ಪದವಿ ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗಿರದೆ, ಸ್ವಾವಲಂಬನೆ, ವೃತ್ತಿಪರತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬೇಕು. ವಿದ್ಯಾರ್ಥಿಗಳು ಪದವಿ ಶಿಕ್ಷಣದ ಹಂತದಲ್ಲೇ ದೃಢ ಆತ್ಮವಿಶ್ವಾಸ ಬೆಳೆಸಿಕೊಂಡು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಎಂ. ಗೋವಿಂದರಾಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಹೊಸದಿಗಂತ: ಪದವಿ ಶಿಕ್ಷಣಕ್ಕೆ ಆತ್ಮವಿಶ್ವಾಸದ ಆರಂಭ’ ಎಂಬ ಪುನಶ್ಚೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಲೇಜಿನ ಗ್ರಂಥಾಲಯ, ಇ-ಸಂಪನ್ಮೂಲಗಳು ಹಾಗೂ ಅಂತರ್ಜಾಲವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಉಪನ್ಯಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಪದವಿ ಶಿಕ್ಷಣದ ಮೊದಲ ದಿನದಿಂದಲೇ ತಮ್ಮ ಕನಸುಗಳಿಗೆ ಅಡಿಪಾಯ ಹಾಕಿಕೊಂಡು, ಸವಾಲುಗಳನ್ನು ಕಲಿಕೆಯ ಅವಕಾಶಗಳಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಮುನ್ನಡೆಯುವುದು ಯಶಸ್ಸಿನ ಕೀಲಿಕೈ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಲೀಲಾವತಿ ಮಾತನಾಡಿ, ಶಾಲಾ ಶಿಕ್ಷಣದಲ್ಲಿ ಮಾರ್ಗದರ್ಶನಕ್ಕೆ ಹೆಚ್ಚಿನ ಅವಕಾಶವಿದ್ದರೆ, ಪದವಿ ಹಂತದಲ್ಲಿ ಸ್ವಯಂ ಕಲಿಕೆ ಹಾಗೂ ಜವಾಬ್ದಾರಿ ಮುಖ್ಯವಾಗುತ್ತದೆ. ಉದ್ಯೋಗ, ಸಂಶೋಧನೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿ ಶಿಕ್ಷಣವೇ ಪ್ರಮುಖ ಆಧಾರವಾಗಿದೆ. ವಿವಿಧ ಸಾಮಾಜಿಕ ಹಾಗೂ ಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳೊಂದಿಗೆ ಬೆರೆಯುವುದರಿಂದ ಸಿದ್ಧಾಂತಗಳ ಪರಿಚಯದ ಜತೆಗೆ ಸ್ವತಂತ್ರ ಆಲೋಚನಾ ಶಕ್ತಿಯೂ ಬೆಳೆಯುತ್ತದೆ ಎಂದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ವಿಜಯಲಕ್ಷ್ಮಿ ಎನ್. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ಗುರುತಿಸಿಕೊಂಡು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ‘ನನ್ನಿಂದ ಸಾಧ್ಯ’ ಎಂಬ ಧನಾತ್ಮಕ ಚಿಂತನೆಯೊಂದಿಗೆ ತರಗತಿಗಳಿಗೆ ಹಾಜರಾಗಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರಂಜಿತ ಮಾತನಾಡಿ, ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳುವುದು ಅಗತ್ಯ. ತರಗತಿ ಚರ್ಚೆಗಳು ಹಾಗೂ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹಿಂಜರಿಕೆ ತೊರೆದು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಂಜುನಾಥ್ ಬಿ. ಮಾತನಾಡಿ, ಪಠ್ಯಕ್ರಮ, ನಿಯೋಜಿತ ಕಾರ್ಯಗಳು ಹಾಗೂ ಪರೀಕ್ಷೆಗಳಿಗೆ ಸೂಕ್ತ ಸಮಯ ನಿಗದಿಪಡಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳು ಮತ್ತು ವ್ಯಾಸಂಗದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಐಕ್ಯೂಎಸಿ ಸಂಚಾಲಕಿ ಪ್ರೊ. ವೇದಲಕ್ಷ್ಮಿ ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಎನ್‌ಎಸ್‌ಎಸ್, ಎನ್‌ಸಿಸಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಡಿಜಿಟಲ್ ಕೌಶಲ್ಯಗಳ ಜತೆಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ಹೆಚ್ಚುವರಿ ಕೋರ್ಸ್‌ಗಳನ್ನು ಕಲಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಮುರುಳಿಧರ್, ಡಾ. ಮಂಜುನಾಥ್ ಬುಡಸನಹಳ್ಳಿ, ರಾಮಮೂರ್ತಿ, ಎಸ್.ವಿ. ಮಂಜುನಾಥ್, ದರ್ಶನ್, ಮನೋಹರ್, ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ ಸೇರಿದಂತೆ ಕಾಲೇಜಿನ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




