ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತ ತುಕಾರಾಂ ಮುಂಢೆ ಅವರ ಕಾರ್ಯವೈಖರಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ. ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ (NYT) ಪತ್ರಿಕೆಯು ಅವರನ್ನು ‘ರಾಕ್ ಸ್ಟಾರ್’ ಎಂದು ಬಣ್ಣಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮುಂಢೆ, ‘ಉತ್ತಮ ಆಡಳಿತವೆಂದರೆ ಕೇವಲ ಸುದ್ದಿಯಾಗುವುದಲ್ಲ, ಬದಲಾಗಿ ಜನರ ಬದುಕಿನಲ್ಲಿ ಬದಲಾವಣೆ ತರುವುದು’ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲೇನಿದೆ?
‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ತನ್ನ ಮುಖಪುಟದಲ್ಲಿ ಮುಂಢೆ ಅವರನ್ನು ‘ರಾಕ್ ಸ್ಟಾರ್’ ಎಂದು ಕರೆದಿರುವುದಷ್ಟೇ ಅಲ್ಲದೆ, ತನ್ನ ಡಿಜಿಟಲ್ ಆವೃತ್ತಿಯಲ್ಲಿ ಅವರನ್ನು ‘ಆಹಾರ ಸುರಕ್ಷತಾ ಸೆಲೆಬ್ರಿಟಿ’ (Food Safety Celebrity) ಎಂದೂ ಬಣ್ಣಿಸಿದೆ. ಗ್ರಾಹಕರು ಅವರನ್ನು ಹೇಗೆ ಆರಾಧಿಸುತ್ತಿದ್ದಾರೆ ಮತ್ತು ಹೋಟೆಲ್ ಮಾಲೀಕರು ಅವರ ದಿಢೀರ್ ದಾಳಿಗಳಿಗೆ ಹೇಗೆ ಬೆಚ್ಚಿಬಿದ್ದಿದ್ದಾರೆ ಎಂಬುದನ್ನು ಈ ವರದಿ ಎತ್ತಿತೋರಿಸಿದೆ. ತಮ್ಮ ಕಟ್ಟುನಿಟ್ಟಿನ ಆಡಳಿತ ಶೈಲಿಯಿಂದಾಗಿ ‘ಐಎಎಸ್ ಸಿಂಗಂ’ ಎಂದೇ ಖ್ಯಾತರಾಗಿರುವ ಮುಂಢೆ, ತೆರೆಯಮರೆಯಲ್ಲಿ ಕೆಲಸ ಮಾಡುವ ಒಬ್ಬ ಸಾಮಾನ್ಯ ಸರ್ಕಾರಿ ಅಧಿಕಾರಿಯಾಗಿ ಹೇಗೆ ಸಾರ್ವಜನಿಕರ ಮೆಚ್ಚಿನ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಮತ್ತು ಭಾರತದಲ್ಲಿ ಆಹಾರ ನೈರ್ಮಲ್ಯದ ಕುರಿತು ಹೇಗೆ ಬೃಹತ್ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ ಎಂಬುದನ್ನು ವರದಿ ವಿವರಿಸಿದೆ.
ಮುಂಢೆ ಅವರ ಈ ಜಾಗತಿಕ ಖ್ಯಾತಿಗೆ ಅವರು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ವಿರುದ್ಧ ಕೈಗೊಂಡ ರಾಜಿರಹಿತ ಕಠಿಣ ಕ್ರಮಗಳೇ ಕಾರಣವಾಗಿವೆ. ಈ ದಿಢೀರ್ ತಪಾಸಣೆಗಳಿಂದ ಬಹುರಾಷ್ಟ್ರೀಯ ಬೃಹತ್ ಫಾಸ್ಟ್ ಫುಡ್ ಸರಪಳಿಗಳೂ ಪಾರಾಗಿಲ್ಲ; ಅಡುಗೆಮನೆಯಲ್ಲಿ ಜಿರಳೆಗಳು ಮತ್ತು ಅವಧಿ ಮುಗಿದ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಡೊಮಿನೋಸ್ ಹಾಗೂ ಪಿಜ್ಜಾ ಹಟ್‌ನಂತಹ ಪ್ರಸಿದ್ಧ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿತ್ತು. ಕೇವಲ ಹೋಟೆಲ್‌ಗಳು ಮಾತ್ರವಲ್ಲದೆ, ಬ್ಲಿಂಕಿಟ್ ಮತ್ತು ಝೆಪ್ಟೋದಂತಹ ಕ್ವಿಕ್-ಕಾಮರ್ಸ್ (ತ್ವರಿತ ವಿತರಣೆ) ಕಂಪನಿಗಳ ‘ಡಾರ್ಕ್ ಸ್ಟೋರ್’ಗಳ ಮೇಲೂ ದಾಳಿ ನಡೆಸಿರುವ ಅವರ ಕಾರ್ಯವೈಖರಿಯನ್ನು ಉಲ್ಲೇಖಿಸಿರುವ ‘ನ್ಯೂಯಾರ್ಕ್ ಟೈಮ್ಸ್’, ಈ ಕ್ರಮಗಳು ಮಹಾರಾಷ್ಟ್ರದ ಆಹಾರ ಉದ್ಯಮದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಹೊಸ ಜಾಗೃತಿ ಹಾಗೂ ಹೊಣೆಗಾರಿಕೆಯನ್ನು ಮೂಡಿಸಿವೆ ಎಂದು ಶ್ಲಾಘಿಸಿದೆ.
ತುಕಾರಾಂ ಮುಂಢೆ ಪ್ರತಿಕ್ರಿಯೆ:
ಈ ವರದಿಗಳ ತುಣುಕುಗಳನ್ನು ‘ಎಕ್ಸ್’ (X) ಖಾತೆಯಲ್ಲಿ ಹಂಚಿಕೊಂಡಿರುವ ಮುಂಢೆ, “ಆಹಾರ ಸುರಕ್ಷತೆ ಎಂಬುದು ಅಂತಿಮವಾಗಿ ಜನರನ್ನು ರಕ್ಷಿಸುವುದು, ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಸಾರ್ವಜನಿಕರಲ್ಲಿ ನಂಬಿಕೆಯನ್ನು ಬೆಳೆಸುವ ಪ್ರಕ್ರಿಯೆಯಾಗಿದೆ. ಕಾನೂನು ಜಾರಿಯು ನ್ಯಾಯಸಮ್ಮತ, ನಿರ್ಭೀತ ಮತ್ತು ಸ್ಥಿರವಾದಾಗ, ಸರ್ಕಾರಿ ಸಂಸ್ಥೆಗಳು ವಿಶ್ವಾಸಾರ್ಹತೆ ಗಳಿಸುತ್ತವೆ. ಆಗ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾಗರಿಕರು ನಂಬಲು ಪ್ರಾರಂಭಿಸುತ್ತಾರೆ” ಎಂದು ಬರೆದುಕೊಂಡಿದ್ದಾರೆ. ‘ಮಹಾರಾಷ್ಟ್ರದ ಇಂತಹದ್ದೇ ಒಂದು ಕಥೆಯನ್ನು ನ್ಯೂಯಾರ್ಕ್ ಟೈಮ್ಸ್ ಸೆರೆಹಿಡಿದಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಿಬಿಸಿ ವರದಿಗೂ ಪ್ರತಿಕ್ರಿಯೆ:
ಮುಂಢೆ ಅವರು ಜಾಗತಿಕ ಮಾಧ್ಯಮಗಳ ಗಮನ ಸೆಳೆಯುತ್ತಿರುವುದು ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ, ಸೆಪ್ಟೆಂಬರ್ 27ರಂದು ಬ್ರಿಟನ್‌ನ ‘ಬಿಬಿಸಿ’ (BBC) ಕೂಡ ಇವರ ಕಾರ್ಯವೈಖರಿಯ ಬಗ್ಗೆ ವರದಿ ಮಾಡಿತ್ತು. “ಭಾರತದ ಕೆಲ ನಾಗರಿಕ ಸೇವಾ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವ ಮೂಲಕ ಹೇಗೆ ನಾಯಕರಾಗುತ್ತಾರೆ” ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳ ಬಗ್ಗೆ ಬೆಳಕು ಚೆಲ್ಲಿತ್ತು.
ಬಿಬಿಸಿ ಲೇಖನವನ್ನೂ ಹಂಚಿಕೊಂಡಿದ್ದ ಮುಂಢೆ, “ಜನರು ಸಾಮಾನ್ಯವಾಗಿ ಬದಲಾವಣೆ ತರುವ ವ್ಯಕ್ತಿಗಳನ್ನು ಸಂಭ್ರಮಿಸುತ್ತಾರೆ. ಆದರೆ, ಪ್ರತಿದಿನವೂ ಬದಲಾವಣೆ ತರಬಲ್ಲ ಸಂಸ್ಥೆಗಳನ್ನು ಕಟ್ಟುವುದು ನಮ್ಮ ನೈಜ ಗುರಿಯಾಗಬೇಕು. ಸಾರ್ವಜನಿಕ ಜೀವನದಲ್ಲಿ ನಾಯಕತ್ವ ಎಂದರೆ ಕೇವಲ ಅಧಿಕಾರ, ಪ್ರಾಮುಖ್ಯತೆ ಅಥವಾ ವೈಯಕ್ತಿಕ ಮನ್ನಣೆ ಪಡೆಯುವುದಲ್ಲ. ಅದು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರಬೇಕು,” ಎಂದು ಹೇಳಿದ್ದರು. “ಸರಿಯಾದದ್ದನ್ನು ಮಾಡುವ ಸಮಗ್ರತೆ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ, ಯಾವುದೇ ಮುಲಾಜಿಲ್ಲದೆ ಕಾನೂನನ್ನು ಅನ್ವಯಿಸುವ ನ್ಯಾಯಸಮ್ಮತತೆ ಮತ್ತು ಇತರರ ಮಾತನ್ನು ಆಲಿಸುವ ನಮ್ರತೆಯೇ ನೈಜ ನಾಯಕತ್ವ” ಎಂದು ಅವರು ವಿವರಿಸಿದ್ದಾರೆ.
ಯಾರು ಈ ತುಕಾರಾಂ ಮುಂಢೆ?
ಐಎಎಸ್ ಅಧಿಕಾರಿ ತುಕಾರಾಂ ಮುಂಢೆ ಅವರು ಕಳೆದ ಮೇ 25 ರಂದು ಮಹಾರಾಷ್ಟ್ರದ ಎಫ್‌ಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ, ಮಹಾರಾಷ್ಟ್ರದಾದ್ಯಂತ ಸಗಟು ವ್ಯಾಪಾರಿಗಳು, ತಯಾರಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಹೋಟೆಲ್‌ಗಳ ಮೇಲೆ ದಿಢೀರ್ ದಾಳಿಗಳನ್ನು ನಡೆಸಿದ್ದಾರೆ. ಗಂಭೀರ ಉಲ್ಲಂಘನೆಗಳು ಕಂಡುಬಂದಾಗ ಲೈಸೆನ್ಸ್ ಅಮಾನತುಗೊಳಿಸುವ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅವರು ಸುದ್ದಿಯಲ್ಲಿದ್ದಾರೆ. ಅವರ ದಕ್ಷತೆ ಮತ್ತು ಕಟ್ಟುನಿಟ್ಟಿನ ಆಡಳಿತಕ್ಕೆ ಸಾಕ್ಷಿ ಎಂಬಂತೆ, ಅವರ ಸುಮಾರು 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಬರೋಬ್ಬರಿ 25 ಬಾರಿ ವರ್ಗಾವಣೆಯಾಗಿದ್ದಾರೆ.
ಮುಂಬೈ ಹೋಟೆಲ್‌ಗಳಿಗೆ ನಡುಕ ಹುಟ್ಟಿಸಿರುವ 1,131 ದಿಢೀರ್ ದಾಳಿಗಳು:
‘ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಎಳ್ಳಷ್ಟೂ ವಿನಾಯಿತಿ ನೀಡುವುದಿಲ್ಲ’ ಎಂದು ತುಕಾರಾಂ ಮುಂಢೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮೇ 25ರಂದು ಅಧಿಕಾರ ವಹಿಸಿಕೊಂಡ ಕೇವಲ ಎರಡು ತಿಂಗಳಲ್ಲಿ, ಅವರ ನೇತೃತ್ವದ ಎಫ್‌ಡಿಎ ತಂಡವು ಮಹಾರಾಷ್ಟ್ರದಾದ್ಯಂತ ಬರೋಬ್ಬರಿ 1,131 ತಪಾಸಣೆಗಳನ್ನು (ದಿನಕ್ಕೆ ಸರಾಸರಿ 20 ದಾಳಿಗಳು) ನಡೆಸಿದೆ. ಈ ಕಾರ್ಯಾಚರಣೆಗಳಲ್ಲಿ 1.6 ಲಕ್ಷ ಲೀಟರ್ ಕಲಬೆರಕೆ ಹಾಲು ಸೇರಿದಂತೆ ಒಟ್ಟು ₹49.57 ಕೋಟಿ ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಗುಟ್ಕಾ ಜಾಲಗಳ ವಿರುದ್ಧ ‘ಮಕೋಕಾ’ (MCOCA – ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ದಂತಹ ಕಠಿಣ ಅಸ್ತ್ರವನ್ನೂ ಅವರು ಪ್ರಯೋಗಿಸಿದ್ದಾರೆ. ಪ್ರತಿದಿನ ಸಂಜೆ 4 ರಿಂದ 5 ಗಂಟೆಯವರೆಗೆ ಬಿ.ಕೆ.ಸಿ.ಯಲ್ಲಿರುವ (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್) ತಮ್ಮ ಕಚೇರಿಯಲ್ಲಿ ಸಾರ್ವಜನಿಕರು ಮತ್ತು ಉದ್ದಿಮೆದಾರರ ಅಹವಾಲುಗಳನ್ನು ಆಲಿಸುವ ಮುಂಢೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಮಾತ್ರ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಿದ್ದಾರೆ.
ಪ್ರತಿಷ್ಠಿತ ಹೋಟೆಲ್‌ಗಳಿಗೂ ತಪ್ಪದ ಬಿಸಿ, ವಾಟ್ಸಾಪ್ ಮೂಲಕ ಪಾರದರ್ಶಕತೆ:
ದಿಢೀರ್ ದಾಳಿಗಳ ಬಿಸಿ ಕೇವಲ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ತಟ್ಟಿಲ್ಲ; ಮುಂಬೈನ ದಶಕಗಳ ಇತಿಹಾಸವಿರುವ ಪ್ರತಿಷ್ಠಿತ ಹೋಟೆಲ್‌ಗಳೂ ಈ ಪಟ್ಟಿಯಲ್ಲಿವೆ. 100 ವರ್ಷಗಳ ಇತಿಹಾಸವಿರುವ ‘ನೂರ್ ಮೊಹಮ್ಮದಿ’, 73 ವರ್ಷ ಹಳೆಯ ‘ಕೆ. ರುಸ್ತಮ್ ಅಂಡ್ ಕೋ.’, ‘ಶಾಲಿಮಾರ್’, ‘ಪಾರ್ಸಿ ಡೈರಿ ಫಾರ್ಮ್’ ಸೇರಿದಂತೆ ಒಟ್ಟು 56 ಹೋಟೆಲ್‌ಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಮತ್ತೊಂದೆಡೆ ಸಣ್ಣ ವ್ಯಾಪಾರಿಗಳ ಮೇಲೆ ಕಠಿಣ ಕ್ರಿಮಿನಲ್ ಕಾಯ್ದೆಗಳನ್ನು ಪ್ರಯೋಗಿಸುತ್ತಿರುವುದನ್ನು ಖಂಡಿಸಿ ಪಾನ್ ಅಂಗಡಿ ಮಾಲೀಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಮುಂಢೆ ಅವರು ವಾಟ್ಸಾಪ್ ಮಾಧ್ಯಮ ಗುಂಪಿನ ಮೂಲಕ ಎಫ್‌ಡಿಎ ನಡೆಸುತ್ತಿರುವ ದಾಳಿಗಳ ಫೋಟೋ, ವಿಡಿಯೋ ಮತ್ತು ಪತ್ರಿಕಾ ಪ್ರಕಟಣೆಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದು, ಒಂದು ಕಾಲದಲ್ಲಿ ಮೂಲೆಗುಂಪಾಗಿದ್ದ ಎಫ್‌ಡಿಎ ಇಲಾಖೆಯನ್ನೀಗ ಇಡೀ ರಾಜ್ಯವೇ ಬೆರಗಿನಿಂದ ನೋಡುವಂತೆ ಮಾಡಿದ್ದಾರೆ.




