ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಸೋಮವಾರದಂದು ಉಡುಪಿ ಜಿಲ್ಲೆಯಾದ್ಯಂತ ಶಾಲೆ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಪ್ರಮುಖ ನದಿಗಳೆಲ್ಲ ಮೈದುಂಬಿ ಹರಿಯುತ್ತಿವೆ. ಕಡಲಿನಲ್ಲಿ ಅಲೆಗಳ ಅಬ್ಬರವೂ ಜೋರಾಗಿದೆ.
ಕೋಡಿ, ಮರವಂತೆಯಲ್ಲಿ ಕಡಲ್ಕೂರೆತ ಮುಂದುವರಿದಿದೆ. ಮಲ್ಪೆ, ಪಡುಕರೆ, ಪಡುಬಿದ್ರಿ, ಕಾಪು, ಕೋಡಿ ಸೀ ವಾಕ್‌ನಲ್ಲಿ ಅಲೆಗಳು ಹೆಚ್ಚಾಗಿದ್ದು, ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಹಲವೆಡೆ ಕೃಷಿ ಭೂಮಿ ಸಹಿತ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಗಾಳಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಒಟ್ಟು 41 ಮನೆಗಳಿಗೆ ಹಾನಿಯಾಗಿದೆ. 230ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 24 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಬೃಹತ್ ಮರಗಳು ಬುಡ ಸಹಿತ ಧರೆಗುರುಳಿವೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಶಂಕರನಾರಾಯಣ, ಈ ಕಾಪು ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮೆಸ್ಕಾಂ ಇಲಾಖೆಗೆ ಹಾನಿಯಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.
ಕೆರೆಯಂತಾದ ಪರ್ಕಳ ರಾಷ್ಟ್ರೀಯ ಹೆದ್ದಾರಿ
“ಪರ್ಕಳದಲ್ಲಿ ಹಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಜಾಗದಲ್ಲಿ ನೀರು ನಿಂತು ಕೃತಕ ಕೆರೆಯಂತಾಗಿದೆ. ಹೊಸ ರಸ್ತೆಯಲ್ಲಿಯೇ ಈ ರೀತಿ ನೀರು ತುಂಬಿರುವುದರಿಂದ ರಸ್ತೆಯ ವಿನ್ಯಾಸ ಅವೈಜ್ಞಾನಿಕವಾಗಿರುವುದು ಕಂಡುಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ಪರ್ಕಳದಲ್ಲಿ ಆಟಿಡೊಂಜಿ ದಿನ, ಕೆಸರುಡೊಂಜೀ ದಿನ ಮಾಡಲು ಸೂಕ್ತ ಪ್ರದೇಶವಾಗಿ ರೂಪುಗೊಂಡಿದೆ. ನೀರು ಹರಿದು ಹೋಗಲು ಯಾವುದೇ ಡ್ರೈನೇಜ್ ವ್ಯವಸ್ಥೆ ಇಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ನೀರು ತುಂಬಿರುವುದರಿಂದ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.