ಮೃತ ಪೊಲೀಸ್ ಪೇದೆಯ ಕುಟುಂಬಕ್ಕೆ ಬರಬೇಕಿದ್ದ ಕರ್ನಾಟಕ ಸರ್ಕಾರಿ ನೌಕರರ ವಿಮಾ (KGID) ಹಣವನ್ನು ಬಿಡುಗಡೆ ಮಾಡಲು ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಜಿಲ್ಲಾ ವಿಮಾ ಕಚೇರಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಜಿಲ್ಲಾ ವಿಮಾ ಅಧಿಕಾರಿ (DIO) ಹೇಮಕುಮಾರ್ ಎಸ್.ಸಿ. ಅವರು ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ ನಿಯಮಾನುಸಾರ KGID ವಿಮಾ ಮೊತ್ತ ಪಾವತಿಯಾಗಬೇಕಿತ್ತು. ಈ ವಿಮಾ ಮೊತ್ತ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಾಗಿ ಅಧಿಕಾರಿಯನ್ನು ಸಂಪರ್ಕಿಸಿದ್ದ ವೇಳೆ, ಹಣ ಬಿಡುಗಡೆ ಮಾಡಲು ₹25 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಮಡಿಕೇರಿಯ ರೋಹಿಣಿ ಬಿ.ಎಸ್. ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಬಳಿಕ ಲೋಕಾಯುಕ್ತ ಪೊಲೀಸರು ದೂರುದಾರರೊಂದಿಗೆ ಸಮನ್ವಯ ಮಾಡಿಕೊಂಡು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು. ದೂರುದಾರರು ₹25 ಸಾವಿರವನ್ನು ಅಧಿಕಾರಿಗೆ ನೀಡುತ್ತಿದ್ದ ಸಂದರ್ಭದಲ್ಲಿ, ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ನೇತೃತ್ವದ ತಂಡ ಜಿಲ್ಲಾ ವಿಮಾ ಕಚೇರಿಯಲ್ಲಿ ದಾಳಿ ನಡೆಸಿದೆ. ಈ ವೇಳೆ ಲಂಚದ ಹಣ ಸ್ವೀಕರಿಸುತ್ತಿದ್ದ ಹೇಮಕುಮಾರ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | ‘SIR’ ಫಾರಂ-7 ದುರ್ಬಳಕೆ: ಬಿಜೆಪಿ ಪದಾಧಿಕಾರಿ ಸೇರಿ ಮೂವರ ವಿರುದ್ಧ FIR!
ದಾಳಿಯ ವೇಳೆ ಲಂಚದ ಹಣವನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಕಡತಗಳನ್ನೂ ಪರಿಶೀಲಿಸಿದ್ದಾರೆ. ಈ ಸಂಬಂಧ ಮಡಿಕೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 08/2026 ದಾಖಲಿಸಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ, 1988 (2018ರ ತಿದ್ದುಪಡಿ) ಸೆಕ್ಷನ್ 7(b) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ವಿಶೇಷ ವರದಿ ಓದಿದ್ದೀರಾ? ರೈತನ ಭೂಹಕ್ಕಿಗೆ ‘ಪೋಡಿ’ ಅಡ್ಡಿ: ಆನ್‌ಲೈನ್ ಸೇವೆಯಿದ್ದರೂ ಮುಗಿಯದ ಅಲೆದಾಟ!
ಮೃತ ಸರ್ಕಾರಿ ನೌಕರನ ಕುಟುಂಬಕ್ಕೆ ಸೇರಬೇಕಿದ್ದ ವಿಮಾ ಮೊತ್ತದ ಪಾವತಿ ಪ್ರಕ್ರಿಯೆಯಲ್ಲಿ ಲಂಚದ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣ ಮಹತ್ವ ಪಡೆದಿದೆ. ಆರೋಪದ ಕುರಿತು ಮುಂದಿನ ತನಿಖೆ ಹಾಗೂ ಕಾನೂನು ಪ್ರಕ್ರಿಯೆಯಲ್ಲಿ ಹೆಚ್ಚಿನ ವಿವರಗಳು ಹೊರಬರಬೇಕಿದೆ.




