತಾರಕ್ಕೇರಿ ಮನೆಯಿಂದ ಹೊರ ಬರಲು ವಿದ್ಯಾರ್ಥಿನಿ ಸೇರಿದಂತೆ ವಿದ್ಯಾರ್ಥಿನಿ ತಂದೆ ಜಯಣ್ಣ ತಾಯಿ ಪುಷ್ಪಲತಾ ಹಾಗೂ ಇಡೀ ಕುಟುಂಬವೇ ಭಯ ಪಡುವ ಈ ದುಸ್ಥಿತಿಗೆ ಎದುರಾಗಿದೆ. ನಿತ್ಯ ಕಾಯಕಗಳು ಹಾಲು ಹಾಕುವ ಕೆಲಸ, ಕಾಲೇಜು ಹೋಗುವುದು ಹೀಗೆ ಎಲ್ಲವನ್ನೂ ಸಹಿಸಿಕೊಳ್ಳದ ಪರಿಸ್ಥಿತಿ ಕುಟುಂಬಕ್ಕಾಗಿದೆ.
ಕೋಡಿಪಾಳ್ಯದಿಂದ ಗುಬ್ಬಿ ಪಟ್ಟಣಕ್ಕೆ ಕಾಲೇಜಿಗೆ ಹೊರಡುವ ಚೈತ್ರಾ ಸರ್ಕಾರಿ ದಾರಿಗೆ ಬಂದರೆ ತೊಂದರೆ ನೀಡಲು ಕೆಲವರು ಸಜ್ಜಾಗುತ್ತಾರೆ. ಅಶ್ಲೀಲ ಪದಗಳ ಪ್ರಯೋಗ, ವಿಡಿಯೋ ಮಾಡುವುದು, ಕಿಡ್ನಾಪ್ ಮಾಡುವ ಮಾತುಗಳು ತನಗೆ ಭಯ ತಂದಿದೆ ತನ್ನ ಅಳಲು ತೋಡಿಕೊಂಡ ವಿದ್ಯಾರ್ಥಿನಿ ಶಿಕ್ಷಣ ಹಕ್ಕು ಕಸಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಸಾಮಾಜಿಕ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.
ಖಾಸಗಿ ಹಾಗೂ ಸರ್ಕಾರಿ ರಸ್ತೆ ಎಂಬ ವಿವಾದಕ್ಕೆ ಸಿಲುಕಿ ಕೆಲವರು ಹೇರಿದ್ದ ನಿರ್ಬಂಧದಿಂದ ಹೈರಾಣಾದ ಪುಷ್ಪಲತಾ ಜಯಣ್ಣ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಂಗಳವಾರ ರಾತ್ರಿ ಹಾಲು ಹಾಕಿ ಬರಲು ರಸ್ತೆ ಬಳಸಿದ್ದಕ್ಕೆ ಚೈತ್ರಾ ತಾಯಿ ಪುಷ್ಪಲತಾ ಅವರ ಮೇಲೆ ಹಲ್ಲೆ ನಡೆದಿದೆ. ರಸ್ತೆ ವಿವಾದದಿಂದ ಬೇಸತ್ತ ಕುಟುಂಬ ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಮೊರೆ ಹೋಗಿದ್ದಾರೆ. ಈಗ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರಸ್ತೆಯಲ್ಲಿ ಯಾಕೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿ ಜಗಳಕ್ಕೆ ನಿಂತ ಮಂಜಣ್ಣ, ಪರಮೇಶ್, ಮಲ್ಲೇಶ್, ವೆಂಕಟೇಶ್, ಗೀತಮ್ಮ ಹಾಗೂ ಶಿವಣ್ಣ ಎಂಬುವರರು ಹಲ್ಲೆ ಮಾಡಿದ್ದಾರೆ ಎಂದು ಪುಷ್ಪಲತಾ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ದೂರು ದಾಖಲು ಮಾಡಿದ್ದಾರೆ.
ಒಟ್ಟಾರೆ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣಕ್ಕೆ ಅಡ್ಡಿ ಪಡಿಸುವ ಕೃತ್ಯ ಸರಿಯಲ್ಲ. ಮನೆಯಿಂದ ಕಾಲೇಜಿಗೆ ಹೋಗಲು ಇರುವ ರಸ್ತೆಗಿಳಿದರೆ ನಿತ್ಯ ಅವಮಾನ, ಬೆದರಿಕೆ, ಕೆಟ್ಟ ಬೈಗುಳ ಕೇಳುತ್ತಿದೆ ಎನ್ನುವ ಚೈತ್ರಾ ಎಂಬ ಹೆಣ್ಣು ಮಗುವಿನ ಶಿಕ್ಷಣಕ್ಕೆ ಪೊಲೀಸ್ ಇಲಾಖೆ ಬೆಂಬಲ ನೀಡಬೇಕಿದೆ. ಶಿಕ್ಷಣ ಹಕ್ಕು ಚೈತ್ರಾಳಿಗೆ ಕೊಡಿಸುವ ಕೆಲಸ ಮಕ್ಕಳ ಆಯೋಗ, ಮಕ್ಕಳ ರಕ್ಷಣಾಧಿಕಾರಿಗಳು ಮಾಡಬೇಕಿದೆ ಎಂಬುದು ಸಾಮಾಜಿಕ ಕಾರ್ಯಕರ್ತರ ಆಗ್ರಹವಾಗಿದೆ.




