ರಾಷ್ಟ್ರವ್ಯಾಪಿ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಎನ್ನುವ ಭೀಕರ ಆಪರೇಷನ್ ನಡೆಸಿ, ಕರಡು ಮತದಾರರ ಪಟ್ಟಿಯಿಂದ ಬರೋಬ್ಬರಿ 13 ಕೋಟಿ ಜನರ ಹೆಸರುಗಳನ್ನು ಹೊರದಬ್ಬಿದ ಬಳಿಕ, ಆಯೋಗಕ್ಕೆ ಈಗ ಜ್ಞಾನೋದಯವಾದಂತಿದೆ. 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ದೊಡ್ಡ ಪ್ರಮಾಣದ ಕಡಿತದಿಂದಾಗಿ ಆಯೋಗವು ತೀವ್ರ ವಿರೋಧಕ್ಕೆ ಒಳಗಾಗಿದ್ದು, ಪ್ರಕ್ರಿಯೆ ಮುಗಿದಿರುವ 20 ರಾಜ್ಯಗಳಲ್ಲಿ “ಹೊರಗುಳಿದ” ಮತದಾರರನ್ನು ಮರುನೋಂದಾಯಿಸಲು ಸೆಪ್ಟೆಂಬರ್ 29 ರಂದು ಲಿಖಿತ ಸೂಚನೆ ನೀಡಿದೆ. ಗುರುವಾರ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿಯೂ ಅದನ್ನು ಪುನರಾವರ್ತಿಸಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಬಯಲು ಮಾಡಿದ ರಹಸ್ಯದ ಪ್ರಕಾರ ಆಯೋಗದ ಒಳಗೇ ಎಂಥದ್ದೆಲ್ಲಾ ಕದನ ನಡೆದಿತ್ತು ಎಂಬುದು ಈಗ ಜಗಜ್ಜಾಹೀರು. ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮ್ಮ ಗಮನಕ್ಕೆ ತರದೆ ಆಯೋಗದ ಹೆಸರಿನಲ್ಲಿ ತೆಗೆದುಕೊಂಡ ತೀರ್ಮಾನಗಳ ವಿರುದ್ಧ 10 ತಿಂಗಳಲ್ಲಿ ಬರೋಬ್ಬರಿ 14 ಬಾರಿ ಆಕ್ಷೇಪಣೆಗಳನ್ನು ದಾಖಲಿಸಿದ್ದರು. ಹೊಸ ಮತದಾರರು ಭರ್ತಿ ಮಾಡುವ ‘ಫಾರ್ಮ್ 6’ ಬದಲಾವಣೆ ಮತ್ತು ಮತದಾರರ ಪಟ್ಟಿ ತಯಾರಿಸುವ ‘ECINet’ ತಂತ್ರಾಂಶದ ಕೇಂದ್ರಿಕೃತ ನಿಯಂತ್ರಣದ ಬಗ್ಗೆ ಇವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮೇ ತಿಂಗಳಿನಲ್ಲೇ ವಿವೇಕ್ ಜೋಶಿ ಅವರು ಈ ತಂತ್ರಾಂಶದ “ಕ್ರಮಬದ್ಧವಾದ ಕೇಂದ್ರೀಕರಣ”ದ ಬಗ್ಗೆ ಎಚ್ಚರಿಸಿ ಆಡಿಟ್‌ಗೆ ಒತ್ತಾಯಿಸಿದ್ದರು. ಆದರೆ ಸೆಪ್ಟೆಂಬರ್ 26 ರವರೆಗೆ ಯಾರೂ ಇವರ ಮಾತಿಗೆ ಕಿವಿಗೊಟ್ಟಿರಲಿಲ್ಲ.
ಮೊದಲೆಲ್ಲಾ ಹೊಸ ಫಾರ್ಮ್‌ನಲ್ಲಿ ನಿಮ್ಮ ಅಥವಾ ನಿಮ್ಮ ಪೋಷಕರ ಹೆಸರು ಕೊನೆಯ SIR ನಂತರದ ಮತದಾರರ ಪಟ್ಟಿಯಲ್ಲಿದೆಯಾ ಎಂಬ ವಿವಾದಿತ ಪ್ರಶ್ನೆಯನ್ನು ಕಡ್ಡಾಯಗೊಳಿಸಲಾಗಿದ್ದು, ಪೋಷಕರ ಹೆಸರು ಡಿಲೀಟ್ ಆಗಿದ್ದರೆ 18 ವರ್ಷದ ಯುವಕರಿಗೆ ಫಾರ್ಮ್ ಸಬ್ಮಿಟ್ ಮಾಡಲು ಬಿಡುತ್ತಿರಲಿಲ್ಲ. ನಿಯಮಗಳ ತಿದ್ದುಪಡಿ ಮಾಡದೆ ಸರ್ಕಾರವೇ ಈ ಬದಲಾವಣೆ ತರಲು ಸಾಧ್ಯವಿಲ್ಲದಿದ್ದರೂ ಇದನ್ನು ಮಾಡಲಾಗಿತ್ತು. ಸಂಧು ಅವರು ಆಗಸ್ಟ್‌ನಲ್ಲೇ ಈ ಬದಲಾವಣೆಯನ್ನು ಅಧಿಕೃತವಲ್ಲ/ಕಾನೂನುಬಹಿರ ಎಂದು ಬರೆದಿದ್ದರು. ಈಗ ಕಡೆಗೂ ಎಚ್ಚೆತ್ತ ಆಯೋಗ, ಆ ಘೋಷಣೆಯನ್ನು ʼSIR ಹಂತಕ್ಕೆ ಮಾತ್ರ ಸೀಮಿತʼ ಎಂದು ನುಣುಚಿಕೊಂಡು, ಉಳಿದ ರಾಜ್ಯಗಳಲ್ಲಿ ಹಳೆಯ ಸರಳ statutory ಫಾರ್ಮ್ ಬಳಸಿ ಎಂದಿದೆ. ಸೆಪ್ಟೆಂಬರ್ 29 ರ ಪತ್ರವು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, DG (IT) ಗೆ ECINet ನಲ್ಲಿ ಬದಲಾವಣೆ ಮಾಡಲು ತಿಳಿಸಲಾಗಿದೆ ಮತ್ತು ಏಪ್ರಿಲ್ ನಂತರದ ಆಯೋಗದ ಎರಡನೇ ಪೂರ್ಣ ಸಭೆಯಲ್ಲಿ (ಸೆಪ್ಟೆಂಬರ್ 26) ತೆಗೆದುಕೊಂಡ ತೀರ್ಮಾನಗಳಂತೆ ನೋಟಿಸ್ ಪಡೆದವರು ಖುದ್ದಾಗಿ ಬರುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಮನೆ-ಮನೆ ಭೇಟಿ ಹಾಗೂ ಮರುನೋಂದಣಿ ಅಭಿಯಾನದ ಬಗ್ಗೆ ಹೇಳುವುದಾದರೆ, SIR ಮುಗಿದಿರುವ 20 ರಾಜ್ಯಗಳಲ್ಲಿ ಬಿಟ್ಟುಹೋದ ಮತ್ತು ಹೊಸ ಮತದಾರರನ್ನು ಮರುನೋಂದಾಯಿಸಲು ವಿಶೇಷ ಅಭಿಯಾನ ನಡೆಯಲಿದೆ ಎಂದು ಸೆಪ್ಟೆಂಬರ್ 29ರ ಪತ್ರ ತಿಳಿಸಿದೆ. ಗುರುವಾರದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಉಪ ಚುನಾವಣಾ ಆಯುಕ್ತರು, ಪ್ರೀ-SIR ಮತ್ತು ಪೋಸ್ಟ್-SIR ಪಟ್ಟಿಗಳನ್ನು ಹೋಲಿಸಿ, ಅನ್ಯಾಯವಾಗಿ ಕೈಬಿಟ್ಟವರನ್ನು ಗುರುತಿಸುವಂತೆ CEOs ಗಳಿಗೆ ಸೂಚಿಸಿದ್ದಾರೆ. ಮತದಾರರು ನಕಲಿ ಅಥವಾ ಮೃತರಲ್ಲದೆ, ಬೇರೆಡೆ ಮ್ಯಾಪ್ ಆಗಿಲ್ಲದಿದ್ದರೆ ಅಂಥವರ ಮನೆಗಳಿಗೇ ಹೋಗಿ ‘ಫಾರ್ಮ್ 6’ ಭರ್ತಿ ಮಾಡಿಸಿಕೊಳ್ಳಲು ಹೇಳಲಾಗಿದೆ. ಈ ಕಾರ್ಯದಲ್ಲಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ ಸಹಾಯವನ್ನೂ ಪಡೆಯಲು ಸೂಚಿಸಲಾಗಿದೆ.
ಗೋವಾದಲ್ಲಿ ನಡೆದ ಎಡವಟ್ಟೇ ಇದಕ್ಕೆ ಪ್ರಮುಖ ಕಾರಣ. ಗೋವಾದಲ್ಲಿ ಸ್ಥಳೀಯ ERO ಗಳು ಅರ್ಹರೆಂದು ಒಪ್ಪಿಕೊಂಡಿದ್ದರೂ, ECINet ತಂತ್ರಾಂಶದಲ್ಲಿ ಡಿಲೀಟ್ ಆದ ಹೆಸರನ್ನು ವಾಪಸ್ ಪಡೆಯುವ ಆಪ್ಷನ್ ಇಲ್ಲದೆ 97 ಜನ ಹೊರಗುಳಿದಿದ್ದರು. ಗೋವಾ CEO ಕಳುಹಿಸಿದ 8 ಪತ್ರಗಳಿಗೆ DG (IT) ಸೀಮಾ ಖನ್ನಾ ಕಡೆಯಿಂದ ಉತ್ತರವಿಲ್ಲದೆ ಕೊನೆಗೆ ಅವರ ಹೆಸರಿಲ್ಲದೆಯೇ ಅಂತಿಮ ಪಟ್ಟಿ ಪ್ರಕಟವಾಗಿತ್ತು. ಇದನ್ನೇ ಸಂಧು ಅವರು ಆಗಸ್ಟ್ 14 ರಂದೇ, “ಕಾನೂನಿನ ಪ್ರಕಾರ ಎಲ್ಲಾ ಜವಾಬ್ದಾರಿಗಳು ERO, DEO ಮತ್ತು CEO ಗಳ ಮೇಲಿವೆ, ಆದರೆ DG (IT) ಗೆ ಕಾನೂನುಬದ್ಧ ಅಧಿಕಾರವಿಲ್ಲದೆ ಪ್ರವೇಶ ನಿಯಂತ್ರಣವನ್ನು ಕೇಂದ್ರಿಕೃತಗೊಳಿಸಿದ್ದಾರೆ” ಎಂದು ಆಕ್ಷೇಪಿಸಿದ್ದರು. ಈಗ ಆಯೋಗವು IIT/IIIT ತಜ್ಞರನ್ನೊಳಗೊಂಡ ಸಮಿತಿಯ ಮೂಲಕ ECINet ಅನ್ನು ಪರಿಶೀಲಿಸುವುದಾಗಿ ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಅಗತ್ಯ “ಸ್ವಾತಂತ್ರ್ಯ” ಕಲ್ಪಿಸುವುದಾಗಿ ಒಪ್ಪಿಕೊಂಡಿದೆ.
ಇದನ್ನೂ ಓದಿ: ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್
ಸದ್ಯ SIR ನಡೆಯುತ್ತಿರುವ ಮಹಾರಾಷ್ಟ್ರದಲ್ಲಿ ಕರಡು ಪಟ್ಟಿಯಲ್ಲಿ ಬರೋಬ್ಬರಿ 1.22 ಕೋಟಿ ದಾಖಲೆಗಳನ್ನು ವೆರಿಫಿಕೇಷನ್‌ಗಾಗಿ ತೆಗೆದಿಡಲಾಗಿದ್ದು, ಅದರಲ್ಲಿ 62.48 ಲಕ್ಷ ಸಂಬಂಧಿಕರ ವಿವರಗಳಲ್ಲಿ ವ್ಯತ್ಯಾಸವಿದ್ದರೆ, 5.75 ಲಕ್ಷ ಜನರು ಮ್ಯಾಪ್ ಆಗಿಲ್ಲ. ವಿರೋಧ ಹೆಚ್ಚುತ್ತಿದ್ದಂತೆ, ಮಹಾರಾಷ್ಟ್ರ CEO ಕಚೇರಿಯು ERO ಗಳಿಗೆ ಯಾವುದೇ ಮತದಾರರನ್ನು ಆತುರದಲ್ಲಿ ಹೊರಹಾಕಬೇಡಿ, ನೋಟಿಸ್ ಪಡೆದವರು ಖುದ್ದಾಗಿ ಬರುವ ಅಗತ್ಯವಿಲ್ಲ, BLO ಗಳೇ ಮನೆಗೆ ಬಂದು ದಾಖಲೆ ಸಂಗ್ರಹಿಸುತ್ತಾರೆ ಎಂದು ಹೊಸ ಆದೇಶ ನೀಡಿದೆ. ಫೋನ್ ಅಥವಾ WhatsApp ಮೂಲಕವೂ ಮಾಹಿತಿ ನೀಡಲು ತಿಳಿಸಲಾಗಿದ್ದು, ಅಕ್ಟೋಬರ್ 3, 4, 10 ಹಾಗೂ 11 ರಂದು ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ. BLO ಭೇಟಿಯ ನಂತರವೂ ಇನ್ನೊಂದು ಅವಕಾಶ ನೀಡಿ, ಸರಿಯಾದ ವಿಚಾರಣೆ ನಡೆಸಿ ಆದೇಶ ಹೊರಡಿಸುವಂತೆ ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಆದರೆ ECINet ಹಾಗೂ BLO ಆಪ್‌ನಲ್ಲಿ ಅಗತ್ಯ ಬದಲಾವಣೆಗಳು ಇನ್ನೂ ನಡೆಯುತ್ತಿವೆ!
ಒಟ್ಟಿನಲ್ಲಿ, ಬಲಗೈಯಲ್ಲಿ ಮತದಾರರ ಹಕ್ಕನ್ನು ಕಸಿದುಕೊಂಡು, ಎಡಗೈಯಲ್ಲಿ “ಅಯ್ಯೋ ನಿಮ್ಮ ಹಕ್ಕು ನಮಗೆ ಬೇಕು, ಬನ್ನಿ ವಾಪಸ್” ಎಂದು ಹೇಳುವ ಈ ಕಸರತ್ತು ನೋಡಿದರೆ, ಆಯೋಗದ ಈ ಎಚ್ಚರಿಕೆ ನಿಜಕ್ಕೂ “ಕಳ್ಳರ ಜೊತೆ ಸೇರಿ ಮನೆ ಕಾಯಿಸಿದಂತೆ” ಇದೆ! ಮತದಾರ ಪ್ರಭುಗಳು ಚುನಾವಣೆಯ ಹೊತ್ತಿನಲ್ಲಿ ಇವರ ಈ ‘ಕೃಪೆ’ಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸೂಕ್ತವಲ್ಲವೇ?




