ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಲು ಹಾಗೂ ಭೂಮಿ ಹಕ್ಕುಗಳ ರಕ್ಷಣೆಗೆ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶೆಟ್ಟಿಹಳ್ಳಿ ಮಹೇಶ್ ಅವರನ್ನು ಪಿಟಿಸಿಎಲ್ ಕಾಯ್ದೆ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಜ್ಯ ಸಮಿತಿಯ ಸೂಚನೆಯ ಮೇರೆಗೆ ತುಮಕೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಪಿಟಿಸಿಎಲ್ ಕಾಯ್ದೆ ಸಂಬಂಧಿತ ಸಮಸ್ಯೆಗಳು, ದಲಿತರು ಕಳೆದುಕೊಂಡಿರುವ ಭೂಮಿಯ ರಕ್ಷಣೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಿ, ಶೆಟ್ಟಿಹಳ್ಳಿ ಮಹೇಶ್ ಅವರನ್ನು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ನೂತನ ಜಿಲ್ಲಾಧ್ಯಕ್ಷ ಶೆಟ್ಟಿಹಳ್ಳಿ ಮಹೇಶ್ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದಲಿತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಏಳಿಗೆಗಾಗಿ ಹಿಂದಿನ ರಾಜ-ಮಹಾರಾಜರು ಹಾಗೂ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ದಲಿತರಿಗೆ ಹಕ್ಕುಬದ್ಧವಾಗಿ ದೊರೆತಿರುವ ಭೂಮಿಯನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ. ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತಮ್ಮ ಭೂಮಿಯನ್ನು ಕಳೆದುಕೊಂಡಿರುವ ದಲಿತ ರೈತರ ಸಮಸ್ಯೆಗಳಿಗೆ ಕಾನೂನುಬದ್ಧ ಪರಿಹಾರ ಕಲ್ಪಿಸಲು ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಪಿಟಿಸಿಎಲ್ ಕಾಯ್ದೆಯ ಕುರಿತು ದಲಿತ ರೈತರು ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ತಮ್ಮ ಭೂಮಿಯ ಹಕ್ಕು, ಕಾಯ್ದೆಯಲ್ಲಿರುವ ಅವಕಾಶಗಳು ಹಾಗೂ ಕಾನೂನು ಪ್ರಕ್ರಿಯೆಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಂಡು ಪ್ರಜ್ಞಾವಂತರಾಗಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಹಿರಿಯ ಹೋರಾಟಗಾರ ದೊರೈರಾಜ್, ನಿವೃತ್ತ ತಹಸೀಲ್ದಾರ್ ಹಾಗೂ ವಕೀಲರಾದ ರಾಜ್ಯಾಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ವೆಂಕಟೇಶ್, ದಾಸಪ್ಪ, ಕೃಷ್ಣಮೂರ್ತಿ, ವಕೀಲರಾದ ಚೈತ್ರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




