ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಕರಂಬಳ್ಳಿ ವೆಂಕಟರಮಣ ಲೇಔಟ್ ನ ಹಲವು ಮನೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ.
ಭಾರೀ ಮಳೆಯಿಂದ ಇಲ್ಲಿಗೆ ಸಮೀಪದಲ್ಲಿರುವ ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ ಹತ್ತಾರು ಮನೆಗಳು ಜಲಾವೃತಗೊಂಡಿದೆ. ಮನೆ ಎದುರಿನ ಅಂಗಳದಲ್ಲಿ ನಿಲ್ಲಿಸಲಾದ ಬೈಕ್, ಕಾರುಗಳು ಕೂಡ ನೀರು ಪಾಲಾಗುತ್ತಿದೆ. ಈ ಮನೆಗಳ ಮಕ್ಕಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕೂಡ ಜಲಾವೃತಗೊಂಡಿರುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
ಉಡುಪಿ ನಗರಸಭೆ ಅಧಿಕಾರಿಗಳು ತಕ್ಷಣ ಆಗಮಿಸಿ ಪರಿಹಾರ ಕಾರ್ಯ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕರಾವಳಿಯಲ್ಲಿ ಶಾಲೆಗಳಿಗೆ ರಜೆ
ಕರಾವಳಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಈಗಾಗಲೇ ಉತ್ತರ ಕನ್ನಡ ಹಾಗೂ ಮಂಗಳೂರು ತಾಲೂಕಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಉಡುಪಿ ಜಿಲ್ಲೆಯಲ್ಲಿ ಕೂಡ ಸೋಮವಾರ ಮುಂಜಾನೆಯಿಂದ ಭಾರೀ ಗಾಳಿ ಮಳೆ ಸುರಿಯುತ್ತಿದ್ದು, ಕೆಲವೊಂದು ಶಾಲೆಯ ಆಡಳಿತ ಮಂಡಳಿ ರಜೆ ಘೋಷಿಸಿದೆ.
ಪೋಷಕರ ಮನವಿ
ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಶಾಲೆಯ ರಜೆ ನೀಡುವಂತೆ ಪೋಷಕರು ಜಿಲ್ಲಾಡಳಿತವನ್ನು ಒತ್ತಾಯ ಮಾಡಿದ್ದಾರೆ.
ಹಲವು ತಗ್ಗು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಶಾಲೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದ್ದರೂ ಜಿಲ್ಲಾಡಳಿತ ಇನ್ನೂ ರಜೆ ಘೋಷಣೆ ಮಾಡದೆ ಇರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲೆವೂರು ಶಾಂತಿನಿಕೇತನ, ಉಡುಪಿಯ ಮುಕುಂದ ಕೃಪಾ ಶಾಲೆ, ಸಾಲಿಯತ್ ಸಮೂಹ ಸಂಸ್ಥೆ, ವಾಸುದೇವ ಕೃಪಾ ಸಹಿತ ಉಡುಪಿಯಲ್ಲಿ ಕೆಲವು ಶಾಲೆಗಳ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆ.
ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡಲು ಶಿಕ್ಷಣಾಧಿಕಾರಿಗಳಿಗೆ ಸೂಚನೆ
ನದಿಗಳು ತುಂಬಿ ಹರಿಯುತ್ತಿದ್ದು ನೆರೆ ಸ್ಥಿತಿ ಏರ್ಪಟ್ಟಿದೆ. ಉಡುಪಿ ಜಿಲ್ಲಾಡಳಿತ ಶಾಲಾ-ಕಾಲೇಜಿಗೆ ರಜೆ ಘೋಷಿಸಿಲ್ಲ. ಆದರೆ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ಹಲವು ಶಾಲಾ-ಕಾಲೇಜು ರಜೆ ಘೋಷಿಸಿದೆ.
ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಿದ್ದಾರೆ. ಅದರಂತೆ ಜಿಲ್ಲೆಯ ಕೆಲವು ಶಾಲೆಗಳು ಈಗಾಗಲೇ ರಜೆ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಎಲ್ಲಾ ಏಳೂ ತಾಲೂಕಿನಲ್ಲಿ ನಿರಂತರ ಮಳೆ ಆಗುತ್ತಿಲ್ಲ. ರಾತ್ರಿ 10 ಗಂಟೆಯ ನಂತರ ಮಳೆ ಕೆಲವೆಡೆ ಕಡಿಮೆಯಾಗಿದ್ದು, ಪರಿಸ್ಥಿತಿಯನ್ನು ನೋಡಿಕೊಂಡು ರಜೆ ಘೋಷಣೆ ಮಾಡುವ ಅಧಿಕಾರವನ್ನು ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೈಂದೂರು ತಾಲೂಕಿನ 19 ಶಾಲೆಗಳಿಗೆ ರಜೆ ಘೋಷಣೆ
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಂದುಹೋಗಲು ಕಷ್ಟವಾಗುವ ಕಡೆಗಳಲ್ಲಿ ರಜೆ ಘೋಷಣೆಗೂ ಸೂಚನೆ ನೀಡಿದ್ದೇವೆ. ಆಯಾ ಶಾಲಾ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಪಾಲಕ – ಪೋಷಕರಿಗೆ ಸೂಚನೆ ನೀಡುವುದು ಮತ್ತು ಮಕ್ಕಳ ಸುರಕ್ಷತೆಗೆ ಹಚ್ಚಿನ ಆದ್ಯತೆ ನೀಡಲು ನಿರ್ದೇಶನ ಕೊಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಕೆ.ಗಣಪತಿ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕರಿಗೆ ಸೂಚನೆ
ಎಲ್ಲ ಮುಖ್ಯ ಶಿಕ್ಷಕರು ತಮ್ಮ ಶಾಲೆಗೆ ಸಂಬಂಧಿಸಿದಂತೆ ಮಳೆ ನೆರೆ, ಕಾಲುಸಂಕ, ಇತ್ಯಾದಿಗಳನ್ನು ಗಮನಿಸಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಅಗತ್ಯವೆಂದು ಕಂಡು ಬಂದಲ್ಲಿ ಶಾಲೆಗೆ ರಜೆ ನೀಡುವುದು. ಹಾಗೂ ಈ ಬಗ್ಗೆ ಶಿಕ್ಷಣ ಸಂಯೋಜಕರಿಗೆ ಹಾಗೂ ಸಿಆರ್‌ಪಿ ಯವರಿಗೆ ಮಾಹಿತಿ ನೀಡುವುದು. ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮುಖ್ಯ ಶಿಕ್ಷಕರಾಗಿದ್ದು, ವಿವೇಚನೆಯಿಂದ ಕರ್ತವ್ಯ ನಿರ್ವಹಿಸುವುದು. ರಜೆ ಅಗತ್ಯವಿಲ್ಲದಿದ್ದಲ್ಲಿ, ಮಳೆಯಿಂದ ಶಾಲೆಗೆ ಬರಲು ಅನಾನುಕೂಲವಾಗುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಪೋಷಕರಿಗೆ ತಿಳಿಸುವುದು. ಎಲ್ಲ ಅನುದಾನಿತ, ಸರಕಾರಿ ಹಾಗೂ ಅನುದಾನರಹಿತ ಶಾಲೆಗಳಿಗೆ ಅನ್ವಯಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.