ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅಂತುರಗಟ್ಟಮ್ಮ ನೀನು ಮಂತುರಗಾತಿ ಕಾಣೆ ಮಂಟಪದ ಸಾಲ ಗುಡಿಯಾಗೆ
ಮಂಟಪದ ಸಾಲ ಗುಡಿಯಾಗೆ ಕ್ವಾಟೆಳ ಮಾರಿ ಮಂತರಿಸಿ ಹೋಗೆ ತಲೆನೋವ.
ಹೋರಿಯ ಹೊಡಕಂಡು ಕೋರುಡುಗಿ ಕರಕಂಡು ಗೋರಿಕಲ್ಲಂತ ಮಲೆಯೋಳ
ಗೋರಿಕಲ್ಲಂತ ಮಲೆಯೋಳ ಕರಕಂಡು ಜೋಡಿ ಹೊಂಟೈತೆ ಪರಿಸೇಗೆ.
ಕಿತ್ತನಕೆರೆ ಲಕ್ಕಮ್ಮನ ಹೊರಗಲ ಗುಡಿಯ ಮುಂದೆ ಆಸಾದಿ ಹನುಮಂತಣ್ಣ ಹಲಗೆ ಹಿಡಿದು ಅಮ್ಮನ ಹೊಗಳಿಕೆ ಹಾಡುಗಳನ್ನು ಸುಮಾರು ಹೊತ್ತಿನಿಂದ ಹಾಡುತ್ತಿದ್ದ. ಯಾಕೋ ಇವತ್ತು ಎಂದಿನ ಲವಲವಿಕೆ ಇರಲಿಲ್ಲ. ಯಾರೋ ಅವನ ನಾಲಗೇನ ಹಿಡಿದಿದ್ದಾರೇನೋ ಅನ್ನುವಂಗಿತ್ತು. ಬಡಿಯುತ್ತಿದ್ದ ಹಲಗೆಯೂ ಆಗಾಗ್ಗೆ ತಾಳ ತಪ್ಪುತ್ತಿತ್ತು. ಹೀಗೇ ಸ್ವಲ್ಪ ಹೊತ್ತು ಪರದಾಡಿದಮ್ಯಾಲೆ ಅದೆಲ್ಲಿ ಅಡಗಿತ್ತೋ ಆ ಆಸಾದಿತನವೇ ನುಗ್ಗಿಬಂದಂಗೆ ಬಂಡುಹಾಡೊಂದು ಹೊರಬಂತು.
ಮಾರಕ್ಕ ಬಾರಕ್ಕ ಮಗಳೀಗೆ ಬುದ್ದಿ ಹೇಳು ಎಲೆಯ ತೋಟಕೆ ಬರುತಾಳೆ
ಎಲೆಯ ತೋಟಕೆ ಬರುತಾಳೆ ನಿನ ಮಗಳು ಮಲೆಯ ಹಿಚುಕಿದರೆ ಮಿಡಿತಾಳೆ.
ಯಾಕಲೆ ಹುಡುಗಿ ಎಂದಿನಂತಿಲ್ವಲ್ಲೆ ಕುಗ್ಗಿ ಬಂತಲ್ಲೆ ನಿನ ಸಂಸಾರ
ಕುಗ್ಗಿ ಬಂತಲ್ಲೆ ನಿನ ಸಂಸಾರ ಪಿಳೇಗಿನಮ್ಮ ನುಗ್ಗೆ ಹೂವಿನಂತೆ ನಿನ.
ಇದ್ದಕ್ಕಿದ್ದಂತೆ ಬಂದ ಬಂಡುಪದಗಳಿಗೆ ಅಲ್ಲಿದ್ದವರ ಕಿವಿಗಳು ಚುರುಕಾದವು. ಮತ್ತೆ ಕೆಲವರಿಗೆ ಗಾಬರಿಯಾದರೂ, ‘ಇರಲೇಳು, ನಮ್ಮ ಸಂಪ್ರದಾಯ ತಾನೆ’ ಎಂಬ ನೆಪದೊಂದಿಗೆ ಮೈ ನಚ್ಚಗಾಗಿಸೋ ಪದಗಳನ್ನು ಕೇಳುವ ಅವಕಾಶ ಸಿಕ್ಕಿ ಒಳಗೊಳಗೇ ಖುಷಿಯಾದರು. ಇಂತಾ ಪದಗಳನ್ನು ಎಂದೂ ಕೇಳಿಲ್ಲದ ಕೆಲವು ಇತ್ತೀಚಿನ ಹೆಂಗಸರು ಕಕ್ಕಾವಿಕ್ಕಿಯಾದರು. ಹನುಮಂತಣ್ಣ ಮಾತ್ರ ತಾನೇ ತಾನಾದವನಂತೆ ಪದಗಳನ್ನು ಮುಂದುವರಿಸಿದ. ಸುಮಾರು ಹೊತ್ತಿನವರೆಗೆ ಮೈಮರೆತು ಹಾಡುತ್ತಲೇ ಇದ್ದ.
ಇದನ್ನು ಓದಿದ್ದೀರಾ?: ಗಿರೀಶ್ ಕಾರ್ನಾಡ್ ಅವರ ಕತೆ | ಅಳಿದ ಮೇಲೆ
ಹನುಮಂತಣ್ಣನ ವಯಸ್ಸು ಈಗ ಐವತ್ತೋ ಅರುವತ್ತೋ ಇರಬೈದು. ಆದರೆ ಬಂಡುಹಾಡನ್ನು ಶುರು ಮಾಡಿದಾಕ್ಷಣ ಮೂವತ್ತರ ಹರೆಯದವನಾಗಿಬಿಡುತ್ತಾನೆ. ಹೀಗೆ ಅವನ ವಯಸ್ಸು ಅರುವತ್ತು ಮೂವತ್ತರ ನಡುವೆ ಜೋಕಾಲಿಯಾಡುತ್ತಾ ಇದೆ. ಸುಮಾ ನಲವತ್ತು ವರುಷಗಳಿಂದ ಅಮ್ಮನ ಆಸಾದಿ ಆಗಿ ಹಲಗೆ ಹಿಡಿಯುತ್ತ ಅಮ್ಮನನ್ನು ಹೊಗಳುತ್ತ ಬಂಡು ಹಾಡುಗಳನ್ನು ಹಾಡುತ್ತ ತನ್ನ ಆಯಸ್ಸಿನ ಮುಕ್ಕಾಲು ಭಾಗ ಕಳೆದಿದ್ದಾನೆ. ಆಗಾಗ್ಗೆ ಊರಾಡಲು ಕಡ್ಲೆಮಗೆ, ದೋಣನಕಟ್ಟೆ, ಮಾಡಾಳು ಮುಂತಾದ ಊರುಗಳಿಗೆ ಹೋಗಿ ಯಾರ ಮನೆ ಮುಂದಾದರೂ ಹನುಮಂತಣ್ಣ ಹಲಗೆಯನ್ನು ತಮ ತಮ ಅನ್ನಿಸುವುದೇ ತಡ ಹೆಣ್ಣು ಮಕ್ಕಳು ತಡಮಾಡದೆ ಅಕ್ಕಿಯೋ ಜೋಳವೋ ರಾಗಿಯೋ ಏನಾದರೊಂದನ್ನು ಕೊಟ್ಟು ಬೇಗ ಕಳಿಸಿಬಿಡುತ್ತಿದ್ದರು. ಕೆಲವು ತಲೆಮಾಸಿದ ಹದಿ ಹರೆಯದ ಹುಡುಗರು ಊರ ಹೊರಗಿನ ತೋಪಿನಲ್ಲಿ ಹನುಮಂತಣ್ಣನಿಗೆ ಷರಾಪಿನ ಆಸೆ ತೋರಿಸಿ ತಮಗೆ ಬೇಕೆನಿಸುವಷ್ಟು ಬಂಡು ಪದಗಳನ್ನು ಕೇಳುತ್ತಿದ್ದುದೂ ಉಂಟು.
ಆಗೆಲ್ಲ ಅದನ್ನು ಕಂಡ ಹಿರೀಕರು ಕಂಡರೂ ಕಾಣದ ಹಾಗೆ ಆ ಕಡೆಗೆ ಕತ್ತು ಹಾಕದೆ ಕಿವಿ ಮಾತ್ರ ಹಾಕುತ್ತ ಹೋಗಿಬಿಡುತ್ತಿದ್ದರು. ಅವನ ಬಂಡುಪದಗಳಿಗೆ ಒಂದು ವಿಶೇಷ ಗುಣವಿತ್ತು. ಅತಿರಂಜಿತ ಅಶ್ಲೀಲ ಎಂದು ಮೊದಮೊದಲಿಗೆ ಅನ್ನಿಸಿದರೂ ಕೇವಲ ಐದಾರು ನಿಮಿಷಗಳಲ್ಲೇ ಕೇಳುತ್ತಿದ್ದವರು ಅಂತಹ ತಾರತಮ್ಯವನ್ನೇ ದಾಟಿ ಬಿಡುತ್ತಿದ್ದರು. ಆಮೇಲೆ ಯಾರಿಗೂ ಅವು ಸಮಸ್ಯೆ ಮಾಡುತ್ತಿರಲಿಲ್ಲ. ಬದಲಿಗೆ ಅಂತಾ ಮುಜುಗರವನ್ನು ದಾಟಲು ಅವುಗಳನ್ನೇ ಬಳಸಬಹುದು ಎಂಬುದು ಗೊತ್ತಾಗುತ್ತಿತ್ತು. ಅವುಗಳು ಶುರುಮಾಡಿದಾಗ ತಕ್ಷಣಕ್ಕೆ, ಸಂಭೋಗಕ್ಕೆ ಸಂಬಂಧಿಸಿದ ಅದೂ ತಾವು ಪೂಜಿಸುತ್ತಿರುವ ಅಮ್ಮನನ್ನೇ ಕುರಿತಾಗಿ ಇರುವ ಪದಗಳೆಂದು ಗೊತ್ತಾಗುತ್ತಿತ್ತು. ಅಂತವುಗಳನ್ನು ಎಂದೂ ಕೇಳಿಲ್ಲದ ಹೊಸ ಹುಡುಗ ಹುಡುಗಿಯರು ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಪರದಾಡುತ್ತಿದ್ದರೆ ನಡುಹರೆಯದ ಅನುಭವಿ ಗಂಡಸರು ಮೀಸೆ ಮರೆಯಲ್ಲಿ ನಗುತ್ತಿದ್ದರು. ಹೆಂಗಸರು ಸೆರಗಿನ ಮರೆಯಲ್ಲಿ ಅದೇನನ್ನು ಪ್ರತಿಕ್ರಿಯಿಸುತ್ತಿದ್ದರೋ ಅದ ಯಾರಿಗೂ ತಿಳಿಯುತ್ತಿರಲಿಲ್ಲ. ಎಲ್ಲ ಮೊದಮೊದಲಿನ ಸ್ವಲ್ಪ ಹೊತ್ತಿನ ಪರದಾಟ ಅಷ್ಟೆ. ಐದಾರು ಬಂಡುಪದಗಳನ್ನು ಹಾಡಿದ ಮೇಲೆ ಎಲ್ಲವೂ ನಿರಾಳವೆನ್ನಿಸಿಬಿಡುತ್ತಿತ್ತು. ಅಷ್ಟೇ ಅಲ್ಲ ತಮ್ಮ ಮೊದಲ ಪ್ರತಿಕ್ರಿಯೆಯ ಬಗೆಗೆ ಅವರಿಗೇ ಆಶ್ಚರ್ಯವೆನ್ನಿಸುತ್ತಿತ್ತು. ಇದೆಲ್ಲ ಲೋಕದಲ್ಲಿ ನಿತ್ಯ ಇರುವುದೇ ಅಲ್ಲವೆ ಅಂತಾ ಅನ್ನಿಸಿಬಿಡುತ್ತಿತ್ತು.
ಇದನ್ನು ಓದಿದ್ದೀರಾ?: ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ
ಆಸಾದಿ ಹನುಮಂತಣ್ಣನಿಗೆ ತುಂಬಾ ದಿನಗಳಿಂದ ಬಂಡುಪದಗಳನ್ನು ಹಾಡದೆ ಬಾಯೆಲ್ಲ ಸಪ್ಪೆ ಸಪ್ಪೆ ಅಂತಾ ಅನ್ನಿಸಲಿಕ್ಕೆ ಸುರುವಾಗಿತ್ತು. ಯಾಕೋ ಮೊದಲಿನ ಹಾಗೆ ಯಾರೂ ಬಂಡುಹಾಡನ್ನು ಹಾಡಲು ಒತ್ತಾಯಿಸುವವರೂ ಇಲ್ಲ. ಮೊದಲಾದರೆ ವರಗಲ ಗುಡಿಯ ಮುಂದೆ ಮಂಗಳವಾರ ಶುಕ್ರವಾರ ಪೂಜೆಗೆ ಹಲಗೆ ಹಿಡಿಯುತ್ತಿದ್ದ ಹನುಮಂತಣ್ಣ ಸ್ವಲ್ಪ ಹೊತ್ತು ಅಮ್ಮನ ಹೊಗಳಿಕೆ ಪದಗಳನ್ನು ಹಾಡಿದವನು ನಂತರ ಬಂಡುಪದಗಳನ್ನು ಎತ್ತಿಕೊಂಡು ಬಿಡುತ್ತಿದ್ದ. ಹಣ್ಣುಕಾಯಿ ಮಾಡಿಸಲು ಬಂದಿರುತ್ತಿದ್ದವರಲ್ಲಿ ಹೆಣ್ಣುಮಕ್ಕಳು ಇದ್ದರೆ, ಅವರು ಸೆರಗಿನ ಮರೆಯಲ್ಲಿ ಮುಸಿ ಮುಸಿ ನಗುತ್ತ ಬೇಗ ಜಾಗ ಖಾಲಿ ಮಾಡುತ್ತಿದ್ದರು. ಇನ್ನು ಜಾತ್ರೆ ಉತ್ಸವಗಳಲ್ಲಿಯಂತೂ ಬಂಡುಪದಗಳನ್ನು ಕೇಳಿಸಿಕೊಳ್ಳಲಿಕ್ಕೆಂದೇ ಬೇರೆ ಊರಿನ ಹರೆಯದವರ ಜೊತೆಗೆ ದೊಡ್ಡವರೂ ಸೇರಿಬಿಡುತ್ತಿದ್ದರು. ಆಗೆಲ್ಲ ಬೇಕೆಂದೇ ಹನುಮಂತಣ್ಣ ಬಂಡುಪದಗಳನ್ನು ಬೇಗ ಎತ್ತಿಕೊಳ್ಳದೆ ಅಮ್ಮನ ಹೊಗಳಿಕೆ ಪದಗಳನ್ನು ಬಹಳ ಹೊತ್ತು ಹಾಡುತ್ತಿದ್ದ. ತಿರುಗಾ ಬರುಗಾ ಹೊಗಳಿಕೆ ಪದಗಳನ್ನೇ ಹಾಡುತ್ತಿದ್ದರೆ, ಬಂಡುಪದಗಳಿಗೇ ಕಾಯುತ್ತಿದ್ದವರು ಕಾಯುತ್ತಿದ್ದರೇ ಹೊರತು ಬಂಡುಪದ ಹಾಡು ಅಂತಾ ಯಾರೂ ಹನುಮಂತಣ್ಣನಿಗೆ ಹೇಳುತ್ತಿರಲಿಲ್ಲ. ಹಾಗೆ ಯಾರಾದರೂ ಕೋರಿಕೊಂಡರೆ ಜೊತೆಯವರೆಲ್ಲ ‘ಓ ಬಾಯಿಗೆ ಬಂದೈತೆ ಕಣಪ್ಪಾ’ ಅಂತಾ ಆಡಿಕೊಳ್ಳುತ್ತಿದ್ದರು. ಉತ್ಸವದ ಮೆರವಣಿಗೆಯಲ್ಲಿ ಬರುತ್ತಿದ್ದ ಲಕ್ಕಮ್ಮನೇ ಮುಂದಕ್ಕೆ ಬರದೆ ನಿಂತುಬಿಡುತ್ತಿದ್ದುದೂ ಉಂಟು.
ಆಗ ಆಸಾದಿ ಮುಂದೆ ಬಂದು ಬಂಡುಹಾಡು ಹಾಡಿ ಲಕ್ಕಮ್ಮನನ್ನು ಮುಂದಕ್ಕೆ ಬರಲು ಬೇಡಿಕೊಳ್ಳುತ್ತಿದ್ದ. ಅದೇನು ಲಕ್ಕಮ್ಮನೇ ಆ ಹಾಡುಗಳನ್ನು ಕೇಳಬೇಕೆಂದು ಬಯಸುತ್ತಿದ್ದಳೋ ಅಥವಾ ಮೆರವಣಿಗೆಯಲ್ಲಿ ಲಕ್ಕಮ್ಮನನ್ನು ಹೊತ್ತಿದ್ದವರು ಬಯಸುತ್ತಿದ್ದರೋ ತಿಳಿಯುತ್ತಿರಲಿಲ್ಲ. ಕಡೆಗೆ ದಡಿಮೀಸೆ ತಳವಾರ ಹನುಮನಾಯಕ ‘ಅದ್ಯಾಕ್ಲ ಆಸಾದಿ, ಈ ಉಪ್ಪು ಉಳಿ ಇಲ್ದೇ ಇರೋವ್ನೇ ಎಷ್ಟೊತ್ತು ಆಡ್ತಿಯಲಾ, ಬಂಡುಪದ ಆಡದಿದ್ರೆ ಅದ್ಯಾವ ಸೀಮೆ ಆಸಾದಿನಲಾ ನೀನು?’ ಎಂದು ಹನುಮಂತಣ್ಣನ ಕ್ಯಾಣವನ್ನು ಕೆಣಕಿದಾಗ ನಗುತ್ತಲೇ ಅವನು ‘ಆಯ್ತು ತಗಳಣ್ಣೋ ನೀನು ಹಂಗನ್ನಲೀ ಅಂತಲೇ ಕಾದಿದ್ದೆ’ ಅನ್ನುತ್ತ ಬಂಡುಪದಗಳನ್ನು ಹಾಡಲು ಶುರು ಮಾಡುತ್ತಿದ್ದ. ಅವುಗಳನ್ನು ಸರಿಯಾಗಿ ಕೇಳಿಸಿಕೊಳ್ಳಲು ಮಾತ್ರ ಎಲ್ಲ ಯಂಗೆಂಗೋ ಜಾಗ ಮಾಡಿಕೊಂಡು ಹನುಮಂತಣ್ಣನ ಸುತ್ತ ಜಮಾಯಿಸಿಬಿಡುತ್ತಿದ್ದರು. ಕೆಲವರಂತೂ ಬಂಡುಹಾಡುಗಳನ್ನು ಕೇಳಲಿಕ್ಕಾಗಿಯೇ ಅಂತರಗಟ್ಟೆ, ಆಸಂದಿ, ಹೆಸರಳ್ಳಿ, ಶೆಟ್ಟಿಕೆರೆ, ಮಣಕಿಕೆರೆ ಮುಂತಾದ ಆಸಾದಿಗಳಿರುವ ಜಾತ್ರೆಗಳನ್ನು ತಿರುಗುತ್ತಿದ್ದುದೂ ಉಂಟು.
ಇದನ್ನು ಓದಿದ್ದೀರಾ?: ಬಾ.ಹ. ರಮಾಕುಮಾರಿ ಅವರ ಕತೆ | ನಿಯೋಗ
ವರಗಲ ಗುಡಿಯಲ್ಲಿ ಸೇವೆ ಮುಗಿಸಿದ ಹನುಮಂತಣ್ಣನಿಗೆ ಇಂದ್ಯಾಕೋ ಮನೆಗೆ ಹೋಗುವ ತವಕ ಬರಲಿಲ್ಲ. ಒಂದು ವಾರದಿಂದ ಹೆಂಡ್ರು ಕೆಂಪಮ್ಮ ‘ಇನ್ನೆಲ್ಲಾರ ಬಂಡುಪದ ಹಾಡಿದರೆ ಮಗನ ಕರಕೊಂಡು ಎತ್ತಗಾದರೂ ವಂಟೋಯ್ತಿನಿ’ ಎಂದು ನೋಟೀಸು ಕೊಟ್ಟಿದ್ದಳು. ಹನುಮಂತಣ್ಣ ಕೆಂಪಮ್ಮನ ಮದುವೆಯಾದ ಹೊಸದರಲ್ಲಿ ಅವಳ ಗೆಣೆಕಾತಿಯರು ಇವಳನ್ನು ಕಂಡು ಅಸೂಯೆ ಪಡುತ್ತಿದ್ದುದೂ ಉಂಟು. ಹನುಮಂತಣ್ಣ ಒಳ್ಳೆ ಹೋರಾದ ಹುಡುಗ. ದನಿಯೆತ್ತಿ ಹಾಡಿದರೆ ಅರ್ಧಮೈಲಿಗೆ ಕೇಳುವಂತ ಕಂಠ. ಮೊದ ಮೊದಲು ಎಲ್ಲ ಹಿತವಾಗೇ ಇತ್ತು. ಆದರೆ ಬಡತನವನ್ನೆ ಹಾಸಿ ಅದನ್ನೆ ಹೊದ್ದು ಬದುಕಿ ಅವಳಿಗೂ ರೋಸಿ ಹೋಗಿತ್ತು. ಹುಟ್ಟಿದ ಒಂದು ಗಂಡು ಮತ್ತೊಂದು ಹೆಣ್ಣು ಮಕ್ಕಳಲ್ಲಿ, ಹೆಣ್ಣು ಕೂಸು ಎರಡನೆಯ ವರುಷದಲ್ಲಿ ಯಾವುದೋ ಕಾಯಿಲೆಗೆ ತುತ್ತಾಗಿ ತೀರಿಕೊಂಡಿತು. ‘ನಿನ್ನ ಮಗಾ ಬಲೇ ಬುದ್ಧಿವಂತ ಅವುನ್ನ ಸ್ಕೂಲ ಬಿಡಿಸಬೇಡ’ ಎಂದು ಶಾಲೆಯ ಮೇಷ್ಟ್ರು ಹನುಮಂತಣ್ಣನನ್ನು ಕರೆಸಿ ಹೇಳಿದಾಗ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದ ಅವನು ಕೆಂಪಮ್ಮನಿಗೆ ಆ ಮಾತನ್ನು ವರ್ಗಾಯಿಸಿದ್ದ. ಕೆಂಪಮ್ಮ ಆ ಮಾತನ್ನು ಎಚ್ಚರದಿಂದ ಸಾಕಿ ಬೆಳೆಸಿದ್ದಳು.
ಈಗ ಮಗಾ ದೊಡ್ಡಮೇಟಿಕುರ್ಕೆಗೆ ಕಾಲೇಜಿಗೆ ಹೋಗಿಬರುತ್ತಿದ್ದ. ‘ನಿನ್ನ ಆಸಾದಿಸ್ಯಾವೆ ನಿನ್ನ ಕಾಲಕ್ಕೆ ಮುಗಿದುಹೋಗಲಿ ಅವನಿಗೆ ಎಂದಾದರೂ ಹಲಗೆ ಮುಟ್ಟಿಸೀಯ’ ಎಂದು ಹನುಮಂತಣ್ಣನಿಗೆ ತಾಕೀತು ಮಾಡಿದ್ದ ಕೆಂಪಮ್ಮ ಮಗ ಹಲಗೆಯನ್ನು ಮುಟ್ಟದಂತೆ ನೋಡಿಕೊಂಡಿದ್ದಳು. ಅದಕ್ಕೆ ಮತ್ತೊಂದು ಕಾರಣವೂ ಇತ್ತು. ಕಾಲೇಜಿಗೆ ಸೇರಿದ ಹೊಸದರಲ್ಲಿ ತುಂಬಾ ಉತ್ಸಾಹದಿಂದ ಕುಣಿಕುಣಿಯುತ್ತ ಕಾಲೇಜಿಗೆ ಹೋಗಿಬರುತ್ತಿದ್ದವನು ಒಂದು ದಿನ ಬಂದವನೇ ಬೇಜಾರಿನಿಂದ ಅವ್ವನ ಹತ್ತಿರ ತನ್ನ ಸಂಕಟವನ್ನು ಹೇಳಿಕೊಂಡಿದ್ದ. ಕಾಲೇಜಿನ ಕೆಲವು ಹುಡುಗರು ಇವನು ಆಸಾದಿಯ ಮಗನೆಂದು ಗೊತ್ತಾಗಿ ಗುಟ್ಟಾಗಿ ಬಂಡುಪದ ಹೇಳಲು ಒತ್ತಾಯಿಸಲಾರಂಭಿಸಿದ್ದರು. ಕೆಲವು ಬಂಡುಪದಗಳು ತನಗೆ ಬರುತ್ತಿದ್ದರೂ ಗೊತ್ತಿಲ್ಲ ಎಂದು ಹೇಳಿ ತಪ್ಪಿಸಿಕೊಂಡಿದ್ದ. ಆದರೆ ಆ ಹುಡುಗರೇ ಅನೇಕ ಬಂಡುಪದಗಳನ್ನು ತುಂಡು ತುಂಡಾಗಿ ಕಲಿತು ಇವನ ಎದುರಿಗೇ ಹಾಡುತ್ತಿದ್ದರು. ಆಗೆಲ್ಲ ಇವನಿಗೆ ಅಪಮಾನವಾದಂತೆನಿಸಿ ಏನು ಮಾಡಲೂ ತೋಚದೆ ಅವ್ವನ ಹತ್ತಿರ ಹೇಳಿಕೊಂಡು ಅತ್ತಿದ್ದ. ಹನುಮಂತಣ್ಣನಿಗೆ ಇಂತಹ ಸಂಗತಿಗಳಲ್ಲಿ ಬೇಜಾರಾಗುವುದು ಏನಿದೆ ಎನ್ನಿಸುತ್ತಿತ್ತೇ ಹೊರತು ಬಂಡುಪದಗಳು ಬೇಡ ಎಂದು ಎಂದೂ ಅನ್ನಿಸಿರಲಿಲ್ಲ.
ಅಮ್ಮನ ಹಬ್ಬಕ್ಕೆ ಸಾರಿಕೊಂಡು ಬಂದ ಆಸಾದಿಗೆ ಈ ಸಲದ ಅಮ್ಮನ ಹಬ್ಬ, ಜಾತ್ರೆ ಬಲು ವಿಶೇಷ ಎಂಬುದು ಗೊತ್ತಿತ್ತೇ ಹೊರತು ಯಾವ ರೀತಿ ವಿಶೇಷ ಎಂಬುದರ ಅರಿವಿರಲಿಲ್ಲ. ಈ ಸಲದ ಜಾತ್ರೆಯಲ್ಲಿ ಹಾಡಲು ಇನ್ನೂ ಚೆನ್ನಾದ ಬಂಡುಪದಗಳನ್ನು ನೆನಪಿನಾಳದಿಂದ ಬಗೆದು ತೆಗೆಯಲಾರಂಭಿಸಿದ. ಅಪ್ಪ ಕಣುಮಣ್ಣ ಹಾಡುತ್ತಿದ್ದ ಬಂಡುಹಾಡುಗಳು ಈಗ ಅದೆಷ್ಟೋ ಮರೆತುಹೋಗಿದ್ದವು. ಆಗಾಗ್ಗೆ ಹಾಡುತ್ತಿದ್ದರೆ ನೆನಪಿನಲ್ಲಿ ಉಳಿಯುತ್ತಿದ್ದವು. ಆದರೆ ಅವುಗಳನ್ನು ಹಾಡುವ ಸಂದರ್ಭಗಳೇ ಕಡಿಮೆಯಾಗಿ ಅವೆಲ್ಲ ಮರೆವಿನಲ್ಲಿ ಮುಚ್ಚಿ ಹೋಗಿದ್ದವು. ಈ ಸಲ ಜಾತ್ರೇಲಿ ಅವುನ್ನೆಲ್ಲ ಮತ್ತೆ ಉಜ್ಜಿ ಬೆಳಗಿ ಬಳಸಬೇಕೆಂದು ಅವುಗಳಿಗೆ ಗೆಪ್ತಿಯ ಬಲೆ ಬೀಸಹತ್ತಿದ.
ಇದನ್ನು ಓದಿದ್ದೀರಾ?: ಬರಗೂರು ರಾಮಚಂದ್ರಪ್ಪ ಅವರ ಕತೆ | ಕ್ಷಾಮ
ಅಪ್ಪ ಕಣುಮಣ್ಣನಿಗೆ ತನ್ನ ಮಗನನ್ನು ಈ ಸುತ್ತಿನಲ್ಲಿ ಬಲು ಅಪರೂಪದ ಆಸಾದಿಯನ್ನಾಗಿ ಮಾಡಬೇಕೆಂಬ ಆಸೆ ಇತ್ತು. ಅವನಿಗಾಗಿ ತಾನೇ ಪರಮಾಸಿ ಕೋಣವೊಂದರ ಚರ್ಮ ತಲಾಷು ಮಾಡಿ ತಂದು ಕೈಯಾರೆ ಹದಮಾಡಿ ಹಲಗೆ ಕಟ್ಟಿಸಿದ್ದ. ಸೂಡಿ ತೋರಿಸಿ ತುಸುವೇ ಬಿಸಿಮಾಡಿದರೆ ಸಾಕು ಕಣಿ ಕಣಿ ಎನ್ನುತ್ತಿತ್ತು. ಚಿಗುರು ಮೀಸೆಯ ಎತ್ತರದ ಆಳು ಹನುಮಂತ. ಅವನು ಅಮ್ಮನ ಎದುರಿಗೆ ನೇರವಾಗಿ ನಿಂತು ಅವಳನ್ನೇ ನೋಡುತ್ತ ಪದ ಹಾಡುತ್ತಿದ್ದರೆ ಗುಡಿಗೆ ಬರುತ್ತಿದ್ದ ಹೆಣ್ಣುಮಕ್ಕಳೆಲ್ಲ ಅವನನ್ನು ಕದ್ದೂ ಕದ್ದೂ ನೋಡುತ್ತಿದ್ದುದನ್ನು ಗಮನಿಸಿದ್ದ. ಆಗಾಗ್ಗೆ ಇಬ್ಬರೂ ಜೋಡಿಯಾಗಿ ನಿಂತು ಅಮ್ಮನ ಎದುರಿಗೆ ಹಲಗೆ ಬಾರಿಸಿ ಪದಗಳನ್ನು ಹೇಳುತ್ತಿದ್ದುದೂ ಉಂಟು. ಆದರೆ ಬಂಡುಪದಗಳನ್ನು ಎತ್ತಿಕೊಂಡಾಗ ಮಗ ಹಿಂಜರಿಯುತ್ತಿದ್ದುದನ್ನು ಗಮನಿಸಿದ್ದ. ಕೆಲವು ಪದಗಳನ್ನು ಮತ್ತೆ ಮತ್ತೆ ಹಾಡಿದಾಗಲೂ ಮಗಾ ಇಡಿಯಾಗಿ ಹಾಡದೆ ಕೆಲವು ಪದಗಳನ್ನು ಗೊನಗಿಬಿಡುತ್ತಿದ್ದ. ಅದರಲ್ಲೂ ತಾನು ಮೆಚ್ಚಿ ಹಾಡುತ್ತಿದ್ದ ಪದಗಳನ್ನು ಹೀಗೆ ಗೊನಗುವುದು ಅವನಿಗೆ ಇಷ್ಟವಾಗುತ್ತಿರಲಿಲ್ಲ. ಒಂದುಸಲವಂತೂ,
ಅತ್ತೋದ್ರೆ ಮೂರು ತಿಂಗಳು ಇತ್ತೋದ್ರೆ ಆರು ತಿಂಗಳು ಹುತ್ತದ ಕೋವೆಯಂಗೆ ನಿನ
ಹುತ್ತದ ಕೋವೆಯಂಗೆ ನಿನ ಚಿಕ್ಕಮ್ಮ ನೋಡಿದ್ರೆ ನಗುತಾಳಮ್ಮ
ಕೂಡುವಾಗ ಏನಂತು ಬೆಳಗಿನ ಜಾವ ಬಾರ ನನ
ಬೆಳಗಿನ ಜಾವ ಬಾರ ನನ ಅಮ್ಮಯ್ಯ ನಿನಗೆ ಮೂರು ತಿಂಗಳು ಆಯ್ತಮ್ಮ.
ಇವೇ ಪದಗಳನ್ನು ಎರಡೆರಡು ಸಲ ಹಾಡಿದರೂ ಯಾವ ಜಾಗದಲ್ಲಿ ಮೈ ಜುಮ್ಮೆನಿಸಿ ನುಡಿಯಬೇಕೋ ಅಲ್ಲೇ ಮುದುಡಿಕೊಂಡುಬಿಡುತ್ತಿದ್ದ. ಅದಕ್ಕೋ ಏನೋ ಒಂದ್ಸಲ ಅಂತರಗಟ್ಟಮ್ಮನ ಪರಿಸೆಗೆ ಹೋಗಿ ಬಾರೋ ಮಗಾ ಎಂದು ಅಂತರಗಟ್ಟಮ್ಮನ ಜಾತ್ರಿಗೆ ಕಳಿಸಿದ್ದ. ಹೊರಟು ನಿಂತಾಗ ಹಲಗೆ ತಗಂಡೋಗು ಮಗಾ, ಅಂತರಗಟ್ಟೆ ಮಾರಿ ಅಂದ್ರೆ ನಮಗೆ ನೆಂಟರಿದ್ದಂಗೆ. ನೆಂಟರ ಮನಿಗೆ ಬರಿಗೈಲಿ ಹೋಗಬಾರದು ಅಂತಾ ನೆಂಟನೂ ಗೆಳೆಯನೂ ಆಗಿದ್ದ ಚೆನ್ನಣ್ಣನ ಜೊತೆಗೆ ಹಲಗೆ ನುಡಿಸಲು ಕಳಿಸಿದ್ದ. ಚೆನ್ನಣ್ಣ ಬಂಡುಪದಗಳ ಕಣಜ. ಕಣದ ನಡುವಿನ ಮೇಟಿಯಂಗೆ ತೆಳ್ಳಗೆ ಇದ್ದ ಚೆನ್ನಣ್ಣ ಅಮ್ಮನ ಅಂಗಳದ ನಡುವೆ ನಿಂತು ಬಂಡುಪದ ತೆಗೆದಾ ಅಂದ್ರೆ ಗುಡಿಯ ಸುತ್ತ ಪರಿಸೆಯೇ ನೆರೆದುಬಿಡುತ್ತಿತ್ತು. ಅವನ ಜೊತೆ ಜೋಡು ಹಲಗೆಗೆ ನಿಲ್ಲಲ್ಲು ಹನುಮಂತನಿಗೆ ಬಲೇ ಖುಷಿ. ಅಪ್ಪನ ಜೊತೆಗೆ ಹಾಡಲು ಇರುತ್ತಿದ್ದ ಹಿಂಜರಿಕೆ ಇಲ್ಲಿ ಇಲ್ಲವಾಗುತ್ತಿತ್ತು. ಇಬ್ಬರೂ ಜೋಡುದನಿಯಲ್ಲಿ ದನಿ ತೆಗೆದರೂ ಅಂದ್ರೆ ಹನುಮಂತನ ಮೈ ಚಳಿಯೆಲ್ಲಾ ಬಿಟ್ಟು ಹೋಗುತ್ತಿತ್ತು.
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ
ಆ ಘಟ್ಟ ಈ ಘಟ್ಟ ನೆಗೆದು ಬಿದ್ದರೆ ನಾಗರ ಘಟ್ಟ ಮುಂದೋಡೋ ಹುಡುಗೀಗೆ
ಮುಂದೋಗೋ ಹುಡುಗೀಗೆ ಕರಿಯವ್ವ ಹಿಂದೆ ಬರೋ ಹುಡುಗಿಗೆ.
ದಾಸನಳ್ಳಿ ಹೆಣ್ಣೆ ಜಾರಿ ಬಿದ್ದರೆ ಮಣ್ಣೆ ಶೀಮೊಗ್ಗದೆಣ್ಣೆ
ಶೀಮೊಗ್ಗದೆಣ್ಣೆ ಆದಾರೆ ಅಂತರಗಟ್ಟೆ ಹೆಣ್ಣೆ ಅರಗಿಣಿ.
ಇಬ್ಬರು ಹೆಂಡಿರ ಮೇಲೆ ಕದ್ದು ಸೂಳೆ ಹೋದ ಕಬ್ಬಿಣದ ಕದವ ಮುರ್ಕಂಡು
ಕಬ್ಬಿಣದ ಕದವ ಮುರ್ಕಂಡು/ ತಿಮ್ಮಯ್ಯ ಅವನು ಇದ್ದಾನು ಸೂಳೆ ಮನೆಯಾಗೆ.
ಏರಿಯ ಮೇಲೊಂದು ಸಾರಂಗ ಮೆಯ್ತೈತಿ ಸಾರಂಗ ಮೆಯ್ದು ಮಿಕ ಮೆಯ್ದು
ಸಾರಂಗ ಮೆಯ್ದು ಮಿಕ ಮೆಯ್ದು / ಪಿಳೇಗಿ ನಮ್ಮ ಕೋರುಡುಗೀರ ಗಮ್ಮೆಂದು.
ಇಂತಾ ಪದಗಳಂತೂ ಬಲೇ ಸಂಭ್ರಮದಿಂದ ಬಂದುಬಿಡುತ್ತಿದ್ದವು. ಚೆನ್ನಣ್ಣನ ನೆಂಟಸ್ತಿಕೆ ಮಾಡುವ ಮೊದಲು ಅಪ್ಪ ಅವನು ಗೆಳೆಯರು. ಚೆನ್ನಣ್ಣ ಅಪ್ಪನ ವಾರಿಗೆಯವನಾದರೂ ಹನುಮಂತನ ಜೊತೆ ಯಾವ ಎಗ್ಗೂ ಇಲ್ಲದೆ ಅದೇ ವಯಸ್ಸಿನವನ ತರಾ ಮಾತಾಡುತ್ತಿದ್ದ. ಹನುಮಂತ ಒಂದುಸಾರಿ ಚೆನ್ನಣ್ಣನ್ನ, ‘ಮಾವೋ, ಈ ಬಂಡುಪದ ಯಾಕೆ ಆಡಬೇಕು? ಇವುನ್ನೇ ಯಾಕೆ ಆಡುಸ್ತಾರೆ?’ ಎಂದು ಕೇಳಿದ್ದ, ಅದಕ್ಕೆ ಅವನು, ‘ನೀನು ಸರಿಯಾದ ಅಳಿಯ ಕಣೋ, ಕೇಳ್ತಾ ಕೇಳ್ತಾ ಬುಡಕ್ಕೆ ಬಂದೆ ನೋಡು’, ‘ಅಲ್ಲಾ ಕಣ್ ಮಾವೋ, ದೇವ್ರ ಎದುರಿಗೆ ಇವು ಬೇಕಾ?’ ಅಂದದ್ದಕ್ಕೆ, ‘ಇವು ದೇವ್ರಿಗೆ ಅಂತಾ ಅಲ್ಲಾ ಕಣೋ, ಎಲ್ಲ ಮನುಸ್ರಿಗೂ ಬೇಕು. ಎಲ್ಲರ ಮನಸ್ಸಿಗೂ ಬೇಕೂ. ಇವೊಂಥರಾ ಪಾತ್ರೆ ತೊಳೆದು ಬೆಳಗಕ್ಕೆ ಕಟಗಾ ಅಂತಾ ಇರಲ್ವಾ ಆ ತರಾ. ದಿನಾ ಎಲ್ಲಾನೂ ಉಜ್ಜಿ ಬೆಳಗಿ ಪಳಪಳಾ ಹೊಳಿಯಂಗೆ ಇಟ್ಕಬೇಕು. ಇಲ್ದೇ ಹೋದ್ರೆ ಎಲ್ಲ ಕಿಲುಬು ಇಡಿಯುತ್ತೆ. ಗುಡೀ ಕಳಸಾ ಆಗಲೀ ಮನುಸ್ರ ಮನಸೇ ಆಗಲೀ ಎಲ್ಲಾನೂ ಚೆನ್ನಾಗಿ ದಿನಾ ತೊಳೀಬೇಕು. ಸಂಸಾರ ಅಂದ್ರೆ ಹರಿಯೋ ಕಾಲುವೆ ಇದ್ದಂಗೆ. ಕಸಕಡ್ಡಿ ಸೇರ್ತಿರ್ತವೆ, ಹುಲ್ಲು ಜೊಂಡು ಬೆಳ್ಕತಿರ್ತವೆ. ಅವುನ್ನೆಲ್ಲ ತಗದು ನೀರ ಹರಿಬಿಡಬೇಕು. ಕಟ್ಕಂಡಿರೋ ಗದರು ಹೊಂಟೋಗಬೇಕು. ಆಗ ಹೊಸನೀರು ಬತ್ತದೆ’ ಎಂದು ಹೇಳಿದ್ದ.
ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ
ಅದಕ್ಕೆ ಹನುಮಂತ, ‘ಅವಳು ದೇವರಲ್ವ? ಅವಳೆದುರಿಗೆ ಅವಳುನ್ನ ಹೊಗಳೋ ಪದಾ ಹಾಡಿದರೆ ಸಾಕಲ್ವ?’ ಅಂತಾ ಕೇಳಿದ್ದ. ಅದಕ್ಕೆ ಇವನನ್ನೆ ದಿಟ್ಟಿಸಿ ನೋಡಿದ ಚೆನ್ನಣ್ಣ, ‘ಅದು ಅಂಗಲ್ಲ ಕಣ್ಲಾ, ಅಮ್ಮ ಬೇರೇವ್ರಿಗೆ ದೇವರು ಕಣ್ಲಾ ನಮಿಗೆ ಮಾತ್ರ ಸಂಬಂಧೀಕಳು, ಸಂಬಂಧದಿಂದಲೇ ಸಂತೋಸ ಆನಂದ ಕಣೋ. ಅದರಲ್ಲೂ ಗಂಡು ಹೆಣ್ಣಿನ ಸಂಬಂಧ ಐತಲ್ಲಾ. ಅದು ಪರಮ ಐಭೋಗ. ಅಂತಾ ಐಭೋಗದಿಂದ ಅವಳನ್ನು ಸುಂಗರಿಸಿದಾಗಲೇ ಆನಂದವಾಗಿ ಅವಳು ಒಲಿಯೋದು. ಅವಳನ್ನು ಒಲಿಸಿಕೊಳ್ಳಾಕೆ ಬಂಡುಪದಗಳು ಬೇಕೇಬೇಕು. ಅವನ್ನು ಹಾಡೋವಾಗ ಅವಳ ಮಕಾ ನೋಡಿದೀಯಾ. ಅಂಗೇ ಎದ್ದುಬರೋ ಹಂಗೆ ಕಾಣ್ತದೆ.’ ಹನುಮಂತನಿಗೆ ಅದೇನೋ ಸರಿ ಅನ್ನಿಸಿದರೂ ‘ದೇವಾನು ದೇವತೆಗಳನ್ನೆಲ್ಲ ಹೆತ್ತು ಸಾಕಿದೋಳ ಎದುರಿಗೆ ನಿಂತುಕಂಡು ಹಿಂಗೆ ಅನ್ನೋದು ಆಡೋದು ಸರಿಯಾ?’ ಅಂದ. ‘ನಿಜಾ ಕಣೋ ಅವಳೇನೋ ದೇವಾನುದೇವತೆಗಳನ್ನೆಲ್ಲ ಹೆತ್ತೋಳಿರಬೈದು. ಆದರೆ ನಮಿಗೆ ಅವಳು ಕುಲದ ಸಂಬಂಧ. ನಮ್ಮ ಕುಲಾ ಮುಂದುವರಿಸೋಳು. ಕುಲಾ ಬೆಳೀಬೇಕೋ ಬೇಡವೋ?’ ಎಂದು ಒಗಟಿನಂತೆ ಮಾತಾಡಿ ಒಂದಷ್ಟು ಬಂಡುಪದಗಳನ್ನು ಕಲಿಸಿ ಕಳಿಸಿದ್ದ. ಒಟ್ಟಿನಲ್ಲಿ ತಾವು ಮಾಡುತ್ತಿರುವುದು ದೇವರು ಮೆಚ್ಚುವ ಕೆಲಸ, ಅದರಿಂದ ಅಮ್ಮನಿಗೆ ಆನಂದವಾಗ್ತದೆ. ಲೋಕ ಸುಬಿಕ್ಷವಾಗಿರ್ತದೆ ಎಂದು ಗೊತ್ತಾಗಿತ್ತು. ಒಂಥರಾ ಸಮಾಧಾನವಾಗಿತ್ತು.
ಪರಿಷೆಯ ಹಿಂದಿನ ದಿನ ಬಂದ ಐದಾರು ಲಾರಿಗಳು ಅಮ್ಮನಗುಡಿಯ ಮುಂದೆ ದೊಡ್ಡ ದೊಡ್ಡ ಶಾಮಿಯಾನಗಳನ್ನೂ ಸಾವಿರಾರು ಕುರ್ಚಿಗಳನ್ನೂ ಇಳಿಸಿ ಹೋದವು. ಹಾರೆ ಪಿಕಾಸಿಗಳ ಸಮೇತ ಬಂದ ಹತ್ತಾರು ಆಳುಗಳು ಗುಡಿ ಮುಂದಿನ ಬಯಲನ್ನೆಲ್ಲ ಕವುಚಿಕೊಳ್ಳುವ ಹಾಗೆ ಬಣ್ಣಬಣ್ಣದ ಶಾಮಿಯಾನ ಏರಿಸಿದರು. ನಡೂ ಮಧ್ಯಕ್ಕೆ ಸರಿಯಾಗಿ ಹತ್ತಾರು ಗುಂಡಿಗಳನ್ನು ಮಾಡಿ ಸುತ್ತ ಕಟ್ಟೆ ಕಟ್ಟಿದರು. ಅದರ ಹಿಂದಕ್ಕೆ ನೂರಾರು ಸಾಲುಗಳಲ್ಲಿ ನೀಲಿ ಕೆಂಪು ಕುರ್ಚಿಗಳನ್ನು ಹಾಕಿ ಝಗಮಗಿಸುವ ದಪ್ಪ ದಪ್ಪ ಲೈಟುಗಳನ್ನು ಕಟ್ಟಿ ಕೊನೆಯ ಲಾರಿಯ ತುಂಬ ತುಂಬಿಕೊಂಡು ಬಂದಿದ್ದ ಬೃಹತ್ತಾದ ಪ್ಲೆಕ್ಸ್ ಬೋರ್ಡುಗಳನ್ನು ಊರಿನ ಮುಖ್ಯ ಜಾಗಗಳಲ್ಲಿ ನಿಲ್ಲಿಸಿದರು. ಹೂವುಗಳಿಂದ ಅಲಂಕರಿಸಿದ್ದ ಒಂದು ದೊಡ್ಡ ಬೋರ್ಡನ್ನು ದೇವಸ್ಥಾನದ ಎದುರಿಗೆ ನಿಲ್ಲಿಸಿದರು. ಅದನ್ನೆಲ್ಲ ಸಂಭ್ರಮದಿಂದ ಗುಂಪು ಕಟ್ಟಿಕೊಂಡು ನೋಡುತ್ತಿದ್ದ ಊರಿನ ಸಣ್ಣಪುಟ್ಟ ಮಕ್ಕಳಲ್ಲಿ ಕೆಲವರು ಕಷ್ಟಪಟ್ಟು ಆ ಬೋರ್ಡಿನಲ್ಲಿದ್ದ ಅಕ್ಷರಗಳನ್ನು ಕೂಡಿಸಿ ಕೂಡಿಸಿ ಓದುವ ಪ್ರಯತ್ನದಲ್ಲಿದ್ದರು. ಅಂತೂ ಕಡೆಗೆ ಅದರಲ್ಲಿ, ‘ವಲ್ಮೀಕೋದ್ಭವೆ ಆದಿಶಕ್ತಿ ಶ್ರೀ ಲಕ್ಷ್ಮೀ ಪರಮೇಶ್ವರಿ ಅಮ್ಮನವರ ದೇವಸ್ಥಾನ’ –ಇಂಗಂತ ಬರೆದಿದ್ದಾರೆ ಎಂಬುದು ಎಲ್ಲರಿಗೂ ಶ್ರುತವಾಯಿತು. ಇದನ್ನೆಲ್ಲ ಮಾಡಿ ತಮ್ಮ ಕೆಲಸ ಮುಗಿಯಿತೆಂಬಂತೆ ಅವರೆಲ್ಲ ಹೊರಟು ಹೋದರು.
ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…
ಜಾತ್ರೆ ದಿವಸ ಬೆಳಗಿನ ಜಾವಕ್ಕೇ ಎದ್ದ ಹನುಮಂತಣ್ಣ, ಬೇಗ ಬೇಗನೆ ನೀರು ಕೊಯ್ದುಕೊಂಡು ಹಲಗೆಯನ್ನು ನೀರೊಲೆಯ ಬೆಂಕಿಗೆ ಹಿಡಿದು ಅದು ಹದವಾಗಿ ತಮ ತಮ ತಮ ಎಂದು ನುಡಿದಾಗ ಅದು ತನ್ನನ್ನೆ ಮಾತನಾಡಿಸಿದಂತಾಗಿ ಮನಸ್ಸು ಆರಳಿತು. ಎಂಗೇ ಆತುರ ಮಾಡಿದರೂ ಗುಡಿಯ ಹತ್ತಿರಕ್ಕೆ ಬರುವ ಹೊತ್ತಿಗೆ ಆಗಲೇ ಬೆಳಗಾಯಿತ್ತು. ಬಂದು ನೋಡುತ್ತಾನೆ! ಇದೇನು ಅಮ್ಮನ ಗುಡಿಯಾ ಇಲ್ಲವೇ ಬೇರೆಲ್ಲಿಗಾದರೂ ಬಂದೆನಾ ಎಂದು ಅನುಮಾನ ಬರುವ ಹಾಗೆ ಎಲ್ಲ ಬದಲಾಗಿ ಹೋಗಿತ್ತು. ವಿಶಾಲವಾಗಿ ಕಟ್ಟಿದ್ದ ಶಾಮಿಯಾನ ಪೆಂಡಾಲಿನ ನಡುವೆ ಮಾಡಿದ್ದ ಗುಂಡಿಗಳಲ್ಲಿ ಬೆಂಕಿ ಧಗ ಧಗಾ ಉರಿಯುತ್ತಿತ್ತು. ಅದರ ಸುತ್ತ ಕೆಂಪು, ಕಾವಿಬಣ್ಣದ ಶಾಲುಗಳನ್ನು ಸುತ್ತಿಕೊಂಡಿದ್ದ ಬ್ರಾಹ್ಮಣರು ಬೆಂಕಿಗೆ ಏನೇನೋ ಹಾಕುತ್ತಿದ್ದರು. ಅಲ್ಲಿ ಹೊಂದಿಸಿಟ್ಟಿದ್ದ ಮೈಕುಗಳಿಂದ ಬರುತ್ತಿದ್ದ ಮಂತ್ರದಪದಗಳು ಊರನ್ನೆಲ್ಲ ಕವುಚಿಕೊಂಡಿದ್ದವು. ಸಮಸ್ಯೆಯೆಂದೆರೆ ತಾನು ಈಗ ಎಲ್ಲಿಯವರೆಗೆ ಹೋಗಬಹುದು ಮತ್ತು ಎಲ್ಲಿ ನಿಂತು ಹಲಗೆ ಬಾರಿಸಬೇಕು ಎಂಬುದು ಗೊತ್ತಾಗದೆ ಹನುಮಂತಣ್ಣನಿಗೆ ಪರದಾಟಕ್ಕಿಟ್ಟುಕೊಂಡಿತು. ಸುತ್ತ ಗಮನಿಸಿ ನೋಡಿದಾಗ ಉರುಮೆ, ಮೌರಿ, ದೋಣಿನವರು ಕೂಡ ಪೆಂಡಾಲಿನಿಂದ ದೂರದಲ್ಲಿ ನಿಂತು ವಾದ್ಯ ಮಾಡಬೇಕೆ ಬೇಡವೆ ಎಂಬ ಗೊಂದಲದಲ್ಲಿದ್ದರು. ಏಕೆಂದರೆ ಒಳ್ಳೆ ಬಿಳಿ ಬಿಳಿ ಬಟ್ಟೆ ಹಾಕಿಕೊಂಡು ಹಳದಿ ಅಂಗವಸ್ತ್ರಗಳನ್ನು ಹೆಗಲ ಮೇಲೆ ಹಾಕಿಕೊಂಡು ದುಂಡ ದುಂಡಗೆ ಇದ್ದ ನಾಗಸ್ವರ ಡೋಲಕ್ಕಿನವರು ಅಮ್ಮನ ಗುಡಿ ಬಾಗಿಲಲ್ಲಿ ನಿಂತು ನುಡಿಸುತ್ತಿದ್ದರು. ಜೊತೆಗೆ ಮಂತ್ರಗಳನ್ನು ಕಕ್ಕುತ್ತಿದ್ದ ಹತ್ತಾರು ಮೈಕುಗಳ ಅಬ್ಬರದ ಜೊತೆಗೆ ಪೈಪೋಟಿ ಮಾಡುವುದು ಸುಲಭದ ಸಂಗತಿಯಲ್ಲ ಎಂಬುದು ಅವರೆಲ್ಲರಿಗೆ ಅರಿವಾಗಿತ್ತು. ಹಾಗಾಗಿ ಅವರು ತಮ್ಮ ವಾದ್ಯಗಳನ್ನು ಬಾರಿಸುವ ಕಡ್ಡಿಗಳನ್ನು ಅವುಗಳ ಜಾಗಕ್ಕೆ ಸೇರಿಸಿ ಪಿಳಿಪಿಳಿ ಕಣ್ಣುಬಿಡುತ್ತ ನಿಂತಿದ್ದರು. ನಡು ನಡುವೆ ಮೈಕಿನಲ್ಲಿ ಇವತ್ತು ಹನ್ನೊಂದು ಗಂಟೆಗೆ ಮಾನ್ಯ ಶಾಸಕರಾದ ಕದುರಪ್ಪನವರು ಬರುವವರಿದ್ದಾರೆಂದೂ ಅವರು ಬಂದು ಕಾರ್ಯಕ್ರಮಗಳನ್ನು ನಡೆಸಿಕೊಡುವರೆಂದೂ ಸಮಸ್ತ ಭಕ್ತಾದಿಗಳು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಮ್ಮನವರ ಕೃಪಾಶೀರ್ವಾದಗಳನ್ನು ಪಡೆದುಕೊಳ್ಳಬೇಕೆಂದು ಹೇಳುತ್ತಿದ್ದುದನ್ನು ಕೇಳಿಸಿಕೊಂಡ ಹನುಮಂತಣ್ಣ ಆವಾಗ ಹೊಸ ಬಂಡುಪದಗಳನ್ನು ಹಾಡಿ ಅವರನ್ನು ಮೆಚ್ಚಿಸಬೇಕೆಂದುಕೊಂಡು ಕಾಯುತ್ತ ನಿಂತಲ್ಲೆ ನಿಂತುಕಂಡನು.
ಹನ್ನೆಲ್ಡೂವರಿಗೆ ಸರಿಯಾಗಿ ಶಾಸಕರಾದ ಕದುರಯ್ಯನವರು ತಮ್ಮ ಪತ್ನಿ ಮಾಳಮ್ಮನವರ ಸಮೇತ ದಢೂತಿ ಕಾರಿನಿಂದ ಕೆಳಗಿಳಿದರು. ಕದುರಪ್ಪನವರು ರೇಷ್ಮೆ ಪಂಚೆ ಉಟುಗಂಡು ಮೇಲೆ ರೇಷ್ಮೆ ಧೋತರ ಹೊದ್ದುಕೊಂಡಿದ್ದರು. ಅಂಗಿ ಹಾಕಿಕೊಂಡಿರಲಿಲ್ಲ. ಹಣೆಗೆ ಹುಬ್ಬಿನಿಂದ ಸೀದಾ ಮೂರು ಇಂಚು ಉದ್ದ ಕುಂಕುಮ ಇಟ್ಟುಕೊಂಡು ಶ್ರದ್ಧಾಭಕ್ತಿಗಳನ್ನು ನಟಿಸುತ್ತ ಮುಂದೆ ಬಂದರು. ಅವರ ಹೆಂಡತಿ ಮಾಳಮ್ಮನವರು ಉಟ್ಟಿದ್ದ ಭಾರಿ ರೇಷ್ಮೆ ಸೀರೆ ಸುತ್ತ ಇದ್ದ ಕರೆಂಟಿನ ಬೆಳಕಿಗೆ ಥಳಗುಟ್ಟುತ್ತಿತ್ತು. ದೊಡ್ಡ ಪದಕದ ಸರ ಸೀರೆಯ ಮೇಲಾಸಿ ಬಂದು ಅವರ ಎದೆಯನ್ನು ಆವರಿಸಿತ್ತು. ಅವರನ್ನೇ ಕಾಯುತ್ತ ನಿಂತಿದ್ದ ಗುಡಿಗೌಡ, ಪೂಜಾರ್ರು, ಯಜಮಾನ್ರು ಎಲ್ಲಾರ್ನು ಪಕ್ಕಕ್ಕೆ ಸರಿಸಿ ಎಂತೆಂಥದೋ ಕಳಸಗಳಿಗೆ ಇಳ್ಳೇದೆಲೆ ಸಿಕ್ಕಿಸಿಕೊಂಡು ತಟ್ಟೇಲಿಟ್ಟುಕಂಡು ಕಾಯುತ್ತಿದ್ದ ಬ್ರಾಹ್ಮಣರು ಮಂತ್ರಗಳನ್ನು ಹೇಳುತ್ತ ಶಾಸಕರು ಮತ್ತು ಅವರ ಹೆಂಡತಿಯ ಮೇಲೆ ಅಕ್ಕಿ ಕಾಳು ಹಾಕಿ ಸ್ವಾಗತ ಕೋರಿದರು. ಡೋಲು ನಾಗಸ್ವರದವರು ರಣಮೋಜಿನಿಂದ ಬಾರಿಸಿ ಸಂಭ್ರಮವನ್ನು ತೋರಿಸಿದರು. ದೇವರಗುಡಿ ಒಳಗೆ ಹೋಗಿ ಬಂದ ಶಾಸಕರು ಮತ್ತು ಅವರ ಹೆಂಡತಿಯನ್ನು ಯಜ್ಞಕುಂಡದ ಮುಂದೆ ಕೂರಿಸಿಕೊಂಡು ಉರಿಯುತ್ತಿದ್ದ ಬೆಂಕಿಗೆ ಏನೇನನ್ನೋ ಹಾಕಿಸುತ್ತಿದ್ದರು. ಅವರು ಹೇಳಿಕೊಟ್ಟದ್ದನ್ನು ಹೇಳುತ್ತ, ಇಂಥದ್ದು ಮಾಡಿ ಅಂದ್ರೆ ಅದನ್ನು ಮಾಡುತ್ತ ಶಾಸಕರು ಧನ್ಯತೆಯನ್ನು ಅನುಭವಿಸುತ್ತಿದ್ದರು. ಇನ್ನು ಮಾಳಮ್ಮನವರನ್ನಾದರೋ ಯಾಗ ಮಾಡುತ್ತಿದ್ದವರು ತಮ್ಮ ನಡುವೆ ಪ್ರತಿಷ್ಠಾಪನೆ ಮಾಡಿಕೊಂಡಿದ್ದರು. ಆಗಾಗ್ಗೆ ಅವರ ಕೈಲಿ ಯಾವ್ಯಾವುದೋ ವಸ್ತುವಿಶೇಷಗಳನ್ನು ಕೊಟ್ಟು ಅದನ್ನು ಬೆಂಕಿಗೆ ಹಾಕಲು ಹೇಳುತ್ತಿದ್ದರು. ಮಾಳಮ್ಮನವರು ಅವರು ಹೇಳಿದಾಗ ಅದನ್ನು ಎಸೆಯುತ್ತಿದ್ದರು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಇದೆಲ್ಲ ಸುಮಾರು ಹೊತ್ತು ನಡೆದು ಇನ್ನೇನು ಶಾಸಕರು ಈಗ ಸಮಸ್ತ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆಂದೂ ಎಲ್ಲರೂ ತಮ್ಮ ತಮ್ಮ ಜಾಗಗಳಲ್ಲಿ ಆಸೀನರಾಗಿ ದೇವಿಯ ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕೆಂದು ಲೌಡ್ ಸ್ಪೀಕರು ಹೇಳಿತು. ನಂತರ ಶಾಸಕರು ತಾವು ಉಟ್ಟಿದ್ದ ಆ ಫ್ಯಾನ್ಸಿ ಡ್ರೆಸ್ಸಿನಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಅಮ್ಮನವರ ದೇವಸ್ಥಾನ ಕಟ್ಟಲು ಶಾಸಕರ ನಿಧಿಯಿಂದ ಐವತ್ತು ಲಕ್ಷ ರೂಪಾಯಿಗಳನ್ನು ನಿಂತ ನಿಲುವಿನಲ್ಲಿಯೇ ಕೊಡುತ್ತಿರುವುದಾಗಿಯೂ, ಇದು ಸರ್ಕಾರಕ್ಕೆ ಸೇರಿರುವ ಮುಜರಾಯಿ ದೇವಸ್ಥಾನವಾಗಿರುವುದರಿಂದ ಇನ್ನು ಮೇಲೆ ಎಲ್ಲವನ್ನೂ ಶಾಸ್ರೋಕ್ತವಾಗಿ ನಡೆಸಿಕೊಂಡು ಹೋಗತಕ್ಕದ್ದೆಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟರು. ಇನ್ನುಮೇಲೆ ಈ ದೇವಸ್ಥಾನದ ಕೆಲಸ ಮಾಡುವ ಎಲ್ಲರಿಗೂ ಸರ್ಕಾರ ಸಂಬಳ ಗೊತ್ತು ಮಾಡುವುದಾಗಿಯೂ ಅದಕ್ಕಾಗಿಯೇ ತಾಸೀಲ್ದಾರರು ಕೂಡ ಬಂದಿದ್ದಾರೆಂದು ಈ ಸಭೆಯ ನಂತರ ಅವರು ಅದನ್ನು ಮಾಡುವರೆಂದೂ, ಎಲ್ಲರೂ ಸಹಕರಿಸಬೇಕೆಂದು ಕೋರಿಕೊಳ್ಳುತ್ತ ತಮ್ಮ ಮಾತನ್ನು ಮುಗಿಸಿದರು.
ತಕ್ಷಣ ಏನನ್ನೋ ಮರೆತಿದ್ದವರ ತರಾ ಮತ್ತೆ ಎದ್ದು ನಿಂತು ಭಕ್ತಾದಿಗಳು ಕ್ಷಮಿಸಬೇಕು. ಇನ್ನು ಮೇಲೆ ಈ ದೇವಸ್ಥಾನಕ್ಕೆ ಶ್ರೀ ವಲ್ಮೀಕೋದ್ಭವೆ ಆದಿಶಕ್ತಿ ಶ್ರೀ ಲಕ್ಷ್ಮೀಪರಮೇಶ್ವರಿ ಆಮ್ಮನವರ ದೇವಸ್ಥಾನವೆಂದು ಕರೆಯಲು ಇಲ್ಲಿಗೆ ಆಗಮಿಸಿರುವ ಎಲ್ಲ ವೇದಾಗಮ ಪಂಡಿತರು ಸೂಚಿಸಿರುತ್ತಾರೆ. ಇಂತಹ ಘನವಾದ ಹೆಸರನ್ನು ಸೂಚಿಸಿರುವ ಅವರಿಗೆ ಸಕಲ ಮರ್ಯಾದೆಗಳನ್ನು ಯಥೇಚ್ಛವಾಗಿ ನೆರವೇರಿಸಲು ಎಲ್ಲ ಭಕ್ತಾದಿಗಳಲ್ಲಿ ನನ್ನ ಕೋರಿಕೆ. ಮತ್ತೊಂದು ವಿಶೇಷ ಪ್ರಕಟಣೆ ಅದೇನೆಂದರೆ ಈ ದೇವಸ್ಥಾನದ ಪಕ್ಕದಲ್ಲಿಯೇ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿಸುವುದಾಗಿಯೂ, ದೇವಸ್ಥಾನ ಮುಗಿದು ಪ್ರಾರಂಭೋತ್ಸವಕ್ಕೆ ತಿರುಪತಿಯಿಂದ ತಿರುಮಲ ದೇವರನ್ನೇ ಕರೆಸಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ಮಾಡುವುದಾಗಿಯೂ, ತಿರುಪತಿಗೆ ಹೋಗಿ ಸ್ವಾಮಿಯ ದರ್ಶನ ಮಾಡಲಾಗದವರು ಇಲ್ಲಿಯೇ ತಿರುಮಲ ದೇವರ ದರ್ಶನ ಮಾಡಿ ಕೃತಾರ್ಥರಾಗಬಹುದೆಂದು ನುಡಿದಾಗ ಎದುರಿಗೆ ಇದ್ದ ಜನಂಜನವೆಲ್ಲಾ ಜೋರಾಗಿ ಚಪ್ಪಾಳೆ ತಟ್ಟಿ ಧನ್ಯವಾಯಿತು. ಕಾರ್ಯಕ್ರಮ ಮುಗಿದು ಶಾಸಕರು ತಮ್ಮ ಪತ್ನಿಯ ಜೊತೆ ಕಾರನ್ನು ಏರಿದರು. ಹಿಂದೆಯೇ ಹೋದ ತಾಸೀಲ್ದಾರರನ್ನು ಹತ್ತಿರ ಕರೆದು ಅದೇನೋ ಹೇಳುತ್ತಾ ಎಲ್ಲರ ಕಡೆಗೂ ಕೈಮುಗಿಯುತ್ತಾ ಕಾರಿನ ಧೂಳನ್ನು ಎಲ್ಲರಿಗೂ ಹಂಚಿ ಹೊರಟುಹೋದರು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಗುಡಿಗೌಡನನ್ನು ಪಕ್ಕಕ್ಕೆ ಕರೆದ ತಾಸೀಲ್ದಾರರು ವಾದ್ಯ ಮಾಡುವವರ ವಿವರಗಳನ್ನು ಕೇಳಿ ಕೇಳಿ ಬರೆದುಕೊಳ್ಳುತ್ತಿದ್ದರು. ಜೊತೆಗೆ ಹಿಂದೂಧರ್ಮದ ದೇವತೆಗಳನ್ನು ಅಶ್ಲೀಲ ಮಾತುಗಳಿಂದ ನಿಂದಿಸುವ ಪದ್ಧತಿ ಈ ದೇವಸ್ಥಾನದಲ್ಲಿ ಇದೆಯೆಂದೂ ಇದನ್ನು ತಡೆಗಟ್ಟಬೇಕೆಂದು ಯಾರೋ ತಾಸೀಲ್ದಾರರಿಗೆ ದೂರು ಕೊಟ್ಟಿದ್ದರು. ಆ ದೂರಿನ ವಿಚಾರಣೆಯನ್ನೂ ಆರಂಭಿಸಿದ್ದರು. ಬೇರೆ ಕೈವಾಡದಾರರ ವಿವರಗಳನ್ನು ದಾಖಲಿಸಿಕೊಂಡ ಅವರು ಆಸಾದಿಯ ವಿವರಗಳನ್ನು ತೆಗೆದುಕೊಳ್ಳುವಾಗ, ಆಸಾದಿ ಅಂದ್ರೇನು? ಅವಂದೇನು ಕೆಲಸ ಎಂದೆಲ್ಲ ವಿಚಾರಿಸಿದರು. ಸರಿಯಾಗಿ ಉತ್ತರ ಹೇಳಲು ಆಗದೆ ಕಡೆಗೆ ಆಸಾದಿಯನ್ನೆ ಕರೆದು ಕೇಳಿದರು. ಹನುಮಂತಣ್ಣ ತಾನು ಆಸಾದಿಯೆಂದೂ, ವಂಶಪಾರಂಪರ್ಯವಾಗಿ ಅಮ್ಮನಿಗೆ ಹಲಗೆ ಬಾರಿಸುವವನೆಂದೂ ಬಂಡುಪದಗಳನ್ನು ಹಾಡುವೆನೆಂದೂ ಹನುಮಂತಣ್ಣ ಹೇಳಿಕೊಂಡನು. ಬಂಡುಪದ ಅಂದ್ರೆ? ಎಂದು ಕೇಳಿದ ತಾಸೀಲ್ದಾರರಿಗೆ ಗೌಡ್ರು ಕಿವಿಯಲ್ಲಿ ಏನೋ ಹೇಳಿದರು.
ತಕ್ಷಣ ಮುಖ ಕಿವುಚಿಕೊಂಡ ತಾಸೀಲ್ದಾರ್ರು, ಆಸಾದಿಯನ್ನು ಕರೆದು, ‘ನೋಡಪ್ಪ ನೀನು ಕೈವಾಡದಾರರ ಪಟ್ಟಿಯಲ್ಲಿ ಬರಲ್ಲ. ನೀನೇನಿದ್ರೂ ಜನಪದ ಕಲಾವಿದ ಅಂತಾ ಕರೆಸಿಕೊಳ್ಳಬಹುದು. ಅರುವತ್ತು ವರುಷ ವಯಸ್ಸಾಗಿದ್ರೆ ನಿನಗೆ ಜನಪದ ಕಲಾವಿದ ಅಂತಾ ಪಿಂಚಣಿಗೆ ರೆಕಮೆಂಡ್ ಮಾಡ್ಬೌದೇ ವಿನಾ ಕೈವಾಡದಾರನೆಂದು ಸಂಬಳ ಕೊಡಂಗಿಲ್ಲ. ಇನ್ನೊಂದು ಆದೇಶ ಏನೂಂದ್ರೆ ಇನ್ನು ಮುಂದೆ ಮುಜರಾಯಿ ದೇವಸ್ಥಾನದ ಎದುರಿಗೆ ಯಾವುದೇ ತರದ ಆಶ್ಲೀಲ ಪದಗಳನ್ನು ಹಾಡುವಂತಿಲ್ಲ. ಹಂಗೇನಾದರೂ ಹಾಡಿದರೆ ಕಾನೂನುಕ್ರಮ ತಗೋಬೇಕಾಗುತ್ತೆ ಹುಷಾರ್’ ಎಂದು ಎಚ್ಚರಿಸಿದರು. ಆಕಾಶವೇ ತಲೆಯ ಮೇಲೆ ಕವುಚಿದಂಗಾಗಿ ಅಲ್ಲೇ ಕುಸಿದು ಕುಂತ ಹನುಮಂತಣ್ಣನನ್ನು ಕಂಡ ತಾಸೀಲ್ದಾರರು ಏನಾದ್ರು ಹೆಚ್ಚು ಕಮ್ಮಿಯಾದ್ರೆ ನನ್ನ ತಲೆ ಮೇಲೆ ಬರುತ್ತೆ ಅಂತ, ಅವನಿಂದ ಅದೇನೇನೋ ಅರ್ಜಿ ಬರೆಸಿಕೊಂಡು ಹೆಬ್ಬೆಟ್ಟು ಒತ್ತಿಸಿಕೊಂಡು ಇಂತಾದಿನ ನೀನು ಕನ್ನಡ ಸಂಸ್ಕೃತಿ ಇಲಾಖೆಯ ಎದುರಿಗೆ ಹಾಜರಾಗಿ ನಿನ್ನ ಕಲೆಯ ಪ್ರದರ್ಶನ ಮಾಡಿದರೆ, ನೀನು ಸಾಯೋ ತಂಕ ಪಿಂಚಣಿ ತಗಬೌದು ಎಂದು ಆಸೆ ಹುಟ್ಟಿಸಿ ಏನೂ ಬೇಜಾರಾಗಬೇಡ, ನಾನೂ ಕಾನೂನು ಪಾಲಿಸಬೇಕಲ್ವಾ? ನೀನು ಇಂತಾ ದಿನ ನಮ್ಮ ಆಪೀಸಿಗೆ ಬಾ ಕಮಿಟಿ ಸೇರಿರುತ್ತೆ. ನಿಮ್ಮ ಪಿಂಚಣಿ ತೀರ್ಮಾನನ ಅದು ಮಾಡುತ್ತೆ ಎಂದು ಹೇಳಿ ಹೊರಟುಹೋದರು.
ಹನುಮಂತಣ್ಣನಿಗೆ ಒಮ್ಮೆಗೇ ಯಾಕೋ ತಾನು ದಿಕ್ಕಿಲ್ಲದವನಾದೆನೆಂದೆನಿಸಿತು. ಉಳಿದ ವಾದ್ಯದವರ ಕಡೆಗೆ ಕಂಗಾಲಾಗಿ ನೋಡಿದ. ಅವರಿಗೂ ಏನು ಹೇಳಲು ತೋಚದೆ ನೀರು ತುಂಬಿದ ಕಣ್ಣುಗಳನ್ನು ಎತ್ತೆತ್ತಗೋ ತಿರುಗಿಸಿದರು. ಕಡೆಗೆ ತಳವಾರ್ರ ಹನುಮನಾಯಕ ‘ಅದ್ಯಾಕ್ಲ ಹನುಮಾ, ಹಂಗೆ ಆಕಾಸವೇ ತಲೆಮೇಲೆ ಬಿದ್ದನಂಗಾಡ್ತೀಯ. ಅವರು ಸಂಬಳ ಕೊಟ್ಟರೆಷ್ಟು ಬಿಟ್ಟರೆಷ್ಟು, ಆ… ಮ್ಯಾಗಳ ಸಂಬಳ ತಗಂಡೇ ಬದುಕಬೇಕೇನ್ಲ. ನಡಿ ಅದೇನು ಪಿಂಚಣಿಯೋ ಅದೇನೋ ಅದುನ್ನೂ ನೋಡಿಬಿಡಾಣ’ ಎಂದು ಎಬ್ಬಿಸಿ ಕರೆದುಕೊಂಡು ಹೋದ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ತಾಸೀಲ್ದಾರರು ತಿಳಿಸಿದ್ದ ದಿನಾಂಕದಂದು ತಳವಾರ ಹನುಮನಾಯಕನೇ ಹನುಮಂತಣ್ಣನನ್ನು ಅವರ ಆಪೀಸಿಗೆ ಕರೆದುಕೊಂಡು ಹೋದ. ಅನೇಕ ಜನಪದ ಕಲಾವಿದರು ಅಲ್ಲಿ ಆಗಲೇ ಸೇರಿದ್ದರು. ತಮ್ಮ ತಮ್ಮ ಸಾಂಪ್ರದಾಯಿಕ ವೇಷವನ್ನು ಹಾಕಿಕೊಂಡು ಬಂದವರೂ ಕೆಲವರಿದ್ದರು. ಹನುಮಂತಣ್ಣನೂ ಹಲಗೆ ತೆಗೆದುಕೊಂಡು ತಲೆಗೊಂದು ಕೆಂಪಿನ ಸೀರೆಯನ್ನು ಸುತ್ತಿಕೊಂಡು ಬಂದಿದ್ದ. ಮನೆಯಿಂದ ಹೊರಡುವ ಮುನ್ನ ಹೆಂಡತಿ ‘ಮನೇಲಿ ಓದ್ತಾ ಇರೋ ಮಗಾ ಇದಾನೆ. ಅವನಿಗೇನಾರ ಒಂದು ನೇರ್ಪು ಮಾಡಬೇಕು ಅಂದ್ರೆ ಅಷ್ಟೋ ಇಷ್ಟೋ ದುಡ್ಡು ಬಂದರೆ ಸಾಧ್ಯ. ಹೆಂಗಾರ ಮಾಡಿ ಪಿಂಚಣಿ ಬರಂಗೆ ಕೇಳ್ಕಳಿ’ ಎಂದು ಹೇಳಿ ಕಳಿಸಿದ್ದಳು. ‘ಆಸಾದಿ ಹನುಮಂತಣ್ಣ ಯಾರ್ರಿ? ಒಳಗೆ ಬನ್ನಿ’ ಎಂದು ಜಮಾದಾರ ಕರೆದದ್ದಕ್ಕೆ ಹನುಮಂತಣ್ಣ ನಾನೇ ಸ್ವಾಮಿ ಎನ್ನುತ್ತ ಒಳಗೆ ಹೋದ. ದೊಡ್ಡ ಮೇಜಿನ ಸುತ್ತ ಐದಾರು ಜನ ದೊಡ್ಡ ಮನುಷ್ಯರು ಕೂತಿದ್ದರು. ಇಬ್ಬರು ದಢೂತಿ ಹೆಂಗಸರೂ ಇದ್ದರು. ಒಳಗೆ ಬಂದ ಹನುಮಂತಣ್ಣನನ್ನು ಕೂತ್ಕಳಪ್ಪ ಅಂದ್ರು, ಇವನು ಕೂರದೆ ಪರ್ವಾಗಿಲ್ಲ ಸ್ವಾಮಿ ಎಂದು ನಿಂತೇ ಇದ್ದ. ಇವನ ಹೆಸರು ಜಾತಿ ಊರು ಎಲ್ಲ ಬರಕಂಡ ಮೇಲೆ,
‘ನಿನ್ನದು ಯಾವ ಕಲೆ?’ ಎಂದು ಕೇಳಿದರು.
‘ನಾನು ಅಮ್ಮನಗುಡಿಯ ಆಸಾದಿ ಸ್ವಾಮಿ’.
‘ಅಂಗಂದ್ರೆ ಏನಪ್ಪ?’
‘ಅಮ್ಮನ ಎದುರಿಗೆ ಹಲಗೆ ಬಾರಿಸುತ್ತ ಹೊಗಳಿಕೆ ಪದ, ಬಂಡುಪದ ಹಾಡೋದು ಸ್ವಾಮಿ’.
‘ಎಲ್ಲಿ ಹಾಡಿ ತೋರಿಸು’.
‘ಯಾವುದು ಹಾಡಲಿ ಸ್ವಾಮಿ, ಹೊಗಳಿಕೆ ಪದಾನೋ? ಬಂಡುಪದಾನೋ?’
‘ಬಂಡುಪದಾ ಅಂತಾ ಅದೇನೋ ಅಂದ್ಯಲ್ಲ ಅದುನ್ನ ಹಾಡು’ ಅಂತಾ ಒಬ್ಬ ದಢೂತಿ ಹೆಂಗಸು ಅಂತು.
ಮೂರು ಸಲ ತಮ ತಮ ಹಲಗೆ ಬಾರಿಸಿದ ಹನುಮಂತಣ್ಣ,
‘ನಿನ ಸಟ್ಟಾದಾಗ ಏನಾತು ಅವರ್ಕೆ ಬಾರೆ ನನತಂಗಿ
ಅವರ್ಕೆಗೆ ಬಾರದ ನನತಂಗಿ ಸರದಾನು.’
ಎಂದು ಸ್ವರವೆತ್ತಿ ಹಾಡಿದ. ಇನ್ನೊಂದು ಪದಕ್ಕೆ ಹಲಗೆ ಬಡಿದು ಸ್ವರವೆತ್ತುವ ಹೊತ್ತಿಗೆ ಲಾಠಿಜಾರ್ಜು ಆದಂತೆ ಗಾಬರಿಯಿಂದ ಆ ದಢೂತಿ ಹೆಂಗಸರು ಅಲ್ಲಿಂದ ಸಿಕ್ಕ ಸಿಕ್ಕ ಬಾಗಿಲಿನಿಂದ ಹೊರಹೋಗಿಬಿಟ್ಟರು. ತಾಸೀಲ್ದಾರರು ಹನುಮಂತಣ್ಣನನ್ನು ಕೆಕ್ಕರುಗಣ್ಣಿನಿಂದ ನೋಡುತ್ತ ‘ಇದನ್ನೇ ಏನಯ್ಯಾ ನೀನು ಕಲ್ತಿರೋದು? ಇದನ್ನೆಲ್ಲ ದೇವರ ಮುಂದೆ ಬ್ಯಾರೆ ಹಾಡ್ತೀನಿ ಅಂತೀಯಲ್ಲ? ಇದುನ್ನ ಹಾಡದಿಕ್ಕೆ ನಿನಗೆ ಪಿಂಚಣಿ ಬೇರೆ ಕೊಡಬೇಕಾ?’ ಎಂದು ಗದರಿ ನಿಲ್ಲಿಸುವಂತೆ ಹೇಳಿದರು. ಹನುಮಂತಣ್ಣ ಗಾಬರಿಯಿಂದ ‘ಇಲ್ಲಾ ಸ್ವಾಮಿ ನಾನು ಅಮ್ಮನ ಹೊಗಳಿಕೆ ಪದಗಳನ್ನೂ ಹಾಡ್ತೀನಿ. ನನ್ನ ಹೊಟ್ಟೆ ಮೇಲೆ ಒಡೀಬೇಡಿ ಸ್ವಾಮಿ’ ಎಂದು ಸೀದಾ ಅಲ್ಲಿದ್ದವರ ಕಾಲಿಗೇ ಬಿದ್ದುಬಿಟ್ಟ. ಅವನ ಗೋಳಾಟ ನೋಡಲಾರದೆ ಜಾನಪದ ಅಕಾಡಮಿ ಅಧ್ಯಕ್ಷರಾದ ಪಿಚ್ಚಳ್ಳಪ್ಪನವರು ‘ನೋಡಿ ನಮ್ಮ ಕಲಾವಿದರಲ್ಲಿ ಇಂತದ್ದೆಲ್ಲಾ ಇರುತ್ತೆ. ಅಂದ ಮಾತ್ರಕ್ಕೆ ಅದನ್ನೆಲ್ಲ ಶೀಲ ಅಶ್ಲೀಲ ಅಂತಾ ನೋಡಕ್ಕಾಗಲ್ಲ. ಹೋಗಲಿ ಒಂದೆರಡು ಹೊಗಳಿಕೆ ಪದ ಹಾಡು ಹನುಮಂತಣ್ಣ’ ಎಂದು ಎಲ್ಲವನ್ನು ತಿಳಿಯಾಗಿಸಲು ನೋಡಿದರು. ಹನುಮಂತಣ್ಣ ಮತ್ತೆ ಹಲಗೆ ಸರಿಮಾಡಿಕೊಂಡು ತಮ ತಮ ಬಾರಿಸಿ,
‘ಹಸಿಬೇವಿನ ಕಡ್ಡಿ ರಸಬಿಟ್ಟು ತೆಯ್ವಾಗ ಅಸುಮಕ್ಕಳು ಕೆಂಡ ತುಳಿವಾಗ
ಅಸುಮಕ್ಕಳು ಕೆಂಡ ತುಳಿವಾಗ ಪಿಳೇಗಿನಮ್ಮ ಹುಸಿನಗೆ ನಗುತಾ ಬರುತಾಳೆ.
ತೇರಿನ ಮುಂದಿನವಳೆ ಯಾರ್ಯಾರ ನೋಡಿದೆಯೆ ತೇರಿನ ಮುಂದಾಡೋ ಚೆಲುವಾರು
ತೇರಿನ ಮುಂದಾಡೋ ಚೆಲುವಾ ಈರಣ್ಣನ ತೋಳಿನ ಮೇಲಿಟ್ಟು ಹಸುದೇವು.
ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು
‘ಸಾಕು ಬಿಡು ಹನುಮಂತಣ್ಣ. ಇನ್ನು ಮೇಲೆ ಒಂದು ಕೆಲಸಾ ಮಾಡು. ಇನ್ನಷ್ಟು ಹೊಗಳಿಕೆ ಹಾಡುಗಳನ್ನೆ ಕಲಿತುಕೊಂಡು ಅಮ್ಮನ ಗುಡಿ ಮುಂದೆ ಹಾಡು. ಬೇರೆ ಏನೂ ಹಾಡಬೇಡ. ಹಂಗಾದ್ರೆ ಮಾತ್ರ ನಿನಗೆ ಪಿಂಚಣಿ ಕೊಡಬೌದು ಅಂತಾ ಸಿಫಾರ್ಸು ಮಾಡ್ತೀವಿ. ಆಗಬೌದಾ?’ ಎಂದು ಪಿಚ್ಚಳ್ಳಪ್ಪನವರು ಹೇಳಿದಾಗ ಹನುಮಂತಣ್ಣನಿಗೆ ಏನೂ ತೋಚದೆ ಕತ್ತು ಕೆಳಗೆ ಹಾಕಿದ. ನೂರಾರು ಪದ ಹಾಡಿದರೂ ಎಂದು ದಣಿಯದ ಹನುಮಂತಣ್ಣನಿಗೆ ಇಂದು ಅಸಾಧ್ಯವಾದ ದಣಿವಾಗಿತ್ತು. ಹನುಮನಾಯಕನ ಜೊತೆಗೆ ಸಪ್ಪಗೆ ಊರಿಗೆ ಬಂದ ಹನುಮಂತಣ್ಣ ಮನೆಗೆ ಬಂದು ಹಲಗೆ ನೇತುಹಾಕಿ ‘ಕುಡಿಯಾಕಿಷ್ಟು ನೀರು ತತಾರೆ’ ಎಂದು ಹೆಂಡತಿಗೆ ಅಂದವನೆ ಗೋಡೆಗೆ ಒರಗಿ ಕೂತುಗಂಡ. ಗೋಡೆಯ ಇನ್ನೊಂದು ಗೂಟದಲ್ಲಿ ನೇತಾಡುತ್ತಿದ್ದ ಮಗನ ಪುಸ್ತಕದ ಚೀಲ ಅಣಕಿಸಿ ನಕ್ಕಂತೆ ಕೇಳಿಸಿತು. ಅಂತದ್ದೇ ನಗು ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿತ್ತು. ಕಣ್ಣ ತುಂಬ ನೀರು ತುಂಬಿಕೊಂಡ ಗಂಡನಿಗೆ ಕೆಂಪಮ್ಮ ಚೆಂಬಿನ ತುಂಬ ನೀರು ಕೊಟ್ಟಳು. ಹೆಂಡತಿ ತಂದುಕೊಟ್ಟ ತಂಬಿಗೆ ನೀರನ್ನು ಒಮ್ಮೆಗೇ ಎತ್ತಿದಾಗ ಒಂದಷ್ಟು ಒಳಗೆ ಇನ್ನೊಂದಷ್ಟು ಹೊರಗೆ ಚೆಲ್ಲಿ ಹನುಮಂತಣ್ಣನ ಎದೆಯ ಮೇಲೆ ಇಳಿದು ಹೋದವು.
(ಕೃಪೆ: ತುಂಬೆ ಹೂವು, ಸಂ: ಡಾ. ಕರೀಗೌಡ ಬೀಚನಹಳ್ಳಿ, ಪ್ರ: ಕಿರಂ ಪ್ರಕಾಶನ, ಬೆಂಗಳೂರು)

ಡಾ. ಎಸ್. ನಟರಾಜ ಬೂದಾಳು(1958): ಕನ್ನಡ ಸಾಹಿತ್ಯದಲ್ಲಿ ಎಂಎ ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡದ ಪ್ರಮುಖ ಸಾಹಿತಿ, ಸಂಶೋಧಕ ಮತ್ತು ಬೌದ್ಧ ತಾತ್ವಿಕ ಚಿಂತಕ. ಇವರು ಕಾವ್ಯ ಮೀಮಾಂಸೆ, ಸಂಸ್ಕೃತಿ ಮೀಮಾಂಸೆ, ತೌಲನಿಕ ವಿಮರ್ಶೆ, ಬೌದ್ಧ ಸಾಹಿತ್ಯ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿದ್ದಾರೆ. ‘ಬುದ್ಧ ನಡೆ’ ಸರಣಿಯಡಿ- ಬೌದ್ಧ ಮಧ್ಯಮ ಮಾರ್ಗ, ಪ್ರಜ್ಞಾಪಾರಮಿತ ಹೃದಯಸೂತ್ರ, ಲಾವ್ ತ್ಸು – ದಾವ್ ದ ಜಿಂಗ್ ಸೂತ್ರಗಳು, ಪ್ರತೀತ್ಯ ಸಮುತ್ಪಾದ, ಬುದ್ಧ- ಬೌದ್ಧ ತಾತ್ವಿಕತೆಯ ಸರಳವಾಚಿಕೆ, ಬುದ್ಧವಚನ- ಆರ್ಯದೇವನ ನಾನ್ನೂರು ವಚನಗಳು, ಈ ಕ್ಷಣದ ಶಕ್ತಿ – ಮನಮಗ್ನತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಮಿಲಿಂದ ಪ್ರಶ್ನೆ’ ಬೌದ್ಧ ಕೇಂದ್ರ ತಾತ್ವಿಕತೆಯನ್ನು ಚರ್ಚಿಸುವ ಪ್ರಸಿದ್ಧ ಸಂವಾದಾತ್ಮಕ ಕೃತಿಯ ವಿಶ್ಲೇಷಣೆ. ಬೌದ್ಧ ಧರ್ಮವನ್ನು ಕೇವಲ ಒಂದು ಮತವಾಗಿ ನೋಡದೆ, ಅದನ್ನೊಂದು ವೈಜ್ಞಾನಿಕ ಮತ್ತು ಜೀವನಮುಖಿ ತತ್ವಶಾಸ್ತ್ರವಾಗಿ ಅವರು ಕಟ್ಟಿಕೊಡುತ್ತಾರೆ. ‘ಹಿಂದಣ ಹೆಜ್ಜೆಯನರಿತಲ್ಲದೆ’ ತತ್ವಪದ ಹಾಗೂ ವಚನ ಚಳವಳಿಗಳ ಬೇರುಗಳನ್ನು ಹುಡುಕುವ ವಿಶಿಷ್ಟ ಕೃತಿ. ‘ಸರಹಪಾದ’ (ಸಿದ್ಧ ಪರಂಪರೆಯ ಪ್ರಮುಖರಲ್ಲಿ ಒಬ್ಬರಾದ ಸರಹಪಾದನ ದೋಹೆಗಳನ್ನು ಕನ್ನಡಕ್ಕೆ ತಂದಿದ್ದಾರೆ) ಕೃತಿಯ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ‘ನಾಗಾರ್ಜುನನ ಮೂಲಮಾಧ್ಯಮಕಕಾರಿಕಾ’ ಶೂನ್ಯವಾದದ ಪ್ರತಿಪಾದಕ ನಾಗಾರ್ಜುನನ ಕೃತಿಯ ಪ್ರಮುಖ ಅನುವಾದ ಹಾಗೂ ವಿಶ್ಲೇಷಣೆ. ಕರ್ನಾಟಕ ಸರ್ಕಾರದ ‘ಸಮಗ್ರ ತತ್ವಪದ ಸಾಹಿತ್ಯ’ ಯೋಜನೆಯ ಮುಖ್ಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ‘ಕನ್ನಡ ಕಾವ್ಯಮೀಮಾಂಸೆ’, ‘ಸಂಸ್ಕೃತಿ ಮೀಮಾಂಸೆ’ ಕೃತಿಗಳ ಜೊತೆಗೆ ಇವರು ಹಲವು ಬಿಡಿ ಕತೆಗಳನ್ನು ರಚಿಸಿದ್ದಾರೆ. ಇವರಿಗೆ ಪುತಿನ ಕಾವ್ಯ ಪ್ರಶಸ್ತಿ, ವೀಚಿ ಸಾಹಿತ್ಯ ಪ್ರಶಸ್ತಿ, ಜೆಎಸ್ಸೆಎಸ್ ಪ್ರಶಸ್ತಿಗಳು ಸಂದಿವೆ. ನಿವೃತ್ತ ಪ್ರಾಧ್ಯಾಪಕರಾಗಿದ್ದು, ತುಮಕೂರಿನಲ್ಲಿ ನೆಲೆಸಿದ್ದಾರೆ.




