ಈಶಾನ್ಯ ದೆಹಲಿ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ದ್ವೇಷ ಭಾಷಣದ ಆರೋಪ ಹೊತ್ತಿರುವ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್, ಕಪಿಲ್ ಮಿಶ್ರ ಹಾಗೂ ಪರ್ವೇಶ್ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
2020ರ ದೆಹಲಿ ಗಲಭೆ ಹಾಗೂ 2019ರ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಮನೋಜ್ ಜೈನ್ ಅವರ ಪೀಠ ಈ ತೀರ್ಪು ನೀಡಿದೆ. ಪ್ರಕರಣಗಳನ್ನು ಎರಡು ವಿಭಾಗಗಳಾಗಿ ಪರಿಗಣಿಸಲಾಗಿದೆ. ಒಂದು ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ್ದರೆ, ಮತ್ತೊಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ, ಹಿಂಸಾಚಾರದ ವಿವಿಧ ಆಯಾಮಗಳನ್ನು ಪರಿಶೀಲಿಸಲು ಎಸ್‌ಐಟಿ, ತನಿಖಾ ಆಯೋಗ ಅಥವಾ ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ಗಲಭೆಯಿಂದ ಸಂತ್ರಸ್ತರಾದವರಿಗೆ ವೈದ್ಯಕೀಯ ನೆರವು ಹಾಗೂ ಪರಿಹಾರ ನೀಡಬೇಕು ಮತ್ತು ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಇದೇ ವೇಳೆ, ಗಲಭೆಗೆ ಮುನ್ನ ಹಾಗೂ ಗಲಭೆಯ ಸಂದರ್ಭದಲ್ಲಿ ರಾಜಕೀಯ ನಾಯಕರು ನೀಡಿದರೆಂದು ಆರೋಪಿಸಲಾದ ‘ದ್ವೇಷ ಭಾಷಣ’ಗಳ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂಬ ಮನವಿಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಶೇಖ್ ಮುಜ್ತಬಾ ಅವರು ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಹಾಗೂ ಅಭಯ್ ವರ್ಮಾ ಅವರ ಭಾಷಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದರು. ‘ಲಾಯರ್ಸ್ ವಾಯ್ಸ್’ ಎಂಬ ಅರ್ಜಿದಾರರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮನೀಶ್ ಸಿಸೋಡಿಯಾ, ಅಮಾನತುಲ್ಲಾ ಖಾನ್, ಅಕ್ಬರುದ್ದೀನ್ ಓವೈಸಿ ಹಾಗೂ ವಾರಿಸ್ ಪಠಾಣ್ ಸೇರಿದಂತೆ ಹಲವು ನಾಯಕರ ವಿರುದ್ಧ ಆರೋಪಿಸಲಾದ ಭಾಷಣಗಳ ಕುರಿತು ಕ್ರಮಕ್ಕೆ ಮನವಿ ಮಾಡಿದ್ದರು.
ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು ಪೊಲೀಸ್, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಇತರ ಅಧಿಕಾರಿಗಳಿಂದ ನಡೆದಿದೆ ಎನ್ನಲಾದ ಅತಿರೇಕಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ್ದರು. ಮತ್ತೊಬ್ಬ ಅರ್ಜಿದಾರ ಅಜಯ್ ಗೌತಮ್ ಅವರು ಸಿಎಎ ವಿರೋಧಿ ಪ್ರತಿಭಟನೆಗಳಿಗೆ ನಡೆದಿತ್ತೆನ್ನಲಾದ ಹಣಕಾಸು ನೆರವಿನ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆ ನಡೆಸಬೇಕು ಹಾಗೂ ಪ್ರಚೋದನಕಾರಿ ಭಾಷಣಗಳ ಆರೋಪ ಎದುರಿಸುತ್ತಿರುವ ರಾಜಕೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಮನವಿ ಮಾಡಿದ್ದರು.
2020ರ ಫೆಬ್ರವರಿ 24ರಂದು ಸಿಎಎ ವಿರೋಧಿ ಪ್ರತಿಭಟನೆಗಳ ನಡುವೆಯೇ ಈಶಾನ್ಯ ದೆಹಲಿಯಲ್ಲಿ ಕೋಮು ಸಂಘರ್ಷ ಉಂಟಾಗಿತ್ತು. ಹಿಂಸಾಚಾರದಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದು, ಸುಮಾರು 700 ಮಂದಿ ಗಾಯಗೊಂಡಿದ್ದರು.
ಇನ್ನು, 2019ರ ಡಿಸೆಂಬರ್‌ನಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೂ ಸಂಬಂಧಿಸಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಹಾಗೂ ತನಿಖೆಯನ್ನು ದೆಹಲಿ ಪೊಲೀಸರಿಂದ ಬೇರೆ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಕೆಲವು ಅರ್ಜಿದಾರರು ಕೋರಿದ್ದರು. ಆ ಸಮಯದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ನಬೀಲಾ ಹಸನ್ ಅವರು ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನೂ ಸಂಪರ್ಕಿಸಿದ್ದರು.
ಆದರೆ, ಅರ್ಜಿಗಳಿಗೆ ವಿರೋಧ ವ್ಯಕ್ತಪಡಿಸಿದ್ದ ದೆಹಲಿ ಪೊಲೀಸರು, ವಿಶ್ವವಿದ್ಯಾಲಯದ ಒಳಗೆ ಹಾಗೂ ಹೊರಗೆ ಮತ್ತು ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸಂಗ್ರಹಿಸಿ ಸಂರಕ್ಷಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ತನಿಖೆಯನ್ನು ಬೇರೆ ಸಂಸ್ಥೆಗೆ ವರ್ಗಾಯಿಸುವುದರಿಂದ ವಿಚಾರಣೆಯ ವ್ಯಾಪ್ತಿ ಅನಗತ್ಯವಾಗಿ ವಿಸ್ತರಿಸಲಿದೆ ಎಂದೂ ಪೊಲೀಸರು ವಾದಿಸಿದ್ದರು.
ಈ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ದೆಹಲಿ ಹೈಕೋರ್ಟ್ ಜುಲೈ 24ರಂದು ತೀರ್ಪು ಕಾಯ್ದಿರಿಸಿತ್ತು. ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಒಂದು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಶೀಘ್ರ ತೀರ್ಪು ನೀಡುವಂತೆ ಸೂಚಿಸಿತ್ತು.
ಬಿಜೆಪಿ ನಾಯಕ ಅನುರಾಗ್ ಠಾಕೂರ್ 2020ರ ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ, ಸಿಎಎ (CAA) ವಿರೋಧಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ “ದೇಶ ದ್ರೋಹಿಗಳಿಗೆ, ಗುಂಡು ಹೊಡೆಯಿರಿ…” (“Desh ke ghaddaron ko, goli maaron”) ಎಂಬ ಘೋಷಣೆ ಕೂಗಿ ಪ್ರಚೋದಿಸಿದರು ಎಂದು ಆರೋಪಿಸಲಾಗಿತ್ತು. ಆದರೆ, ಅದು ತಾವಲ್ಲ ಸಭೆಯಲ್ಲಿದ್ದ ಜನಸ್ತೋಮವೇ ಆ ಘೋಷಣೆ ಕೂಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದರು.
ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿದ್ದ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಉಲ್ಲೇಖಿಸಿ ಮಾತನಾಡಿದ್ದ ಪರ್ವೇಶ್ ವರ್ಮಾ, “ಶಾಹೀನ್ ಬಾಗ್‌ಗೆ ಲಕ್ಷಾಂತರ ಮಂದಿ ನುಗ್ಗಿದ್ದಾರೆ. ಇವರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಾರೆ ಮತ್ತು ಅವರನ್ನು ಕೊಲ್ಲುತ್ತಾರೆ…” ಎಂಬರ್ಥದಲ್ಲಿ ವಿವಾದಾತ್ಮಕ ಮತ್ತು ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಆರೋಪಿ ಅಥರ್ ಖಾನ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ದೆಹಲಿ ಗಲಭೆಗೂ ಮುನ್ನ ಮೌಜ್‌ಪುರ ಪ್ರದೇಶದಲ್ಲಿ ಪೊಲೀಸರ ಸಮ್ಮುಖದಲ್ಲೇ ದ್ವೇಷದ ಎಚ್ಚರಿಕೆ ನೀಡಿದ್ದ ಕಪಿಲ್ ಮಿಶ್ರಾ, ಅಮೆರಿಕನ್ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಭಾರತದಲ್ಲಿರುವವರೆಗೆ ಮಾತ್ರ ನಾವು ಶಾಂತವಾಗಿರುತ್ತೇವೆ, ಅದಾದ ಬಳಿಕ ರಸ್ತೆ ತಡೆದು ಪ್ರತಿಭಟನೆ ನಡೆಸುವವರನ್ನು ಪೊಲೀಸ್ ಆಜ್ಞೆಯ ಮೇರೆಗೆ ಚದುರಿಸುತ್ತೇವೆ, ಇಲ್ಲದಿದ್ದರೆ ನಾವೇ ಬೀದಿಗಿಳಿದು ತೆರವುಗೊಳಿಸುತ್ತೇವೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. (2020ರ ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದರು)
ಪ್ರಭಾವಿ ರಾಜಕೀಯ ನಾಯಕರ ವಿರುದ್ಧ ತನಿಖೆ ನಡೆಸುವುದು, ಸಾಕ್ಷ್ಯ ಸಂಗ್ರಹಿಸುವುದು ಮತ್ತು ಪ್ರಾಸಿಕ್ಯೂಷನ್ ಅನುಮತಿ ಪಡೆಯುವುದು ವ್ಯವಸ್ಥೆಯಲ್ಲಿ ಬಹಳಷ್ಟು ಜಟಿಲ ಹಾಗೂ ವಿಳಂಬದಿಂದ ಕೂಡಿರುತ್ತದೆ. ಅದೇ ರೀತಿ ನ್ಯಾಯಾಲಯಗಳು ತಮಗೆ ಲಭ್ಯವಿರುವ ಸಾಕ್ಷ್ಯಗಳು ಮತ್ತು ಕಾನೂನಿನ ಚೌಕಟ್ಟಿನ ಒಳಗೆ ಮಾತ್ರ ತೀರ್ಪು ನೀಡಬೇಕಾಗುತ್ತದೆ. ಪ್ರಚೋದನಕಾರಿ ಭಾಷಣಗಳು ಸಮಾಜದಲ್ಲಿ ಹಿಂಸಾಚಾರಕ್ಕೆ ಕಾರಣವಾದರೂ, ಕಾನೂನಿನ ಕಠಿಣ ತಾಂತ್ರಿಕತೆಗಳು ಮತ್ತು ಸಾಕ್ಷ್ಯಗಳ ಕೊರತೆಯಿಂದಾಗಿ ಪ್ರಭಾವಿಗಳು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಬಲವಾಗಿ ಉಳಿದುಕೊಂಡಿದೆ. ಇದು ರಾಜಕೀಯ ರಕ್ಷಣೆ ಮತ್ತು ಸಾಂಸ್ಥಿಕ ಮಿತಿಗಳ ನಡುವೆ ಸಾಮಾನ್ಯ ಜನರಿಗೆ ಸಿಗುವ ನ್ಯಾಯದ ಅಂತರವನ್ನು ಎತ್ತಿ ತೋರಿಸುತ್ತದೆ.




