ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಕಲಿ ಮರಣ ಪ್ರಮಾಣಪತ್ರಗಳನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಲೆಟರ್ಹೆಡ್ನಲ್ಲಿ ಕೆಲ ಮತದಾರರು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಅವುಗಳ ಆಧಾರದ ಮೇಲೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಿದರು.
ಎಂಟು ಮತದಾರರು ಮೃತಪಟ್ಟಿದ್ದಾರೆ ಎಂದು ಪಟ್ಟಿ ಸಲ್ಲಿಸಲಾಗಿದ್ದು, ಅವರ ಪೈಕಿ ಏಳು ಮಂದಿಗೆ ಸಂಬಂಧಿಸಿದ ಮರಣ ಪ್ರಮಾಣಪತ್ರಗಳ ಪ್ರತಿಗಳನ್ನೂ ನೀಡಲಾಗಿದೆ. ಆದರೆ, ಕಾಂಗ್ರೆಸ್ನ ಬೂತ್ ಮಟ್ಟದ ಏಜೆಂಟರು (ಬಿಎಲ್ಎ) ನಡೆಸಿದ ಪರಿಶೀಲನೆಯಲ್ಲಿ ಆ ಏಳು ಮತದಾರರು ಜೀವಂತವಾಗಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದರು.
ಮರಣ ಪ್ರಮಾಣಪತ್ರಗಳು ನೈಜವಾಗಿವೆಯೇ, ಅವುಗಳನ್ನು ಯಾವ ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ ಹಾಗೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಚುನಾವಣಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.
ನಗರ ಕ್ಷೇತ್ರದ 198 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸುಮಾರು 1,046 ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಕಾಂಗ್ರೆಸ್ ಮುಖಂಡರು ಮಾಡಿದರು.
ಈ ಸಂಬಂಧದ ದಾಖಲೆಗಳನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆಗಾಗಿ ಕಳುಹಿಸಿದ್ದು, ಸ್ಥಳೀಯ ಮಟ್ಟದಲ್ಲಿ ನಡೆದ ಪರಿಶೀಲನೆಯಲ್ಲಿ ಹಲವು ಮತದಾರರು ಜೀವಂತವಾಗಿರುವುದು ಪತ್ತೆಯಾಗಿದೆ ಎಂದು ಮುಶ್ರೀಫ್ ಹೇಳಿದರು.
ತಪ್ಪು ಘೋಷಣೆ ಅಥವಾ ಸುಳ್ಳು ದಾಖಲೆಗಳ ಬಳಕೆ ಶಿಕ್ಷಾರ್ಹವಾಗಿದೆ. ಆದ್ದರಿಂದ ಸಲ್ಲಿಸಲಾಗಿರುವ ಮರಣ ಪ್ರಮಾಣಪತ್ರಗಳು ಹಾಗೂ ಇತರ ದಾಖಲೆಗಳ ಸತ್ಯಾಸತ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ತಪ್ಪು ದಾಖಲೆಗಳು ಅಥವಾ ಸುಳ್ಳು ಮಾಹಿತಿ ಬಳಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಚುನಾವಣಾ ಕಾನೂನು ಸೇರಿದಂತೆ ಅನ್ವಯವಾಗುವ ಕಾನೂನುಗಳ ಅಡಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಇರ್ಫಾನ್ ಶೇಖ್, ಅಬ್ದುಲ್ ರಜಾಕ್ ಹೊರ್ತಿ, ವೈಜನಾಥ ಕರ್ಪೂರಮಠ, ಶಬ್ಬಿರ್ ಅಹ್ಮದ್ ಜಹಾಗೀರದಾರ್, ಅಜಾದ್ ಪಟೇಲ್, ಚಾಂದಸಾಬ್ ಗಡಗಲಾವ, ಅಫ್ತಾಬ್ ಖಾದ್ರಿ, ಅಬುಬಕರ್ ಅಂಬಾರಖಾನೆ ಹಾಗೂ ಫಯಾಜ್ ಕಲಾದಗಿ ಉಪಸ್ಥಿತರಿದ್ದರು.




