ಬಾಡಿಗೆ ಕಾರೊಂದರ ಒಳಗೆ ಕುಳಿತಿದ್ದ ಯುವಕನೊಬ್ಬ ತಾನೇ ತಂದಿದ್ದ ಬಾಂಬ್ಅನ್ನು ಸ್ಫೋಟಿಸಿಕೊಂಡು ಸಜೀವ ದಹನವಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ನಿವಾಸಿ ನಾಗೇಂದ್ರ ಎಂದು ಗುರುತಿಸಲಾಗಿದೆ. ಆತ, ಬಾಡಿಗೆಗೆ ಕಾರೊಂದನ್ನು ತೆಗೆದುಕೊಂಡು ತನ್ನ ಪ್ರೇಯಸಿಯನ್ನು ಅಪಹರಿಸಿದ್ದಾನೆ. ಕಾರಿನಲ್ಲಿ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಆತನ ಕ್ರೌರ್ಯ ಕಂಡು ಭಯಭೀತನಾದ ಕಾರು ಚಾಲಕ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಓಡಿ ಹೋಗಿದ್ದಾರೆ. ಯುವತಿಯೂ ಕಾರಿನಿಂದ ಹೊರ ಜಿಗಿದ್ದಾರೆ. ಬಳಿಕ, ನಾಗೇಂದ್ರ ತಾನೇ ತಂದಿದ್ದ ಬಾಂಬ್ಅನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಭೀಕರ ಘಟನೆಯಲ್ಲಿ ನಾಗೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇರಿತಕ್ಕೊಳಗಾಗಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಗೇಂದ್ರ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬವರನ್ನು ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ನಾಗೇಂದ್ರ, ತನನ್ನು ಮದುವೆಯಾಗುವಂತೆ ರಮ್ಯಾಗೆ ಪೀಡಿಸಲಾರಂಭಿಸಿದ್ದ. ಆಕೆ, ತಕ್ಷಣಕ್ಕೆ ವಿವಾಹವಾಗಲು ನಿರಾಕರಿಸಿದ್ದರು. ಆದ್ದರಿಂದ, ಆಕೆಯನ್ನು ಅಪಹರಿಸಿ ಅಂಕೋಲಾದ ತಮ್ಮ ಗ್ರಾಮಕ್ಕೆ ಕರೆದೊಯ್ಯುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸ್ಫೋಟದ ತೀವ್ರತೆಗೆ ಇಡೀ ಕಾರು ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸುವಷ್ಟರಲ್ಲಿ ನಾಗೇಂದ್ರ ಕಾರಿನೊಳಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾನೆ ಮತ್ತು ಕಾರು ಸಂಪೂರ್ಣವಾಗಿ ಭಸ್ಮವಾಗಿದೆ.
ನಾಗೇಂದ್ರ ಮೊದಲೇ ಆತ್ಮಹತ್ಯೆ ಅಥವಾ ದಾಳಿಗಾಗಿ ಪೂರ್ಣ ಸಿದ್ಧತೆಯೊಂದಿಗೆ ಸ್ಫೋಟಕ ಮತ್ತು ಚಾಕುವನ್ನು ಹೊತ್ತು ತಂದಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಕೆ.ವಿ, “ಸ್ಫೋಟಕ್ಕೆ ಪೆಟ್ರೋಲ್ ಬಾಂಬ್ ಬಳಸಲಾಗಿದೆಯೇ ಅಥವಾ ನಾಡಬಾಂಬ್ ಬಳಸಲಾಗಿದೆಯೇ ಎಂಬುದು ಇನ್ನು ಪತ್ತೆಯಾಗಬೇಕಿದೆ. ಘಟನಾ ಸ್ಥಳದ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ” ಎಂದು ತಿಳಿಸಿದ್ದಾರೆ.



