ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ. ಹತ್ಯೆ ಬಳಿಕ ಆರೋಪಿ ದಂಪತಿ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಗುಜನಟ್ಟಿ ಗ್ರಾಮದ ರಮೇಶ ಹಣಮಂತ ಬಂಡೋಳಿ (40) ಹತ್ಯೆಯಾದವರು. ಕಲ್ಲೋಳಿ ಗ್ರಾಮದ ಬಣಪ್ಪ ರಾಮಚಂದ್ರ ಒಡೆಯರ (45) ಹಾಗೂ ಆತನ ಪತ್ನಿ ಲಕ್ಷ್ಮಿ ಬಣಪ್ಪ ಒಡೆಯರ (33) ಶರಣಾದ ಆರೋಪಿಗಳು.
ರಮೇಶ ಕಳೆದ ಒಂದು ವರ್ಷದಿಂದ ಬಣಪ್ಪ ಅವರ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ. ಈ ವೇಳೆ ಬಣಪ್ಪನ ಪತ್ನಿ ಲಕ್ಷ್ಮಿ ಹಾಗೂ ರಮೇಶ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಇಬ್ಬರು ಒಟ್ಟಿಗಿರುವ ಫೋಟೋವನ್ನು ರಮೇಶ ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ. ಇದನ್ನು ಕಂಡು ಆಕ್ರೋಶಗೊಂಡ ಬಣಪ್ಪ ಹಾಗೂ ಲಕ್ಷ್ಮಿ, ಮನೆಯ ಹಿಂದಿನ ಗದ್ದೆಯಲ್ಲಿದ್ದ ರಮೇಶನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಕೃತ್ಯದ ಬಳಿಕ ದಂಪತಿ ನೇರವಾಗಿ ಠಾಣೆಗೆ ತೆರಳಿ ಶರಣಾಗಿದ್ದಾರೆ. ಈ ವೇಳೆ ಹತ್ಯೆ ಮಾಡಿದ್ದು ತಾನೇ ಎಂದು ಬಣಪ್ಪ ಹೇಳಿಕೊಂಡರೆ, ನಾನೇ ಹತ್ಯೆ ಮಾಡಿದ್ದು ಎಂದು ಲಕ್ಷ್ಮಿ ಪೊಲೀಸರ ಎದುರೇ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಘಟಪ್ರಭಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ದಂಪತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.



