ಪರಂಪರೆ ಎಂಬುದು ಪೂರ್ವಜರಿಂದ ಪಡೆದ ಉಡುಗೊರೆಯಲ್ಲ; ಮುಂದಿನ ಪೀಳಿಗೆಗೆ ಉಳಿಸಿ ನೀಡಲು ಪಡೆದಿರುವ ಸಾಲು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಮಹೇಶ್ ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಮಕೂರು ಸಂಶೋಧಕರ ತಂಡ, ಇತಿಹಾಸ ಸಂಕಲನ ಸಮಿತಿ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಸೆ. 18ರಂದು ಆಯೋಜಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಕೌಟುಂಬಿಕ ಪರಂಪರೆ, ಜಲ ಪರಂಪರೆ, ಕ್ರೀಡಾ ಪರಂಪರೆ ಹಾಗೂ ಜನಪದ ಪರಂಪರೆಗಳು ಸಮಾಜದ ಸಾಂಸ್ಕೃತಿಕ ಅಸ್ಮಿತೆಯ ಪ್ರಮುಖ ಭಾಗಗಳಾಗಿವೆ. ಇವುಗಳ ಮಹತ್ವವನ್ನು ಅರಿತು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸಮಾಜಶಾಸ್ತ್ರ ಉಪನ್ಯಾಸಕ ವಿಜಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಪರಂಪರೆಯಲ್ಲಿರುವ ಮಾನವೀಯ ಮೌಲ್ಯಗಳು ಹಾಗೂ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವೆಂಕಟೇಶ್ ಬಿ.ಜಿ. ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಾಗೂ ಯುನೆಸ್ಕೋ (UNESCO) ವಹಿಸಿರುವ ಪಾತ್ರದ ಕುರಿತು ವಿವರಿಸಿದರು. ಕರ್ನಾಟಕದ ವಿಶ್ವ ಪಾರಂಪರಿಕ ತಾಣಗಳು ನಮ್ಮ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದ್ದು, ಅವುಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಅಶೋಕನ ಮಸ್ಕಿ ಶಾಸನದ ಐತಿಹಾಸಿಕ ಮಹತ್ವ, ಸ್ಮಾರಕಗಳ ಸಂರಕ್ಷಣೆ ಹಾಗೂ ಜನಪದ ಸಂಸ್ಕೃತಿಯ ವೈವಿಧ್ಯತೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಇತಿಹಾಸ ವಿಭಾಗದ ಹರೀಶ್ ಕುಮಾರ್ ಎಚ್.ಎಸ್. ಆಯೋಜಿಸಿದ್ದರು. ಮಂಜುನಾಥ್ ಸಿ.ಡಿ., ಪತ್ರಾಂಕಿತ ವ್ಯವಸ್ಥಾಪಕ ನರೇಂದ್ರ ಬಾಬು ಎಸ್.ಆರ್., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಬಿ.ಎಸ್., ಐಕ್ಯೂಎಸಿ ಸಂಚಾಲಕ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಂದ್ರ ಪಿ., ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪಿ.ಬಿ. ಕುಮಾರ್, ರಾಜ್ಯಶಾಸ್ತ್ರ ಉಪನ್ಯಾಸಕಿ ಸುಧಾ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಉಪನ್ಯಾಸಕ ಯೋಗೀಶ್ ಎನ್. ನಿರೂಪಿಸಿದರು. ಪದ್ಮರಾಜು ವಂದಿಸಿದರು.




