ಉಡುಪಿ ಜಿಲ್ಲೆಯ ಕುಂದಾಪುರದ ಕೋಟೇಶ್ವರದಲ್ಲಿ ನೂತನವಾಗಿ ಆರಂಭಗೊಂಡ ಚಿರಂತನ ಶಿಕ್ಷಣ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಸಮಾಜದಲ್ಲಿನ ಕಡುಬಡತನದಲ್ಲಿರುವವರನ್ನು ಮೇಲೆತ್ತುವ ಕಾರ್ಯ ಮಾಡುವವರನ್ನು ದೇವರು ಮೆಚ್ಚುತ್ತಾನೆ ಎಂದ ಅವರು, ಸಂಸ್ಥಾಪಕಿ ಡಾ. ಚಿಂತನಾ ರಾಜೇಶ್ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಸಾಧನೆ ಮಾಡುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಲೋಚನಾ ಸರ್ವೋತ್ತಮ ಶೆಟ್ಟಿ ವಹಿಸಿದ್ದರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ಮಾನಸಿಕ ತಜ್ಞ ಹಾಗೂ ಆಡಳಿತ ನಿರ್ದೇಶಕ ಡಾ. ಪ್ರಕಾಶ್ ತೊಳಾರ್ ಮಾತನಾಡಿ, ನರ್ಸರಿಯಿಂದ ಪಿಯುವರೆಗಿನ ಮಕ್ಕಳಿಗೆ ಉತ್ತಮ ತರಬೇತಿ ಅಗತ್ಯವಿದೆ ಎಂದರು.
ಮಕ್ಕಳಲ್ಲಿ ಇರುವ ಕಲಿಕಾ ತೊಂದರೆಗಳನ್ನು ಶಿಕ್ಷಕರು ಗುರುತಿಸಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು. ಪೋಷಕರು ತಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಬಾರದು ಎಂದು ಸಲಹೆ ನೀಡಿದರು.
ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಸರಿಯಾದ ಮಾರ್ಗದರ್ಶನ ನೀಡುವುದು ಮುಖ್ಯ. ಪ್ರತಿಯೊಬ್ಬ ಮಕ್ಕಳಲ್ಲಿಯೂ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸುವ ಜವಾಬ್ದಾರಿ ಶಿಕ್ಷಕರದು ಎಂದು ಹೇಳಿದರು.
ಮನೆಯಲ್ಲಿಯೇ ಮೊಬೈಲ್‌ರಹಿತ ಸಮಯ ಇರಬೇಕು. ಮಕ್ಕಳಿಗೆ ಹಣ ನೀಡುವಾಗ ಅದರ ಬಳಕೆಯ ಮೇಲೂ ಪೋಷಕರು ಗಮನ ಹರಿಸಬೇಕು ಎಂದು ಅವರು ತಿಳಿಸಿದರು.
ಶಿಕ್ಷಕರ ತರಬೇತಿ ಕೇಂದ್ರವನ್ನು ಮೊಳಹಳ್ಳಿ ಕಮಲಕಿಶೋರ್ ಹೆಗ್ಡೆ ಉದ್ಘಾಟಿಸಿದರು.
ಸಂಸ್ಥೆಯ ಸಂಸ್ಥಾಪಕಿ ಡಾ. ಚಿಂತನಾ ರಾಜೇಶ್ ಮಾತನಾಡಿ, ಕುಟುಂಬದ ಸಹಕಾರ ಮತ್ತು ತಂಡದ ಪ್ರಯತ್ನದಿಂದ ಸಂಸ್ಥೆ ಆರಂಭವಾಗಿದೆ ಎಂದರು.
ಗುಣಮಟ್ಟದ ಶಿಕ್ಷಣ, ಸೇವೆ ಹಾಗೂ ಅರ್ಥಪೂರ್ಣ ಪ್ರಯತ್ನ ಸಂಸ್ಥೆಯ ಧ್ಯೇಯವಾಗಿದೆ. ಮಕ್ಕಳಿಗೆ ವಿಶೇಷ ಕ್ಯಾಂಪಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಎರಡು ಬ್ಯಾಚ್‌ಗಳು ಪೂರ್ಣಗೊಂಡಿದ್ದು, ತರಬೇತಿ ಪಡೆದವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಶಿಕ್ಷಕರ ಕೌಶಲ್ಯಾಭಿವೃದ್ಧಿ ಕೇಂದ್ರದ ಜೊತೆಗೆ ಮಕ್ಕಳ ಹಾಗೂ ಹದಿಹರೆಯದವರ ಮಾರ್ಗದರ್ಶನ ಕೇಂದ್ರವನ್ನಾಗಿಸುವ ಉದ್ದೇಶವೂ ಇದೆ. ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಿರುವ ವಿದ್ಯಾರ್ಥಿಗಳಿಗೆ ಮುಂದುವರಿಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಚಿರಾ ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲರಾದ ವಿನುತಾ ಶೆಟ್ಟಿ ವಂದಿಸಿದರು. ನಿವೃತ್ತ ಶಿಕ್ಷಕ ದಿನಕರ ಶೆಟ್ಟಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.





