ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ ಮುಂದೆ ಸಾಗಬೇಕು. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ನಾವು ಈ ಭಯವನ್ನು ಮುರಿಯಲು ಸಾಧ್ಯ. ನಾವು ಒಂದಾಗದೆ ಪಿತೃಪ್ರಧಾನತೆಯನ್ನು ಮುಖಾಮುಖಿಯಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆ, ಸ್ತ್ರೀವಾದಿ ಲೇಖಕಿ, ಹೋರಾಟಗಾರ್ತಿ ಆರ್ ಸುನಂದಮ್ಮ ಹೇಳಿದರು.
ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯು ಆರಂಭಿಸಿರುವ ‘ಕೊಂದವರು ಯಾರು? Who Killed Women in Dharmasthala?’ ಎಂಬ ರಾಜ್ಯವ್ಯಾಪಿ ಅಭಿಯಾನದ ಭಾಗವಾಗಿ, ಅಕ್ಟೋಬರ್ 2ರಂದು ಬೆಂಗಳೂರಿನ ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿರುವ ‘ಸಭಾ’ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲಾಗುತ್ತಿದೆ.
ಈ ವಿಚಾರ ಸಂಕಿರಣದ ಮೊದಲ ಗೋಷ್ಠಿ ‘ಅಪರಾಧಿಗಳ ನಿರ್ಭೀತಿ: ಪ್ರಶ್ನಿಸುವುದು, ಉತ್ತರಕ್ಕಾಗಿ ಆಗ್ರಹಿಸುವುದು ಮತ್ತು ಪುಸ್ತಕ ಬಿಡುಗಡೆ’ ವೇಳೆ ಮಾತನಾಡಿದ ಸುನಂದಮ್ಮ ಅವರು, ವಚನಕಾರ್ತಿ ಅಮುಗೆ ರಾಯಮ್ಮ ಅವರ ವಚನ ಹೇಳುವ ಮೂಲಕ ಗೋಷ್ಠಿಯಲ್ಲಿ ತಮ್ಮ ವಿಚಾರ ಮಂಡನೆ ಆರಂಭಿಸಿದರು.
ಇದನ್ನೂ ಓದಿ: ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ
“ಅಮುಗೆ ರಾಯಮ್ಮ ಒಬ್ಬಳು ತಳ ವರ್ಗದ ವಚನಕಾರ್ತಿ. ತಳವರ್ಗದಿಂದ ಬಂದ ಈ ಹೆಣ್ಣುಮಗಳು ಆ ಕಾಲದಲ್ಲೇ ನಮ್ಮ ಕಣ್ಣೊಳಗೆ ಹೇಗೆ ದೃಷ್ಟಿಯಲ್ಲೇ ಅಳಿಸಿಹಾಕಲಾಗಿದೆ, ನಮಗೆ ಅಂಧತ್ವವನ್ನು ತಂದಿದ್ದಾರೆ, ನಮ್ಮ ಕಾಲಿಗೆ ಮುಳ್ಳು ನೆಟ್ಟು ನಮ್ಮ ನಡಿಗೆಯನ್ನೇ ನಿಲ್ಲಿಸಿದ್ದಾರೆ. ಅದರ ಜತೆಗೆ ಜಾತಿ-ವರ್ಗ-ಧರ್ಮ ನಮ್ಮೊಳಗಡೆ ಅಹಂಕಾರವನ್ನೂ ತುಂಬಿದೆ. ಅಹಂಕಾರದಿಂದ ನಾವು ಅನೇಕ ದೌರ್ಜನ್ಯವನ್ನು ಮಾಡುತ್ತೇವೆ, ಇದನ್ನು ನಾವು ಕಳೆದುಕೊಳ್ಳಬೇಕು ಎಂಬುದನ್ನು ಆಕೆ ಹೇಳಿದ್ದಾಳೆ” ಎಂದು ತಿಳಿಸಿದರು.
“ಅದರೊಂದಿಗೆ ಹೆದರದೆ, ಛಲ ಬಿಡದೆ, ಮುಂದಕ್ಕೆ ಹೋಗು, ಮುಂದೆ ನಡೆದರೆ ಮಾತ್ರ ದಾರಿ ಸಿಗುತ್ತದೆ ಎಂದೂ ಆಕೆ ಹೇಳಿದ್ದಾಳೆ. ಇವು ಮಹಿಳೆಯರಲ್ಲಿ ಸೋದರತ್ವವನ್ನು ಕಟ್ಟಲು ಬೇಕಾದ ನಿಜವಾದ ತತ್ವಗಳು ಎಂಬುದನ್ನು ಆಕೆ ಹೇಳುತ್ತಾಳೆ. ಈ ಭಯ ಮೀರುವ ಮೂಲಕ ಮಾತ್ರ ನಾವು ಪಿತೃಪ್ರಧಾನತೆಯನ್ನು ಮುಖಾಮುಖಿಯಾಗಲು ಸಾಧ್ಯ ಆಗುತ್ತದೆ. ಯಾಕೆಂದರೆ ಧರ್ಮ ಅನೇಕ ಸಂಕಥನಗಳನ್ನು ಕಟ್ಟುವ ಮೂಲಕ ನಮ್ಮೊಳಗೆ ಭೀತಿಯನ್ನು ಉಂಟು ಮಾಡಿದೆ. ನಮ್ಮೊಳಗಿರುವ ಭಯವನ್ನು ನಾವು ಹೆಣ್ಣುಮಕ್ಕಳು ಮೊದಲು ಮುರಿದುಕೊಳ್ಳಬೇಕು. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ನಾವು ಈ ಭಯವನ್ನು ಮುರಿಯಲು ಸಾಧ್ಯ. ನಾವು ಒಂದಾಗದೆ ಪಿತೃಪ್ರಧಾನತೆಯನ್ನು ಮುಖಾಮುಖಿಯಾಗಲು ಸಾಧ್ಯವಿಲ್ಲ” ಎಂದರು.
“ಅಧಿಕಾರ, ಪಿತೃಪ್ರಧಾನತೆ ಮತ್ತು ಧರ್ಮ- ಇವು ಮೂರನ್ನೂ ನಾವು ನಿಯಂತ್ರಿಸಬೇಕಾದರೆ ಮೊದಲು ದಬ್ಬಾಳಿಕೆಯನ್ನು ಅರ್ಥಮಾಡಿಕೊಳ್ಳಬೇಕು. ಯಾರೂ ನಮ್ಮ ಕಾಲ ಮುಳ್ಳು ತೆಗೆಯಲ್ಲ. ನಾವೇ ತೆಗೆದು, ನಮ್ಮ ಪಿತೃಪ್ರಧಾನತೆ ಹಾಕಿರುವ ಗಡಿ ಮೀರಿ ಮುಂದೆ ಸಾಗಬೇಕು. ಹೆಣ್ಣುಮಕ್ಕಳಿಗೆ ಹಲವಾರು ಲಕ್ಷಣ ರೇಖೆಗಳಿವೆ. ಅದಕ್ಕಾಗಿ ನಾವು ನಮ್ಮ ಜ್ಞಾನವನ್ನು ತಿಳಿಯಬೇಕು. ನಾವು ಯಾರದ್ದೋ ಜ್ಞಾನದ ಅಡಿಯಾಳಾಗಿ ಬದುಕುತ್ತಿದ್ದೇವೆ. ಅದರಿಂದ ಬಿಡಿಸಿಕೊಳ್ಳದೆ ನಮ್ಮನ್ನು ನಾವು ಪೂರ್ಣತ್ವದ ಕಡೆಗೆ ಕರೆದುಕೊಂಡು ಹೋಗಲಾಗದು. ಹಾಗೆಯೇ ಈ ದಬ್ಬಾಳಿಕೆಯನ್ನು ಮುಖಾಮುಖಿ ಮಾಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಿಸಿದರು.
“ನಮಗೆ ಅರ್ಥವಾದ ತಕ್ಷಣ ನೋವು ಅಲ್ಲಿಗೆ ನಿಲ್ಲುತ್ತದೆ ಎಂದು ತಿಳಿಯಬಾರದು. 12 ಶತಮಾನತ ವಚನಕಾರ್ತಿಯ ವಚನದಿಂದ ನಾನು ಇಲ್ಲಿ ನಿಂತಿರುವವರೆಗೂ ನಮ್ಮ ಹೆಣ್ಣುಮಕ್ಕಳ ಇತಿಹಾಸವನ್ನು ನೋಡಿದಾಗ ವಿಶ್ವದ ಎಲ್ಲ ಧರ್ಮಗಳು ಮಹಿಳೆಯರನ್ನು ದಬ್ಬಾಳಿಕೆ ಮಾಡಿದೆ, ಮಾಡುತ್ತಿವೆ, ಇನ್ನೂ ಮಾಡುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಎಲ್ಲಿಯವರೆಗೆ? ನಾವು ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂಕೇತವನ್ನು ಭೇದಿಸಬೇಕಾಗುತ್ತದೆ” ಎಂದು ತಿಳಿಸಿದರು.
“ಅಷ್ಟಕ್ಕೆ ನಿಲ್ಲಲ್ಲ. ದಬ್ಬಾಳಿಕೆ ನಾಶಕ್ಕಾಗಿ ನಾವು ಮರುರಚನೆ ಮಾಡಬೇಕಾಗುತ್ತದೆ. ಈ ಮೂರನ್ನೂ ನಾವು ಮಾಡಬೇಕಾದರೆ ನಾವು ಮರುಚಿಂತನೆ, ಮರುಬರಹ, ಮರುರಚನೆ ಹೀಗೆ ಹಲವಾರು ಕ್ರಮಗಳನ್ನು ನಡೆಸಬೇಕಾಗುತ್ತದೆ. ಆ ಕ್ರಮಗಳ ಒಳಗಡೆ ಹೋದಾಗ ಮಾತ್ರ ನಾವು ಧೈರ್ಯ, ಶಕ್ತಿ, ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇವೆಲ್ಲವೂ ಆಗುವುದು ಧರ್ಮ ನಮಗೆ ಒಡ್ಡಿರುವ ಭಯವನ್ನು ನಾವು ಭೇದಿಸಿದಾಗ ಸಾಧ್ಯ” ಎಂದರು.
ಇದನ್ನೂ ಓದಿ: ‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ
“ಧರ್ಮ ನಮ್ಮೊಳಗೆ ಭ್ರಮೆ ಮತ್ತು ಮತಿಭ್ರಮೆಯನ್ನು ತುಂಬಿದೆ. ಅವೆರಡನ್ನೂ ನಾವು ಕಳೆದುಕೊಳ್ಳಬೇಕು, ಹೋಗಲಾಡಿಸಬೇಕು. ಹಾಗಾದಾಗ ಮಾತ್ರ ನಮ್ಮಲ್ಲಿ ಸಹೋದರತ್ವ ಬೆಳೆಯುತ್ತದೆ. ಈ ಪಿತೃಪ್ರಧಾನತೆ ಮೊದಲು ಹೆಣ್ಣನ್ನು ಜಾತಿ, ವರ್ಗ, ಸಮಾಜದ ಹೆಸರಲ್ಲಿ ಹೆಣ್ಣುಮಕ್ಕಳನ್ನು ವಿಭಜಿಸಿದೆ. ನಾವು ಒಂದಾಗಿ ಯೋಚಿಸಲಾಗದಂತೆ ಧರ್ಮ ನಮ್ಮೊಳಗೆ ಘನೀಕರಿಸಿದೆ. ಈಗ ಅದನ್ನು ನಾವು ಮುರಿದು ಮುಂದೆ ಸಾಗಬೇಕು. ಮನನ, ಮಂಥನ ಮಾಡದಿದ್ದರೆ ನಾವು ಏನೂ ಮಾಡಲಾಗದು. ಇವೆಲ್ಲವೂ ಶಿಕ್ಷಣ, ಮಾತುಕತೆ, ಸಂವಾದ, ಈ ರೀತಿ ಸೇರುವುದರ ಮೂಲಕ ಸಾಧ್ಯ” ಎಂದು ಹೇಳಿದರು.
“14 ವರ್ಷಗಳ ಹಿಂದೆ ಸೌಜನ್ಯ ಹತ್ಯೆ ಆಗಿದ್ದನ್ನು ನಾವು ಇಂದೂ ಯಾಕೆ ನೆನೆಯುತ್ತೇವೆ? ಯಾಕೆಂದರೆ ಇಂದು ಒಂದು ಪ್ರಕ್ರಿಯೆ. ಇಲ್ಲದಿದ್ದರೆ ನಮ್ಮ ಮನಸ್ಸಲ್ಲಿ ಆ ರೀತಿ ನಡೆದಿರಲಿಕ್ಕಿಲ್ಲ, ಗಂಡು ಮಕ್ಕಳು ತಪ್ಪಾಗಿ ಮಾಡಿರಬಹುದು ಎಂಬ ತಪ್ಪು ಮನೋಭಾವನೆ ಬೆಳೆಯುತ್ತದೆ. ಈ ವಿಷಯವೇ ಮೂಲೆಗುಂಪಾಗುತ್ತದೆ. ಈ ಮೂಲಕ ನಾವು ಗುರಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ನಾವು ಮತ್ತೆ ಪಿತೃಪ್ರಧಾನತೆಗೆ ಹೊಂದಿಕೊಳ್ಳುತ್ತೇವೆ. ಈ ಹೊಂದಿಕೊಳ್ಳುವ ಗುಣವನ್ನು ಹೆಣ್ಣುಮಕ್ಕಳಲ್ಲಿ ಭಿತ್ತಲಾಗಿದೆ, ಬೆಳೆಸಲಾಗಿದೆ, ಕಟ್ಟಲಾಗಿದೆ, ರೂಪಿಸಲಾಗಿದೆ. ಇದರಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಅದಕ್ಕಾಗಿ ನಾವು ಹಂತಹಂತವಾಗಿ ಕಟ್ಟು ಬಿಚ್ಚುವ ಪ್ರಯತ್ನ ಮಾಡಬೇಕು” ಎಂದು ತಿಳಿಸಿದರು.
:ನಾವು ಬದಲಾದರೆ ಸಾಕಾಗಲ್ಲ. ನಮ್ಮೊಂದಿಗೆ ನಮ್ಮ ಅಣ್ಣ-ತಮ್ಮಂದಿರೂ ಬದಲಾಗಬೇಕಾಗುತ್ತದೆ. ಇಂದಿನ ಪೀಳಿಗೆಯನ್ನಾದರೂ ಬದಲಾಯಿಸುವ ಮೂಲಕ ಮುಂದಿನ ಹೆಣ್ಣುಮಕ್ಕಳಿಗೆ ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ನಮಗಿದೆ. ಹಾಗಾಗಿ ನಾವು ನ್ಯಾಯ ಸಿಗದಿದ್ದಾಗ ಪದೇ ಪದೇ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
“ಅದಕ್ಕಾಗಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮನ್ನು ಬಜಾರಿ, ವೇಶ್ಯೆ, ಬೀದಿಗೆ ಬಿದ್ದವಳು ಅನ್ನುತ್ತಾರೆ. ಆದರೆ ನಮ್ಮನ್ನು ನಾವು ಅರ್ಥಮಾಡಿಕೊಂಡಾಗ ಮಾತ್ರ ನಾವು ಬದಲಾವಣೆ ಹಾದಿಯಲ್ಲಿ ಸಾಗಲು ಸಾಧ್ಯ. ಅಮುಗೆ ರಾಯಮ್ಮ, ಮಸಣಮ್ಮ ಅವರು ತಳ ವರ್ಗದ ಹೆಣ್ಣುಮಕ್ಕಳು ಮಾತನಾಡಿದ್ದಾರೆ. ಅವರು ಮಾತನಾಡಿದ್ದನ್ನೇ ನಾವು ಇಂದಿಗೂ ಮಾತನಾಡಬೇಕಾಗಿದೆ. ಇನ್ನೆಂಟು ಶತಮಾನಗಳಾದರೂ ನಾವು ಮಾತನಾಡಬೇಕಾಗುತ್ತದೆ. ಯಾಕೆಂದರೆ ಸಾವಿರಾರು ವರ್ಷಗಳ ಈ ಸಂಸ್ಕೃತಿ, ನಿಷಿದ್ಧ ಎಂಬ ಮನಸ್ಥಿತಿಯನ್ನು ಮುರಿಯುವುದು ಸುಲಭವಲ್ಲ. ಸೀತೆ, ದ್ರೌಪದಿ, ಅಹಲ್ಯೆ ಮೂಲಕ ಈ ಮನಸ್ಥಿತಿಯನ್ನು ಕಟ್ಟಿದ್ದಾರೆ, ಮತ್ತೆ ಮತ್ತೆ ಕಟ್ಟುತ್ತಿರುತ್ತಾರೆ. ನಾವು ಮತ್ತೆ ಮತ್ತೆ ಮರುರಚನೆ ಮಾಡುತ್ತಲೇ ಇರಬೇಕಾಗುತ್ತದೆ” ಎಂದರು.
“ಕೊಂದವರು ಯಾರು? ಈ ಅಭಿಯಾನವು ಮಹಿಳಾ ಚಳವಳಿಗೆ ಹೊಸದೊಂದು ಆಯಾಮವನ್ನು ನೀಡಿದೆ. ಈ ಪ್ರಯಾಣ ಆರಂಭವಷ್ಟೇ ಇನ್ನೂ ಮುಂದೆ ಸಾಗುವುದಿದೆ. ಸೌಜನ್ಯ ತಂಗಿ ಬೆಳ್ತಂಗಡಿಯಲ್ಲಿ ಮಾತನಾಡುತ್ತಾ, ಈ ಅಭಿಯಾನಗಳು, ವಿರೋಧಗಳು ಹುಟ್ಟಿದ ಮೇಲೆ ಧರ್ಮಸ್ಥಳದಲ್ಲಿ ಸಾವಿನ ಸಂಖ್ಯೆ ತುಂಬ ಕಡಿಮೆಯಾಗಿದೆ ಮತ್ತು ಇಲ್ಲವಾಗಿದೆ. ಇದು ಪ್ರಕ್ರಿಯೆ” ಎಂದು ತಿಳಿಸಿದರು.
“ದಬ್ಬಾಳಿಕೆಯನ್ನು ನಿಲ್ಲಿಸಲು ಮತ್ತೆ ಮತ್ತೆ ಈ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆ ಮೂಲಕ ಮಾತ್ರ ನಾವು ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿಕೊಡುವ ಹಾದಿಯಲ್ಲಿ ಸಾಗಲು ಸಾಧ್ಯ. ಸದ್ಯ ಇರುವುದು ಪಿತೃಪ್ರಧಾನತೆಯ ಸಮಾಜ, ನಾವು ನಮ್ಮದೇ ಆದ ಸಮಾಜವನ್ನು ನಿರ್ಮಿಸಿಕೊಳ್ಳಬೇಕಾಗಿದೆ. ಈ ಪಯಣಕ್ಕೆ ಕೊನೆಯಿಲ್ಲ, ಮುಂದೆ ಸಾಗುತ್ತಲೇ ಇರುತ್ತದೆ. ಕಾಲಿನಲ್ಲಿ ನೆಟ್ಟ ಮುಳ್ಳನ್ನು ತೆಗೆಯುತ್ತಾ, ತೆಗೆಯುತ್ತಾ ನಾವು ಒಟ್ಟಾಗಿ ಮುಂದೆ ಸಾಗೋಣ” ಎಂದು ಕರೆ ನೀಡಿದರು.




