ಅಪರೂಪದ ರಾಜಕಾರಣಿಯಾಗಿದ್ದ ಹಾಗೂ ಏಕಕಾಲಕ್ಕೆ ಏಳು ಖಾತೆಗಳನ್ನು ನಿಭಾಯಿಸಿದ್ದ ಮಾಜಿ ಸಚಿವ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ಶ್ರೀವೀರಣ್ಣ ಅಭಿಮಾನಿ ಬಳಗ-ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಆ.30ರಂದು ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.30ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ನಗರದ ಗ್ರಂಥಾಲಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ವೀರಣ್ಣ ಅವರು ಶಿಕ್ಷಕರಾಗಿ, ವಕೀಲರಾಗಿ, ವಿಧಾನಪರಿಷತ್ ಹಾಗೂ ವಿಧಾನಸಭಾ ಸದಸ್ಯರಾಗಿ ನಾಡಿಗೆ ಮತ್ತು ವಾಲ್ಮೀಕಿ ಸಮುದಾಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದರು.
1985ರಿಂದ 1989ರವರೆಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಸಣ್ಣ ಉಳಿತಾಯ, ಸಾರಿಗೆ, ತೋಟಗಾರಿಕೆ ಸೇರಿದಂತೆ ಏಕಕಾಲಕ್ಕೆ ಏಳು ಖಾತೆಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ ಕೀರ್ತಿ ವೀರಣ್ಣ ಅವರಿಗೆ ಸಲ್ಲುತ್ತದೆ ಎಂದು ಉಗ್ರಪ್ಪ ಹೇಳಿದರು.
ವಾಲ್ಮೀಕಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ಹಾಗೂ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ತಾಂತ್ರಿಕ ಗೊಂದಲಗಳನ್ನು ನಿವಾರಿಸಿ, ಸಮುದಾಯಕ್ಕೆ ಶೇ.3ರಷ್ಟು ಮೀಸಲಾತಿ ದೊರಕಿಸುವಲ್ಲಿ ವೀರಣ್ಣ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಆದರ್ಶಮಯ ಜೀವನ, ಜನಪರ ಸೇವೆ ಹಾಗೂ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಭಾಪತಿ ರಮೇಶ್‌ಕುಮಾರ್, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ, ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳು, ವೀರಣ್ಣ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಗ್ರಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ಕಾರ್ಯಾಧ್ಯಕ್ಷರಾದ ನರಸಿಂಹಯ್ಯ, ಹನುಮಂತರಾಯಪ್ಪ, ಖಜಾಂಚಿ ರಾಜಪ್ಪ, ಶ್ರೀರಾಮುಲು, ಮುಖಂಡರಾದ ರಾಜಣ್ಣ, ಓಬಳರಾಜು, ಮಹಾಲಿಂಗಪ್ಪ, ಗರುಡಯ್ಯ, ಶೀತಲ್, ಕೃಷ್ಣೇಗೌಡ, ಎ.ಡಿ.ಬಲರಾಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




